ಶ್ರೀ ವಿಜಯದಾಸಾರ್ಯ ವಿರಚಿತ ತಾಮ್ರಪರ್ಣಿಯ ಮಹಾತ್ಮ್ಯೆಯನ್ನು ವರ್ಣಿಸುವ ಸುಳಾದಿ
ರಾಗ : ಪೂರ್ವಿಕಲ್ಯಾಣಿ
ಧ್ರುವತಾಳ
ಲೋಕಾದೊಳಗೆ ಸಾಧನಬೇಕೆಂಬೊ ಮಹಾತ್ಮರು
ಲೌಕಿಕವನ್ನೆ ಬಿಟ್ಟು ಏಕಮನದಲ್ಲಿ
ಸಾಕಾರಾ ಭಕುತಿಯಲ್ಲಿ ಶ್ಲೋಕಾರ್ಥವನ್ನೆ ತಿಳಿದು
ಶೋಕಂಗಳೀಡಾಡಿ ಜೋಕೆಯಿಂದ
ಭೀಕರಗೊಳಿಸುವ ವಾಕು ಮರೆದು ವಿ -
ವೇಕತನದಲ್ಲಿ ಈ ಕಲಿಯೊಳಗೆ
ವೈಕುಂಠಪುರದ ಬಯಕೆ ಉಳ್ಳವರು ಶ್ರೀ
ವೈಕುಂಠ ಯಾತ್ರಿಯ ಮಾಡಿರೆಂದೂ
ವೈಕುಂಠ ನಾಮಾ ನಮ್ಮ ವಿಜಯವಿಠಲ ನಿಜ
ವೈಕುಂಠಪುರದಿಂದ ಇಲ್ಲಿ ಮೆರೆದ
ಮಟ್ಟತಾಳ
ತ್ರಿಜಗದೊಳಗೆ ತನ್ನ ಭಜಿಸುವ ಭಕ್ತರಿಗೆ
ಭಜನೆಗೆಡದಂತೆ ನಿಜವರ ಕೊಡುವಲ್ಲಿ
ಅಜಹರ ಗೀರ್ವಾಣ ವ್ರಜದೊಳಗಾನೆಂದು
ಭುಜಗಾಧಿಪಶಯನ ವಿಜಯವಿಠಲರೇಯಾ
ವಿಜಯಾಸನವಿಟ್ಟ ಮನಭಾಪುರೆ ಈತ
ರೂಪಕತಾಳ
ಇಲ್ಲಿಗೆ ಬಂದವರಾ ನಿಲ್ಲದಲೆ ಸಾಕುವೆ
ನಲ್ಲಾದಲ್ಲಿದಲೆ ಬಿಡೆನೆಂಬಾ ಹರುಷದಲ್ಲಿ
ಎಲ್ಲಾ ಲೋಕಗಳೆಲ್ಲಾ ಅಲ್ಲಿಗಲ್ಲಿಗೆ ಸುತ್ತಿ
ಎಲ್ಲಕಧಿಕವೆಂದು ಮೆಲ್ಲಮೆಲ್ಲನೆ ಬಂದು
ಬಲ್ಲಿದಾ ಭೂಮಿಪಾಲಕ ವಿಜಯವಿಠಲಾ
ಬಲ್ಲವರಾಡಿದ ಸೊಲ್ಲುಪಾಲಿಸುವನೂ
ಝಂಪೆತಾಳ
ಗೀರ್ವಾಣ ಮೊದಲಾದ ತೃಣಜೀವರಿಗಳಿಗೆ
ನಿರ್ವಾಣವನು ಕೊಡುವೆ ನಾನೆ ಎಂದೂ
ಊರ್ವಿಯೊಳಗೆ ಒಂದನ್ಯಥಾವಿಲ್ಲೆಂದು
ಪರ್ವತದರೂವಂತೆ ಬಿರಿದು ಹೊಯ್ದೂ
ಸರ್ವರೊಳು ಕರ ನೆಗಹಿ ಸಾರಿಸಾರಿರೆಂದು
ಸಾರ್ವಭೌಮ ವಿಜಯವಿಠಲ ದೇವೇಶ
ಸರ್ವೋತ್ತಮಾನೆನಲು ಸರ್ವಸಂಪದವೀ
ತ್ರಿವಿಡಿತಾಳ
ಇಂದು ನುಡಿದವರ ಶಾಂತದಿಂದಲಿ ನೋಡಿ
ಕಾಂತರವೆಂಬೊ ಪಾಪವನೆ ಸವರಿ
ಪಿತನ ದುಃಖಾ ಪರಿಹರಿಸಿ ಅನುದಿನ
ಸಂತೋಷವನೆ ಕೊಡುವೆ ಮರೆಯಾದಂತೆ
