ಶ್ರೀಗೋಪಾಲದಾಸಾರ್ಯ ವಿರಚಿತ ಶ್ರೀಹರಿ ಸ್ವತಂತ್ರ ಸುಳಾದಿ
(ಶ್ರೀಹರಿಯು ತ್ರಿವಿಧ ಜೀವರಲ್ಲಿಯೂ ನಿಂತು, ಪ್ರೇರಕನಾಗಿ, ನಾನಾ ವ್ಯಾಪಾರಗಳನ್ನು ಮಾಡಿ ಮಾಡಿಸುವನು. ಸಕಲ ವ್ಯಾಪಾರವೂ ಶ್ರೀಹರಿಯಾಧೀನ. ನನ್ನದಲ್ಲ . ಶ್ರೀಹರಿಯೇ ನಿನ್ನದೆಂದು ಪ್ರಾರ್ಥಿಸು.)
ರಾಗ ಶಂಕರಾಭರಣ
ಧ್ರುವತಾಳ
ಆಡಿ ಆಡಿಸುವನು ನಾಡ ಜೀವನರನ್ನು
ಮಾಡಿ ಮಾಡಿಸುವನು ನಾಡ ಜೀವರ ಕೈಯ್ಯಾ
ಬೇಡಿ ಬೇಡಿಸುವನು ನಾಡ ಜೀವರ ಕೈಯ್ಯಾ
ನೋಡಿ ನೋಡಿಸುವನು ನಾಡ ಜೀವರುಗಳ
ಓಡಿ ಓಡಿಸುವನು ನಾಡ ಜೀವರನ್ನು
ನೀಡಿ ನೀಡಿಸುವನು ನಾಡ ಜೀವರ ಕೈಯ್ಯಾ
ಕೇಡು ಲಾಭವು ಎರಡು ಕೂಡಿ ಹರಿ ಆಧೀನ
ಮಾಡಿಸುವ ಯೋಗ್ಯತೆ ಹಿಡಿದು ಸಾಧನವಾ
ರೂಢಿಯೊಳಗೆ ಇನ್ನು ಈಡಾದ ವಸ್ತುವಿಲ್ಲಾ
ನಾಡ ಜೀವರಿಗೀತನಲ್ಲದೆ ಗತಿಯಿಲ್ಲಾ
ಪೀಡೆ ಮನವೆ ನಿನ್ನ ನಾಡ ಯೋಚನೆ ಹೋಗಾ -
ಲಾಡಿ ಹರಿಯ ಪಾದ ನೋಡಿ ಸುಖಿಯಾಗಿರು
ನಾಡ ದೈವರ ಗಂಡ ಗೋಪಾಲವಿಟ್ಠಲನ್ನ
ಹಾಡಿ ಪಾಡಿ ಕೊಂಡಾಡಿ ಬೇಡಿಕೊ ಸದ್ಗತಿಯಾ ॥ 1 ॥
ಮಟ್ಟತಾಳ
ನನ್ನದೆಂಬದರೊಳು ನಿನ್ನದೆ ಹರಿಯೆನ್ನು
ಉಣ್ಣೊ ಊಟವು ಎಲ್ಲ ನಿನ್ನದೆ ಹರಿಯೆನ್ನು
ಚಿನ್ನ ರೌಪ್ಯಗಳು ಬಣ್ಣ ಬಿಳಿದು ಎಲ್ಲ
ಕಣ್ಣಿಲಿ ಕಂಡದ್ದು ನಿನ್ನದೆ ಹರಿ ಅನ್ನು
ಪುಣ್ಯ ಪಾಪಗಳು ನಿನಗೆ ಮಾಡಲಿಕ್ಕೆ
ಇನ್ನು ಸ್ವಾತಂತ್ರವು ಎಂದೆಂದಿಗೆ ಇಲ್ಲ
