Audio by Mrs. Nandini Sripad
sung as vyasa vittala ankita
ಶ್ರೀಕೇಶವವಿಠ್ಠಲ ದಾಸರ ಕೃತಿ
ರಾಗ ಶಂಕರಾಭರಣ ಖಂಡಛಾಪುತಾಳ
ದಯದಿ ಪಾಲಿಸೋ ಜಯತೀರಥರಾಯಾ ।
ಅಕ್ಷೋಭ್ಯರ ತನಯ ॥ ಪ ॥
ಅತ್ಯಂತ್ಹರುಷದಿ ಎತ್ತಾಗಿರುತಿರಲು । ಆನಂದತೀರ್ಥರು ।
ನಿತ್ಯಪಠಿಸುವ ಪುಸ್ತಕ ಹೊರುತಿರಲು । ಗುರುರಾಯರು ಪೇಳಿದ ।
ತತ್ವಗ್ರಂಥವನೆ ಕಿವಿಯಲಿ ಕೇಳುತಲಿ । ತಲೆಯ ತೂಗುತಲಿ ।
ಮತ್ತೆ ಪುಟ್ಟಿದ್ಯೊ ಮಂಗಳವೇಡೆಯಲಿ । ಅತಿಮತಿವಂತರಲಿ ॥ 1 ॥
ದೇಶಪಾಂಡೆಯರ ಕೂಸಾಗಿ ಜನಿಸಿ । ಘನ ರಾವುತನೆನಿಸಿ ।
ದೇಶದೇಶದೊಳ್ ಸೈನ್ಯವನೆ ಚರಿಸಿ । ಧನವನ್ನೆ ಗಳಿಸಿ ।
ವಾಸುಕಿಯೆಂಬೋ ಗುರುತನೆ ತಪ್ಪಿಸಿ । ನದಿಗೆ ನೀರಡಿಸಿ ।
ಶ್ರೀಶನಾಜ್ಞೆಯಿಂ ಇವರನೆ ಕರೆತರಿಸಿ । ಶಿಖಿ ಸೂತ್ರವ ತೆಗೆಸಿ ॥ 2 ॥
ಹಿಂಡು ಹಿಂಡುಜನ ಅಂಡಲಿಯುತ ಬಂದು । ಅಕ್ಷೋಭ್ಯತೀರ್ಥರ ।
ಕಂಡು ಭೇಟಿಯ ಮಾಡುತಲೆ ನಿಂದು । ಧೊಂಡೋ ರಘುನಾಥನ ।
ಹೆಂಡತಿ ಗಂಡನ ಕೂಡಿಸಬೇಕೆಂದು । ಸುಮ್ಮನೆ ಕರೆತಂದು ಪ್ರ - ।
ಚಂಡ ಸರ್ಪದ ರೂಪವ ತಾವ್ ಕಂಡು । ಭಯಪಟ್ಟರಂದು ॥ 3 ॥
ಮಧ್ವಶಾಸ್ತ್ರಗಳನುದ್ಧರಿಸುತಲದಕೆ । ಟೀಕೆಯನು ಮಾಡಿ ।
ವಿದ್ವಜ್ಜನರಿಗೆ ತಿದ್ದಿಯೆ ಪೇಳುತಲಿ । ನಾನಾ ಬಗೆಯಲ್ಲಿ ।
ಪದ್ಧತಿ ತಿಳಿಸಿದ ಗುರುರಾಯರು ನೀವು । ಯತಿವರ ಸುರಧೇನು ।
ಅದ್ವೈತರ ಗುರು ವಿದ್ಯಾರಣ್ಯನ । ಗೆದ್ದ ಸಿಂಹ ನೀವು ॥ 4 ॥
ಆಷಾಢ ಬಹುಳ ಪಂಚಮಿಯು ಬರುತ । ಕಳೆವರವು ಬಿಟ್ಟು ।
ಕೇಶವವಿಠ್ಠಲನ ಧ್ಯಾನದಲಿರುತ । ಮಳಖೇಡದಲ್ಲಿ ।
ವಾಸವಾಗಿಹ್ಯನೆಂಬೋ ಪ್ರಖ್ಯಾತ । ತವಗುಣಗಳ ಚರಿತ ।
ಬ್ಯಾಸರದಲೆ ಕೊಂಡಾಡುವ ಮನುಜರಿಗೆ । ಇಷ್ಟಾರ್ಥಧಾತಾ ॥ 5 ॥
*****