Showing posts with label ಯಾಕೆ ನಿರ್ದಯ ಮಾಡಿದೆ ರಂಗಯ್ಯ venkatakrishna. Show all posts
Showing posts with label ಯಾಕೆ ನಿರ್ದಯ ಮಾಡಿದೆ ರಂಗಯ್ಯ venkatakrishna. Show all posts

Tuesday, 1 June 2021

ಯಾಕೆ ನಿರ್ದಯ ಮಾಡಿದೆ ರಂಗಯ್ಯ ankita venkatakrishna

 by yadugiriyamma  

ಯಾಕೆ ನಿರ್ದಯ ಮಾಡಿದೆ ರಂಗಯ್ಯ

ನೀನ್ಯಾಕೆ ನಿರ್ದಯ ಮಾಡಿದೆ ಪ


ಯಾಕೆ ನಿರ್ದಯ ಈ ಲೋಕದೊಳಗೆ ಯಿದ್ದು

ವ್ಯಾಕುಲ ಪಡಲಾರೆ ನಿಮ್ಮ ಲೋಕವ ಸೇರಿಸು ಅ.ಪ

ದುಷ್ಟರ ಮಧ್ಯದಲ್ಲಿ ನಾನಿರಲಾರೆ ಸೃಷ್ಟಿಗೀಶ್ವರನೆ ಕೇಳು

ಮುಟ್ಟಿ ಭಜಸಿ ನಿಮ್ಮ ಪಾದಪದ್ಮದ ಭಕ್ತಿಯಿಟ್ಟೇನೆಂದರೆ

ದುಷ್ಟ ಇಂದ್ರಿಯ ಬಿಡದೆನ್ನ 1

ಪಂಚೇಂದ್ರಿಯಗಳೆನ್ನ ಬಹುಬೇಗ ವಂಚನೆ ಮಾಡುತಿದೆ

ಪಂಚಬಾಣನ ಪಿತ ಪರಮಪುರುಷ ರಂಗ ಅ

ಕಿಂಚನಾದೆ ನಿನ್ನಂಘ್ರಿಯ ಸೇರಿಸು 2

ಸಂಸಾರವೆಂಬ ಸರ್ಪ ಕಚ್ಚಿ ವಿಷ ಕ್ಷಣದಲ್ಲಿ ತಲೆಗೇರಿತು ಪರಮ

ಹಂಸರ ಸಂಗದೊಳಗೆಯಿರಿಸಿ ಎನಗೆ ಭರದಿಂದೇರಿದ

ವಿಷ ತಿರುಗೆಸೋ ಶ್ರೀಹರಿ 3

ಸರ್ಪ ತುಂಬಿದ ಕೂಪದಿ ಬಿದ್ದಿಹೆನು ಎನ್ನಪ್ಪ ರಕ್ಷಿಸೊ ಬೇಗದಿ

ಸರ್ಪಶಯನ ಶ್ರೀಅಪ್ರಮೇಯ ರಂಗ ಇನ್ನು

ಕ್ಷಿಪ್ರದಿಂ ಮುಕ್ತಿಯ ಒಲಿದು ಪಾಲಿಸು ರಂಗ 4

ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯಾಸೂಯೆಡಂಭ

ಅಮ್ಬುಜನಾಭನೆ ನಿಮ್ಮ ಪಾದದಧ್ಯಾನ ಒಂದು

ನಿಮಿಷವಾದರು ಮಾಡಲೀಸದು 5

ಹಿಂದಿನ ಕರ್ಮಂಗಳು ಇಂದಿರೇಶ ನಿಂದಕರ ವಶವಾಯಿತು

ಇಂದು ಧರ್ಮದಲಿರ್ದೆ ಬಂಧುಗಳ ವಶವಾಯ್ತು ಇನ್ನು

ಬಂಧನವೇನಯ್ಯ ಮುಕ್ತ್ಯಾನಂದ ತೋರುವುದಕ್ಕೆ 6

ಎಂದಿಗಾದರೂ ಮುಕ್ತಿಯ ಕೊಡುವೆಯೆಂದಾನಂದ

ದಿಂದಿರುತಿದ್ದೆನೊ ಇಂದು ಈ ಸಂಸಾರ ಬಂಧನದೊಳಗೆ ನಾ

ಒಂದು ನಿಮಿಷ ಜೀವಿಸಲಾರೆನು ರಂಗ 7

ಅಂದು ದ್ರೌಪದಿ ಧ್ರುವÀ ಗಜೇಂದ್ರನ ರಕ್ಷಿಸಲಿಲ್ಲವೆ

ಬಂದು ಅಂಬರೀಷ ಅಜಾಮಿಳರ ಪ್ರಹ್ಲಾದನ ಕಂಬದಿಂದಲೆ

ಬಂದು ಕಾಯ್ದ ಗೋವಿಂದ 8

ಭಕ್ತವತ್ಸಲನೆಂತೆಂಬೊ ಬಿರುದು ಈಗ ವ್ಯರ್ಥವಾಯಿತೆ ಶ್ರೀರಂಗ

ಉತ್ತಮ ಗುರುಗಳು ಶ್ರೇಯೋನಿಧಿಗಳ ವಾಕ್ಯ

ಸತ್ಯವ ಮಾಡಿ ಮುಕ್ತ್ಯಾನಂದ ಪಾಲಿಸು 9

ರಂಗನಾಥ ನೀ ಕೈ ಬಿಟ್ಟರೆ ಎನ್ನ ಲೋಕಮಾತೆ ಬಿಡುವಳೆ

ಆಗಾ ಮತಿಯಿಲ್ಲದೆ ಮಾಡಿದ ಶತಾಪರಾಧವ ಹಿತದಿ ಕ್ಷಮಿಸಿ

ಬೇಗ ಮುಕ್ತಿಪಥವ ಪಾಲಿಸುವಳು 10

ಮಾಡಬಾರದ ಮಾಡಿದೆ ಈ ಸಂಸಾರದೆ ನೋಡಬಾರದ

ನೋಡಿದೆ ಆಡಬಾರದ ವಾರ್ತೆಗಳನಾಡಿದೆ ಇನ್ನು

ಗಾಡನೆ ಮುಕ್ತಿಯ ನೀಡೊ ವೆಂಕಟರಮಣ 11

****