Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೆಂಕಟೇಶ ಪ್ರಾರ್ಥನಾ ಸುಳಾದಿ
ರಾಗ ಕಾನಡ
ಧ್ರುವತಾಳ
ತನುವಾರೋಪಿಸಿದೆನೊ ಮನವಾರೋಪಿಸಿದೆನೊ
ದಿನ ಪ್ರತಿದಿನ ಬಿಡದೆ ಮಾಳ್ಪ ಲಾಭವಲಾಭ
ಗುಣವಾರೋಪಿಸಿದೆನೊ ಗಣನೆಯಿಲ್ಲದೆ ಎನ್ನ
ಜನುಮ ಜನುಮಾದಲ್ಲಿ ನೆನೆದು ಮಾಡಿದವೆಲ್ಲ
ನಿನಗೆ ತಪ್ಪದು ಕಾಣೊ ವನಜನಾಭನೆ ನಮಗೆ
ಜನನಿ ಜನಕ ನೀನೆಂದೆನಿಸಿದ ತರುವಾಯ
ಅನುಮಾನ ಯೆನಗೆ ಎಳ್ಳನಿತು ಪುಟ್ಟದು ಕಾಣೊ
ಗುಣ ಅವಗುಣನೆಂದು ಎಣಿಸಿ ದೂರಿಟ್ಟಾರೊಳಿತೆ
ಘನವೆ ನಿನ್ನದು ಯಮನು ಮುನಿಯಾಮಿಕ್ಕಾ ಮಾತಿಗೆ
ಮಣಿವೆನೆ ವಜ್ರದ ಖಣಿ ಶಿಕ್ಕ ತೆರನಾಗೆ
ಕನಕಾದ್ರಿಸದನ ವೆಂಕಟ ವಿಜಯವಿಟ್ಠಲ
ನಿನಗಲ್ಲದನ್ಯತ್ರ ಜನಕೆ ಶರಣುಪೋಗೆ ॥ 1 ॥
ಮಟ್ಟತಾಳ
ಬಂಟರ ಮನೋಹರ ಬಂಟರಿಗೆ ವೈ -
ಕುಂಠಪತಿ ನೀನೆ ಬಂಟನಾಗಿ ಅವರ ಕಂಟಕ ಕಳವುತ್ತ
ಅಂಟಿಸಿದ ಮಾತು ಉಂಟು ಮಾಡಿಕೊಳುತ
ಗಂಟು ಬಡ್ಡಿಗೆ ಸೋತ ನೆಂಟನಂತೆ ದುಡಿವ
ಬಂಟನೊ ಅಸುರರ ಗಂಟಲಗಾಣನೊ
ಎಂಟು ದಿಕ್ಕಿನೊಳು ವಂಟರಗಾರ ವೈ -
ಕುಂಠ ಶೈಲವಾಸ ವಿಜಯವಿಟ್ಠಲ ಕಂಬು -
ಕಂಠ ತಿರ್ಮಲ ನಿತ್ಯಾಭಂಟರ ಬಲುಕಾವ ॥ 2 ॥
ತ್ರಿವಿಡಿತಾಳ
ಎನ್ನಯ್ಯ ಎನ್ನಪ್ಪ ಎನ್ನ ಜೀವನದೊಡಿಯಾ
ಎನ್ನ ಪಾಲಿಪ ಘನ್ನರನ್ನ ಸಂಪನ್ನನೆ
ಇನ್ನು ನಿನ್ನವನೆಂದ ಮನುಜಾ ಮರೆದಿರೆ
ಅನಂತ ಜನುಮ ಜನುಮದೊಳಗೆನ್ನ
ನಿನ್ನಗೆ ನೀನೆ ನೆನಪನ್ನು ತಂದುಕೊಂಡಂತೆ
ಚನ್ನಾಗಿ ಇಪ್ಪ ಪ್ರಸನ್ನವದನ್ನಾ
ಚನ್ನಾಗಿ ಕರುಣಾವನ್ನಿಧಿ ತಿರ್ಮಲಾ
ಪನ್ನಗಾ ಗಿರಿವಾಸನೆ ವಿಜಯವಿಠ -
ಲನ್ನು ಮಾನಾವಿಲ್ಲದವನ್ನು ಮನೋಹರ ॥ 3 ॥
ಅಟ್ಟತಾಳ
ಭಕುತರುಂಡದ್ದು ನೋಡಿ ಭಕುತರುಟ್ಟದ್ದು ನೋಡಿ
ಭಕುತರಿಟ್ಟದ್ದು ಭಕುತರಂದದ್ದು ನೋಡಿ
ಭಕುತಾರು ಭುಂಜಿಸೆ ಭಕುತೀಲಿ ನೀನಾದ
ಭೋಕುತನಾಗುವೆ ವಿರಕುತಿಗಳಿಂದಲಿ
ಭಕುತರಿಚ್ಛಿದ ಸದಾ ಭಕುತರುದ್ಧಾರನೆ
ಭಕುತರಂದದ್ದೆ ಸತ್ಯ ಭಕುತರಾಡಿದ್ದೆ ಸತ್ಯ
ಭಕುತರಂದದೆ ಅಂಬೆ ಭಕುತರುಂಬುದೆ ಉಂಬೆ
ಭಕುತರಿಗಿದ್ದ ಸ್ವಾತಂತ್ರ ನಿನಗಿಲ್ಲ
ಭಕುತರಿಚ್ಛೆಗಾರ ರಕುತಾದ್ರಿ ಆಗಾರ
ಅಖಿಳೇಶಾ ವೆಂಕಟ ವಿಜಯವಿಟ್ಠಲ ನಿಜ -
ಭಕುತರಗಲದಿಪ್ಪ ಭಕುತರ ದೈವ ॥ 4 ॥
ಆದಿತಾಳ
ಜನಿತವಾದಿನೊ ನಿನ್ನಿಂದ ಬಿಡದಲೆ
ಜನುಮ ಜನುಮ ದೇಹ್ಯತೆತ್ತು ತವಕದಿಂದ
ಮನುಜ ದೇಹಕೆ ಬಂದೆ ಮಾಧವರಾಯಾ ಕೇಳು
ವನಚರ ಮೊದಲಾದ ತನುವೆ ಬಂದಾಗಲಿ
ಮನದಣಿಯೆ ನಿನ್ನ ಪ್ರಸಾದವನು ಉಂಡವನಲ್ಲ
ವನಜಾಕ್ಷ ಬಹುದಿನದ ತಪವೆ ಫಲಿಸಲು ಈ
ಮನುಜ ಕಾಯವೆ ನೀನು ತಂದಿತ್ತ ಕಾರಣ
ಎನಗೆ ಸ್ವಾತಂತ್ರವು ನಿನಗಿತ್ತೆ ದ್ರವ್ಯವೆಲ್ಲ
ತಿನಲಿ ಕರ್ತಾನೆಂಬೊದೆ ನೀನರಿದದು ಕಾಣೆ
ಅನುಮಾನಾ ಎನಗಿಲ್ಲ ವಿಜಯವಿಟ್ಠಲ ತಿಮ್ಮ
ನಿನಗಂಜುವೆವು ದಯಮಾಡಿ ಪಾಲಿಸೊ ॥ 5 ॥
ಜತೆ
ಕಾರುಣ್ಯನಿಧಿ ನಿನಗೆ ಕಡೆ ಹುಟ್ಟು ಮಗ ನಾನು
ಬೇರೆ ನೋಡದೆ ಕಾಯೋ ವಿಜಯವಿಟ್ಠಲ ತಿಮ್ಮ ॥
***********