Showing posts with label ಮಗುವು ಅಲ್ಲ ಕಾಣೆ ಗೋಪಿ ಇವನು ನಿನ್ನಾ krishnavittala. Show all posts
Showing posts with label ಮಗುವು ಅಲ್ಲ ಕಾಣೆ ಗೋಪಿ ಇವನು ನಿನ್ನಾ krishnavittala. Show all posts

Monday, 2 August 2021

ಮಗುವು ಅಲ್ಲ ಕಾಣೆ ಗೋಪಿ ಇವನು ನಿನ್ನಾ ankita krishnavittala

ಮಗುವು ಅಲ್ಲ ಕಾಣೆ ಗೋಪಿ ಇವನು ನಿನ್ನಾ ಪ


ಜಗವ ನಿರ್ಮಿಸಿ ಪಾಲಿಸಿ ಅಳಿಸುವ

ಅಗಣಿತ ಸುಗುಣಾ ಭರಣನೆ ಇವನು ಅ.ಪ


ಬೆಣ್ಣೆಯ ಕದ್ದನು ಸಣ್ಣವನಿಹ ಬಹು

ಚಿಣ್ಣರ ಕೂಡುತ ಗೋಗಣ ಕಾಯುವ

ಮನ್ಮನ ಪುಥ್ಥಳಿ ಕಳಿಸುವದಾಗದು

ಎನ್ನುವ ನುಡಿಗಳ ಬದಿಗಿಡು ತಾಯಿ

ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ

ಉನ್ನತ ರಕ್ಕಸಿ ಪೂತಣಿಯನ್ನಿವ

ಮಣ್ಣನು ಕಂಡರು ಕಂಸನದೂತರು

ಪೂರ್ಣಾನಂದನು ಸರಿ ಇವನಮ್ಮ 1

ಜಾರ ಚೋರ ಸುಕುಮಾರನು ಸುಂದರ

ನಾರೇರ ವಲಿಸಿ ಸೇರಿದ ನಿಶಿಯಲಿ

ಪೋರನೆಂಬ ಮನ ದೂರವಗೈದುಗ

ಭೀರ ಮಹಿಮ ಜಗ ಸಾರನೆಂದರಿಯೆ

ಭಾರಿಗಿರಿಯನೆತ್ತಿ ಊರಿಗೆ ಊರನು

ಸೇರಿಸಿ ಪೊರೆದಿಹಪಾರಮಹಿಮ ಜಂ

ಭಾರಿದರ್ಪಹರ ಪೋರನೆ ಬಿಡುಬಿಡು

ನೀರೆ ನಿಗಮ ಸಂಚಾರನೆ ಖರೆಯೆ 2


ಕಾಲ್ಗಳು ಸೋಕಲು ಶಕಟನು ಬಿದ್ದನು

ಶೀಳುತ ಕೊಕ್ಕನು ಬಕನಂ ಕೊಂದನು

ಕಾಳಿಯ ತುಳಿಯುತ ಗರ್ವವ ನಿಳಿಸಿದ

ಲೀಲಾಜಾಲದಿ ಜ್ವಾಲೆಯ ನುಂಗಿದ

ಬಾಲರು ಕೇಳಲು ಆಲಯತೋರಿದ

ಪಾಲಿಸಿ ವರುಣನ ತಂದೆಯ ಕಂದನ

ಲೋಲನೆ ಸರಿ ಜಗಮೂಲನು ಕೇಳೆ 3


ನಾರಿಯು ಆಗುತ ಮೋಹವ ತುಂಬಿದ

ನೀರಜ ನಾಭಗೆ ಗೊಲ್ಲತಿಯ ಗಣ

ಬೀರಲ್ ಸಾಧ್ಯವೆ ಮೋಹವ ನೆಂದಿಗು

ಶ್ರೀರತಿದಾಯಕ ಕೊಳ್ಳುವನೇ ರತಿ

ಮೂರನೈಯ ಭವ ತಾರಕ ಶುಭ

ಶೃಂಗಾರ ಪೂರ್ಣ ಪರಿವಾರದಭೀಷ್ಠವ

ಪೂರೈಸಿದ ಖರೆ ಭೂರಿದಯಾಮಯ

ನಾರಾಯಣನಿವ ದೋಷ ವಿದೂರ 4


ಮೆಲ್ಲಗೆ ಬಾಯೊಳು ಎಲ್ಲವ ತೋರಿದ

ಮಲ್ಲನು ಸರ್ವರ ವಲ್ಲಭ ಸಿದ್ಧವು

ಗೊಲ್ಲನ ವೇಷದಿ ಇಲ್ಲಿಹನಮ್ಮ

ಇಲ್ಲವೆ ಸಮರಿವಗೆಲ್ಲಿಯ ಸತ್ಯ

ಮಲ್ಲರ ಮರ್ದಿಸಿ ಕೊಲ್ಲುತ ಕಂಸನ

ನಿಲ್ಲಿಸಿ ಧರ್ಮವ ಕಾಯುವ ನಮ್ಮ

ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ

ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5

****