ಹರಿ ಭಕುತಿವುಳ್ಳವರ ಶರೀರವೇ ಕುರುಕ್ಷೇತ್ರ ll ಪ ll
ಇವರು ನರರೆಂದು ಬಗೆವವರೆ ನರಕವಾಸಿಗಳು ll ಅ ಪ ll
ಸದಮಲನ ಧ್ಯಾನಿಸುವ ಹೃದಯ ಕಾಶಿಪುರವು l
ಮಧುವೈರಿವಲಿದ ಮನ ಮನಿಕರ್ಣಿಕ l
ಪದುಮನಾಭನ ಪೊಗಳುವ ಮನವಯೋಧ್ಯಾಪುರಿ l
ವದನ ವೈಕುಂಠಪುರವಾಗಿ ತೋರುವದು ll 1 ll
ನರಹರಿಯನೀಕ್ಷಿಸುವ ನಯನ ದ್ವಾರಾವತಿಯು l
ಮುರಹರನನಿರ್ಮಾಲ್ಯ ಘ್ರಾಣಿಸುವ ಮೂಗು ಮಥುರೆ l
ಕರುಣಾಕರನ ಕಥೆ ಕೇಳುವ ಕಿವಿ ಕೇದಾರ l
ಸಿರಿಧರಗೆ ಎರಗುವ ಶಿರವೇ ಬದರಿ ll 2 ll
ಚಕ್ರಧರಗೆ ಪೊಗುವಾ ಚರಣ ಮಾಯಾವತಿ l
ತ್ರಿವಿಕ್ರಮನ ಪೂಜಿಸುವ ಕರವೇ ಕಂಚಿ l
ದುಷ್ಕೃತಿಯ ಕಳೆವ ನಮ್ಮ ಪುರಂದರವಿಟ್ಠಲನ್ನ l
ಸುಕೃಪೆಯುಳ್ಳವರ ಅಂಗ ಸಾಯುಜ್ಯವು ll 3 ll
***