ಕಣ್ಣು ಇಲ್ಲದವಗೆ ಅನ್ನ ಉಣಿಸಿದಂತೆ
ಪುಣ್ಯಾತ್ಮ ದೇವ ಎನ್ನ ಪಾಲಿಸುವನು
ನಿನ್ನ ಕರ್ತೃತ್ವವು ಹರಿ ಆಧೀನವು
ಮನ್ನಿಸುವನು ತನ್ನ ಮನ ಬಂದಂತಾಡಿ
ಅನ್ಯ ದೈವರ ಗಂಡ ಗೋಪಾಲವಿಟ್ಠಲ
ಅನಂತ ಶಕ್ತನು ಅನಂತ ಗುಣಪೂರ್ಣ ॥ 2 ॥
ರೂಪಕತಾಳ
ಊರ ಒಳಗಿನ ವಸ್ತಾ ಆರಾದರು ವೈದರೆ
ದೂರು ಹಾಕಿ ತಳವಾರರ ಹೊಡೆದಂತೆ
ಕ್ರೂರವಚನ ನಿಷ್ಠುರ ಜಿಹ್ವೆ ನುಡಿದರೆ
ಸೇರದೆ ಪರರು ಪಲ್ಲುದುರ ಬಡದಂತೆ
ಆರು ಮೆಚ್ಚದ ತಪ್ಪು ಕರಗಳು ಮಾಡಿದರೆ
ಹುರಿ ಬೆನ್ನಾ ಚರ್ಮ ಹಾರ ಹೊಡೆದಂತೆ
ಆರಾರಲ್ಲಿ ಕರ್ತಾ ಕಾರಯತಾ ಪ್ರೇರಕ
ಮಾರಜನಕನೆ ವ್ಯಾಪಾರ ಮಾಡಿಸಿ ಜೀವ
ನರಗೀ ಪ್ರಕಾರ ಕರ್ಮ ಫಲ ವುಣಿಸುವಾ
ಆರು ಈತಗೆ ಒಂದು ಸರಿಯಾದ ವಸ್ತುವಿಲ್ಲಾ
ವಾರಿಜನಾಭನೆ ಸರ್ವೋತ್ತಮ ಕಾಣಿರೊ
ಶ್ರೀರಮಣ ನಮ್ಮ ಗೋಪಾಲವಿಟ್ಠಲ
ಧೀರರಿಗೆ ಧೀರ ಕಾರುಣ್ಯಸಾಗರ ॥ 3 ॥
ಝಂಪಿತಾಳ
ದೇವನೆಂದರೆ ನಮ್ಮ ದೇವ ಈತನೆ ಕಾಣೊ
ದೇವಾದಿ ದೇವತೆಗಳಿಗೆ ದೇವ -
ದೇವರೆಂಬೊ ಮಿಕ್ಕ ದೇವತೆಗಳಿಗೆಲ್ಲ
ದೇವ ಈತನೆ ಕಾವುತಾನೆ ನೋಡಿ
ದೇವನಿಲ್ಲದ ಸ್ಥಳವು ಆವಲ್ಲಿ ಇಲ್ಲವಿನ್ನು
ದೇವ ಸರ್ವತ್ರದಲ್ಲಿ ವ್ಯಾಪಕ ಭಾವಶುದ್ಧದಲಿನ್ನು
ಸೇವಿಸಿದರಿನ್ನು ದೇವ ದೇವಕ್ಕಿಗೆ ಕಂದನಾದ
ಗೋವಳರೊಡಿಯ ನಮ್ಮ ಗೋಪಾಲವಿಟ್ಠಲನ್ನ
ಕಾವೊ ಘನವಯ್ಯಾ ಇನ್ನಾವಲ್ಲಿದ್ದರನ್ನ ॥ 4 ॥
ತ್ರಿವಿಡಿತಾಳ
ಲೋಕಾ ಲೋಕದೊಳು ಅನೇಕ ಜೀವರುಂಟು
