ದಾಸರಾಯ ಪುರಂದರದಾಸರಾಯ ಪ.
ದಾಸರಾಯರೆ ನಿಮ್ಮ ಸ್ಮರಣೆಯ
ಘಾಸಿಗೊಳಿಸದೆ ಇತ್ತು ಕರುಣಿಸಿ
ವಾಸುಕಿಶಯನನ ತೋರಿಸಿ
ವಾಸುದೇವನ ಕೃಪೆಗೈಸಿರಿ ಅ.ಪ.
ದಾಸಕೂಟಕೆ ಮೊದಲನೆ ಗುರು
ದೊಷವರ್ಜಿತ ಭಕ್ತರೆನಿಸಿ
ಆಶಪಾಶವೆ ತೊರೆದು ಹರಿಯ
ದಾಸತನವನು ತೋಷದಲಿ ಕೊಂಡು
ಕೇಶವನು ಸರ್ವೋತ್ತಮನು ಎನ್ನುತ
ಶ್ರೀಶನ ಗುಣಗಳನೆ ಪೊಗಳುತ
ಭೂಸುರರ ರಕ್ಷಿಸುತ ಭಕ್ತರ
ಕ್ಲೇಶಗಳೆÉದಂಥ ಗುರುವರ 1
ವೀಣೆ ಕರದಲಿ ಗಾನಮಾಡುತ
ಜಾಣತನದಲಿ ಕೃಷ್ಣನೊಲಿಸುತ
ಆನಂದದಲಿ ನರ್ತಿಸುತ್ತ
ಧ್ಯಾನದಲಿ ಶ್ರೀ ಹರಿಯ ನೋಡುತ
ಆನನವ ತೂಗುತ್ತ ವೇದ ವಿ-
ಧಾನದಲಿ ಪದಗಳನೆ ರಚಿಸುತ
ಮೌನಿವ್ಯಾಸರ ಶಿಕ್ಷೆಯಿಂದಲಿ
ದಾನವಾಂತಕ ಹರಿಯನೊಲಿಸಿದ 2
ಪಾಪಿಗಳ ಪಾವನಗೈಸುತ
ಶ್ರೀ ಪತಿಯ ಅಂಕಿತವ ನೀಡುತ
ಈ ಪರಿಯಲಿ ಮೆರೆದ ಮಹಿಮೆಯ
ನಾ ಪೇಳಲಳವಲ್ಲವಿನ್ನು
ನಾ ಪಿರಿಯರಿಂ ಕೇಳಿದುದರಿಂ
ದೀಪರಿ ನುಡಿದಿರುವೆನಲ್ಲದೆ
ಗೋಪಾಲಕೃಷ್ಣವಿಠ್ಠಲನ
ರೂಪ ನೋಡುತ ಸುಖಿಸುವಂಥ 3
****