..
ಯಾಕೆ ಮಲಗಿದೆಯೊ ಶ್ರೀಕಾಂತ ದ್ವಾರಕಾವಾಸ
ಸಾಕು ನಿದ್ರೆಯು ಸೂರ್ಯ ಉದಯಾಯಿತು
ಗೋಕುಲದೊಳಗಿದ್ದ ಗೋಮಕ್ಕಳೆಲ್ಲ ಧ್ವಜ-
ರೇಖಾ ಚರಣಕಮಲಕೆರಗಿ ಕರೆಯುತಲಾಗ ಪ
ಅಂಬುಧಿ ಒಳಗಾಡಿ ತಂದು ವೇದವನು ಕೊಡು
ಮಂದರೋದ್ಧಾರ ಸುರರಿಗೆ ಸುಧೆಯ ನೀಡು
ತಂದು ದಾಡಿಂದ ಧರೆಯನು ಹರವಿ ಧರಾಪತಿಯೆ
ಕೊಂದು ರಕ್ಕಸನ ನಂದನಗೆ ದಯಮಾಡದಲೆ 1
ಬೇಡಿ ದಾನವ ಭುವನ ಮಾಡಿದೆಲೆ ಮೂರ್ಹೆಜ್ಜೆ
ಈಡಿಲ್ಲ ನಿನಗೆ ನೃಪವರ ಸೇವಕನೆನಿಸೆ
ಆಡಿದ್ವಚÀನವ ನಡೆಸುತಾರಣ್ಯವಾಸದಲಿ
ಆದಿಲಕ್ಷ್ಮಿಯನೆ ಕದ್ದಸುರನ್ನ ಸಂಹರನೆ 2
ಗೊಲ್ಲ ಸತಿಯರ ಕೂಡ ಸಲ್ಲಾಪ ಸಾಲದಲೆ
ಎಲ್ಲ ತ್ರಿಪುರರ ಸತಿಯರಲ್ಲಿ ಪೋಗುವರೆ
ಬಲ್ಲೆ ಭೀಮೇಶಕೃಷ್ಣನೆ ಕುದುರೆಕುಣಿಸುತಲಿ
ಎಲ್ಲಿ ಓಡ್ಯಾಡಿದ್ಹೇಳಿಲ್ಲಿ ವಾರಿಧಿಶಯನ 3
***