ಲೋಕಾ ಲೋಕಾಚಾರ ಅನೇಕ ಕರ್ಮಗಳುಂಟು
ಲೋಕ ಲೋಕದೊಳಗೆ ತ್ರಿವಿಧ ಜೀವರುಂಟು
ಲೋಕ ಲೋಕಕೆ ಎಲ್ಲ ಸಾಕುವನೊಬ್ಬನೆ
ಕಾಕುಗೊಂಡಿನ್ನು ಕಂಡವರಿಗೆ ಬೇಡಿದರೆ
ತಾ ಕೊಡುವರೆಲ್ಲಿಂದ ತಾ ಕಾಣದವರೆಲ್ಲ
ಸಾಕುವನೊಬ್ಬನೆ ಸಕಲ ಜೀವರುಗಳ
ನೀ ಕೇಳು ಮನವೆ ನಿನ್ವ್ಯಾಕುಲವನು ಬಿಡು
ಏಕ ಚಿತ್ತದಲಿನ್ನು ಏಕೋದೇವನ ಭಜಿಸು
ಸಾಕಲ್ಯ ಗುಣಪೂರ್ಣ ಗೋಪಾಲವಿಟ್ಠಲ
ಲೋಕದಿಂದಲಿ ಭಿನ್ನ ಲೋಕರ ಪಾಲಕ ॥ 5 ॥
ಅಟ್ಟತಾಳ
ತ್ರಿವಿಧ ಜೀವರು ಉಂಟು ತ್ರಿವಿಧ ಕರ್ಮಗಳುಂಟು
ತ್ರಿವಿಧ ಗುಣಗಳುಂಟು ತ್ರಿವಿಧ ಕಾರ್ಯಗಳುಂಟು
ತ್ರಿವಿಧರೊಳೊಂದೊಂದು ತ್ರಿವಿಧ ಬಗೆಯೆ ಉಂಟು
ತ್ರಿವಿಧ ಜೀವರ ಕಾರ್ಯ ಶ್ರೀಹರಿ ಆಧೀನ
ತ್ರಿವಿಧರಿಂದಲಿ ಭಿನ್ನ ತ್ರಿವಿಧರ ಪಾಲಕ
ತ್ರಿವಿಕ್ರಮ ಮೂರುತಿ ಗೋಪಾಲವಿಟ್ಠಲನ್ನ
ತಿಳಿದು ಸಾಕಲ್ಯದಿ ತಿಳಿಯಲಿ ವಶವಲ್ಲ ॥ 6 ॥
ಆದಿತಾಳ
ಈತನೆ ನಮ್ಮ ದೇವ ಈತನೆ ನಮ್ಮ ಕಾವಾ
ಈತನೆ ನಮ್ಮ ತಂದೆ ಈತನೆ ನಮ್ಮ ತಾಯಿ
ಈತನೆ ನಮ್ಮ ಬಂಧು ಈತನೆ ನಮ್ಮ ಬಳಗಾ
ಈತನೆ ಇಹ ನಮಗೀತನೆ ಪರವೋ
ಈತನೆ ದೇಶವು ಈತನೆ ದಿಕ್ಕಿನ್ನು
ಈತನೆ ಗತಿ ಇನ್ನೊಂದು ದೈವವಿಲ್ಲ
ವಾತಜಾತನ ಪಿತ ಗೋಪಾಲವಿಟ್ಠಲ
ಸೋತೆನೆಂದವರ ಬೆನ್ಹತ್ತಿ ಪಾಲಿಸುವನು ॥ 7 ॥
ಜತೆ
ಬಿಡೆನು ಬಿಡೆನು ಇನ್ನು ಮುಂದೆ ಇದೆ ದೈವಾ
ಪಿಡಿದೆ ಗೋಪಾಲವಿಟ್ಠಲನ ಅಡಿಗಳ ಅನುದಿನ ॥
****