Showing posts with label ಮಿತ್ರನು ಎಂದು ನಿನ್ನ guruvijaya vittala ankita suladi ಮಂಗಳವಾರದ ಸುಳಾದಿ MITRANU ENDU NINNA MANGALAVARADA SULADI. Show all posts
Showing posts with label ಮಿತ್ರನು ಎಂದು ನಿನ್ನ guruvijaya vittala ankita suladi ಮಂಗಳವಾರದ ಸುಳಾದಿ MITRANU ENDU NINNA MANGALAVARADA SULADI. Show all posts

Monday 9 December 2019

ಮಿತ್ರನು ಎಂದು ನಿನ್ನ guruvijaya vittala ankita suladi ಮಂಗಳವಾರದ ಸುಳಾದಿ MITRANU ENDU NINNA MANGALAVARADA SULADI

Audio by Mrs. Nandini Sripad

ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ  ಮಂಗಳವಾರದ ಸುಳಾದಿ 
 ( ಗುರುವಿಜಯವಿಠ್ಠಲ ಅಂಕಿತ ) 

 ರಾಗ ಬಾಗೇಶ್ರೀ 

 ಧ್ರುವತಾಳ 

ಮಿತ್ರನು ಎಂದು ನಿನ್ನ ಮನದಿ ನಂಬಿದದಕ್ಕೆ
ಉತ್ತಮ ಉಪಕಾರ ಮಾಡಿದೆಯ್ಯಾ
ಶತ್ರುಗಳಂತೆ ನಿಂದು ಬಹಿರಂತರಂಗದಲ್ಲಿ
ಕತ್ತಲೆ ಚರರಿಗೆ ಸಹಾಯನಾಗಿ
ನಿತ್ಯ ದುಃಖಗಳುಣಿಸಿ ಎಷ್ಟು ಕೂಗಿದರು
ನೇತ್ರದಿ ನೋಡದಲೆ ಇರುವ ಬಗೆಯೋ
ಮಿತ್ರರ ಲಕ್ಷಣವೆ ಅಥವಾ ಶತ್ರುತ್ವದ ಸೊಬಗೆ 
ಎತ್ತಣದೊ ಇದನು ತೋರದೆನಗೆ
ಕರ್ತೃ ನಿನ್ನಲ್ಲಿ ದೋಷ ಎಂದೆಂದು ಕೂಡದಾಗಿ
ನಿಸ್ತ್ರೈಗುಣ್ಯನೆಂದು ಶ್ರುತಿ ಸಾರಿತು ಸ -
ರ್ವತ್ರ ಸಮನಾದ ಹರಿ ನೀನು ಜೀವ ಕಾಲ ಪ್ರ -
ಕೃತಿ ಅನುಸರಿಸಿ ಸುಖ ದುಃಖ 
ಹೊತ್ತು ಹೊತ್ತಿಗೆ ತಂದು ತುತ್ತು ಮಾಡಿ ಉಣಿಸಿ
ಕೀರ್ತ್ಯಾಪ ಕೀರ್ತಿಗಳಜಾದಿಗಳಿಗೆ
ಇತ್ತು ಪೊರೆವಿ ಎಂಬ ಕಾರಣದಿಂದ ನಿನಗೆ
ಯುಕ್ತವಾಗದಯ್ಯಾ ದೋಷವನ್ನು
ಈ ತೆರವಾದ ಬಗೆಯಿಂದ ಎನ್ನ ಕರ್ಮದಂತೆ ದು -
ಷ್ಕೃತ್ಯಗಳುಂಬೆನೆಂದು ನಿಶ್ಚೈಸುವೆನು ಧಾ -
ರಿತ್ರಿ ಒಳಗೆ ಅಶಕ್ತರಾದವರೆಲ್ಲ
ಶಕ್ತರಾದವರನ್ನ ಆಶ್ರಯಿಸೆ
ಅತ್ಯಭಿಮಾನದಿಂದ ಪೊರೆಯದಿರಲು ಆವ 
ಕೀರ್ತಿ ಐದುವನೆಂತು ಮಾನ್ಯನಾಗಿ ತಾ -
ಪತ್ರಯ ಕಳಿಯದಿರೆ ಅನುಸಾರ ಮಾಳ್ಪದೇಕೆ 
ಕೃತ್ಯಾಭಿಮಾನಿಗಳ ಸುರರೊಡಿಯಾ ಮುಕ್ತಾ
ಮುಕ್ತರಾಶ್ರಯ ಗುರುವಿಜಯವಿಠ್ಠಲರೇಯ 
ಭಕ್ತವತ್ಸಲ ದೇವ ಮಹಾನುಭಾವಾ ॥ 1 ॥