ಕಂತುಜನಕ ಅಬ್ಜಲೋಚನ ವಿಜಯವಿಠಲಾ
ಸಂತರಿಸುವನು ಇಹಪರದಲ್ಲಿ ಒಲಿದೂ
ಮಟ್ಟತಾಳ
ಸಪುತ ದ್ವೀಪದೊಳು ನಂಬಿದ ಜನರಿಗೆ
ಅಪರಿಮಿತವಾಗಿ ಪಾಪವು ಬಂದಿರೆ
ಕೃಪಣನು ನಾನೆಂದು ಒಮ್ಮೆ ನೆನಿಸಿದಡೆ
ಕೃಪೆಮಾಡಿ ಅವರ ಪಾಪವೆಂಬವಿತ್ತ
ಅಪಹರಿಸಿ ಶುದ್ಧಾತ್ಮರನುಮಾಡುವ
ಚಪಳ ಚೋಳಾನಾಟ್ಯ ವಿಜಯವಿಠಲರೇಯಾ
ವಿಪುಳದೊಳಗೆ ಬಲ್ಲಿದನಾಗಿ ಮೆರೆದ
ಝಂಪೆತಾಳ
ಅನಂತ ಮಹಿಮನು ಅನಂತ ಅವತಾರ
ದಾನಿಗಳರಸ ನಿಧಾನ ಪುಣ್ಯ ಪುರುಷ
ಈ ನದಿಯಲಿ ಬಂದು ಸ್ನಾನಾದಿಗಳ ಮಾಡಿ
ಜ್ಞಾನಿ ಆದವ ಬಂದು ಏನೇನು ಅರ್ಪಿಸಲು
ತಾನೊಲಿದು ಪುಣ್ಯನಿಕ್ಷೇಪ ಮಾಡಿಕೊಟ್ಟು
ಅನಂತ ಜನುಮಕ್ಕೆ ಉಣಿಸಿ ಉಡಿಸುವನೂ
ಶ್ರೀನಾಥ ವಿಜಯವಿಠಲ ನಿಕ್ಷೇಪಸ್ವಾಮಿ
ತಾನಾಗಿ ತಾರತಮ್ಯದಿಂದ ಕಾಯ್ವಾ
ಅಟ್ಟತಾಳ
ಭಕುತ ನಿಕರ ಬಲು ಸುಖಬಡುವಂತೆ ಸಿ
ದ್ಧಾತ್ಮರನ್ನಾ ಮಾಡಿ ಪರಕ್ಕೆ ಕರದೊಯ್ದಲ್ಲಿ
ಮಕರಕುಂಡಲ ಮಹಾ ಮಹಾ ಮಕುಟ ವಿಹಾರ ಪ -
ದಕ ನಾನಾಭರಣ ಕರಕೆ ಶಂಖ ಚಕ್ರ ರೂ -
ಪಕನಾಗಿ ತನ್ನಂತೆ ಅಕಳಂಕನಾಗಿ ಉರಕೆ ಸಿರಿ ಇಲ್ಲದೆ
ಮುಕುತನ್ನ ಮಾಡುವೆ ಮುಕುತಾರ್ಥಾವೆಂದು
ಮಕರಾಯುತ ಕರ್ನಪಾಶ ವಿಜಯವಿಠ -
ಲ ಕುಟಿಲಾ ಹೃದಯಾ ಕರ್ನಿಕೆ ಕಂಜಾವಾಸ
ಆದಿತಾಳ
ಚತುರದಿಕ್ಕಿನೊಳಗೆ ಚತುರಸಾಗರ ಮಧ್ಯ
ನುತಿಸಿದವಗೆ ಮೆಚ್ಚಿ ಗತಿ ಈವೆ ಗರ್ವದಿಂದ
ಚತುರರೊಳಗೆ ಬಲು ಚತುರನೆ ನಾನೆ ಎಂದು
ಸತಿ ಮೂವರೊಡನೆ ಸಂತತನುತ ಸಾರ್ವಭೌಮಾ
ಚತುರಾದಿನಾಥ ಸ್ವಾಮಿ ಪತಿತ ಪಾವನ ಸಿರಿ
ಪತಿ ವಿಜಯವಿಠಲಾ ತೀರತಜನಕಾ ನಮ್ಮನೆಲ್ಲ
ಹಿತವಾಗಿ ಪಾಲಿಸುವ
ಜತೆ
ತಾಮ್ರಪರ್ಣೆಯ ಸ್ನಾನವ ತಿರುಪತಿಯಾತ್ರಿ
ಸಂಭ್ರಮದಲಿ ಮಾಡಿ ವಿಜಯವಿಠಲ ಒಲಿವಾ
*******