 ಮಟ್ಟತಾಳ 

ಅನಾದಿ ಕರ್ಮವನು ಅನುಭವ ಮಾಡುವದು
ಪ್ರಾಣಾದ್ಯಮರರಿಗೆ ತಪ್ಪುವದೇ ಎಂದು
ಜಾಣತನದಲಿಂದ ಜಾರಿ ಪೋಗುವದೊಳಿತೆ
ಶ್ರೀನಾಥ ನಿನ್ನ ಪಾದ ಸಾರಿದ ಜನಕೆ 
ಅನೇಕ ಜನ್ಮದ ಪಾಪ ತಕ್ಷಣದಿಂದಲ್ಲೇವೆ
ವಿನಾಶವಾಗುವದೆಂದು ಶೃತಿ ಸಾರುತಲಿದಕೋ
ದೀನರಾಗಿ ನಿನ್ನ ಸ್ತುತಿಪರು ಸುರರೆಲ್ಲ 
ಎನಗಿದ್ದ ಕರ್ಮವನು ಕ್ಷೀಣ ವೈದಿಸದಿರಲು
ವಿನಯದಿಂದಲಿ ನಿನಗೆ ಬೇಡಿಕೊಂಬುವದೇಕೆ 
ಪ್ರಾಣನಾಥ ಗುರುವಿಜಯವಿಠ್ಠಲರೇಯಾ ನೀನು 
ಪ್ರೀಣನಾಗುತಿರಲು ನಿಲ್ಲುವದೆ ದೋಷ ॥ 2 ॥

 ತ್ರಿವಿಡಿತಾಳ 

ವೆಂಕಟನೆಂಬುವದು ವ್ಯವಹಾರ ತೋರುತಿದೆ
ಪಂಕಜಾಕ್ಷನೆ ಇನಿತು ನಡತಿ ಯಿಂದ
" ಯತತೋಪಿ ಹರೇಃ ಪದಸಂಸ್ಮರಣೆ 
ಸಕಲಂಹ್ಯಗಮಾಶುಲಯಂವೃಜತಿ "
ಎಂಬೋಕ್ತಿಗೆ ಕಳಂಕ ಬಾರದೇನೊ ಈ ತೆರ ನುಡಿದರೆ
ಶಂಕರನೆಂಬೊ ನಾಮ ನುಡಿಯಲ್ಯಾಕೆ 
ನಿಖಿಳಾಘೌಘ ವಿನಾಶಕ ನೆಂಬೊದೇನೋ
ಮಂಕು ಜನರ ಪಾಪ ಕಳಿಯದಿರೆ
" ಯಂಕಾಮಯೆ ತಂತ ಮುಗ್ರಂ ಕೃಣೋಮಿ " ಎಂಬ
ಬಿಂಕದ ಉಕುತಿಗೆ ಘನ್ನತ್ಯಾಕೆ 
ಸಂಕಟಹರ ಗುರುವಿಜಯವಿಠ್ಠಲ ನಿನ್ನಗ -
ಲಂಕಾರ ವಾಗದಯ್ಯಾ ಇನಿತು ನೋಡೆ ॥ 3 ॥

 ಅಟ್ಟತಾಳ 

ಮಾಡಿದ ಕರ್ಮವು ಕ್ಷೀಣವೈದಿಸದಿರಲು
ನಾಡೊಳಗೆ ಪುಟ್ಟಿ ಅನುಭವಿಸಲೆ ಎನ್ನೆ
ಯೂಢವಾದ ಕಲ್ಪ ತಿರುಗಿ ತಿರುಗಿದರು
ಗಾಢವಾದ ಕರ್ಮ ನಾಶವಾಗದು ಕೇಳೊ
ಈಡು ಇಲ್ಲದಿಪ್ಪ ಸೌಖ್ಯದಾಯಕ ಮುಕ್ತಿ
ಪ್ರೌಢರಾದವರಿಗೆ ದುರ್ಲಭವೆ ಸರಿ 
ರೂಢಿಯ ಜನಕಿನ್ನು ಪೇಳುವದ್ಯಾತಕೊ
ಗೂಢಕರುಣಿ ಗುರುವಿಜಯವಿಠ್ಠಲ ಎಂಬೋದು
ರೂಢಿಯೆ ಸರಿ ಮತ್ತೆ ಯೋಗ ಎನ್ನಲ್ಯಾಕೆ ॥ 4 ॥

 ಆದಿತಾಳ 

ವಿನಯದಿಂದಲಿ ಒಮ್ಮೆ ಹರಿ ಎಂದು ಸ್ಮರಿಸಲು
ಜನ್ಮ ಜನ್ಮದ ಪಾಪ ಪರಿಹಾರ ವಾಗುವೋವು
ಅನುನಯದಿ ಮತ್ತೊಮ್ಮೆ ಅಚ್ಯುತನೆಂದು ನೆನೆಯೆ
ಮನದಲ್ಲಿ ತೋರಿ ನೀನು ಆನಂದ ಬಡಿಸುವಿ
ಘನ್ನ ಮಹಿಮ ನಿನ್ನ ಮೂರನೆ ಖ್ಯಾಪಿ ನೆನೆಯೆ
ಅನಾದಿಯಿಂದ ಬಂದ ಪ್ರತಿಬಂಧ ದೂರ ಮಾಡಿ
ಆನಂದ ಪ್ರದವಾದ ಸ್ಥಾನವನ್ನು ಐದಿಸುವಿ 
ಚಿನುಮಯನೆ ನಿನ್ನ ನಾಲ್ಕನೆಯ ಬಾರಿ ನೆನೆಯೆ
ಋಣವನ್ನು ತೀರಿಸುವಿ ಉಪಾಯವಿಲ್ಲ ನಿನಗೆ
ಅನುಗಾಲ ನಿನ್ನ ಪಾದ ಭಜಿಸಿದ ಭಕ್ತರಿಗೆ
ಅನುಸಾರ ವಾಗಿಪ್ಪ ಅಳುಕಂದಿ ಅಳುಕಂದಿ
ಅನುಮಾನ ಇದಕಿಲ್ಲ ಬಲಿಯೇ ಇದಕೆ ಸಾಕ್ಷಿ
ಇನಿತು ನಿನ್ನ ಮಹಿಮೆ ಶ್ರುತಿ ಸ್ಮೃತಿ ವರಲುತಿರೆ
ಎನಗಿದ್ದ ದುಷ್ಕರ್ಮ ಪರಿಹಾರ ಮಾಡದಿರಲು
ಘನವಾದ ಮಹಿಮೆಯು ಲೌಕಿಕವಾಗದೇನೊ
ಸನಕಾದಿ ಮುನಿವಂದ್ಯ ಗುರುವಿಜಯವಿಠ್ಠಲರೇಯ 
ಮನನಕ್ಕೆ ತಂದುಕೊ ಎನ್ನಯ ಬಿನ್ನಪವ ॥ 5 ॥

 ಜತೆ 

ಭಕುತಿ ಇಲ್ಲದೆ ಬರಿದೆ ಸಥೆಯಿಂದ ಬಿನ್ನೈಸಿದೆ
ಉಕುತಿ ಲಾಲಿಸು ಗುರುವಿಜಯವಿಠ್ಠಲರೇಯ ॥
********