ನಡೆದು ಬಾರಯ್ಯ ಕೃಷ್ಣ ನಡೆದು ಪ
ಪಕ್ಷಿವಾಹನ ಪರಪೇಕ್ಷಾರಹಿತ ನಿನ್ನ ಕುಕ್ಷಿಯೊಳಗೆ ಜಗ
ರಕ್ಷಿಸುವಾತನೆಂದು ವಕ್ಷಸ್ಥಳದಿ ಶ್ರೀಮಾ-
ಲಕ್ಷ್ಮಿಧರಿಸಿ ಪಾಂಡುಪಕ್ಷನೆನಿಸಿ ನೀ ಪ-
ರೀಕ್ಷಕನುಳುಹಿದಂತಕ್ಷದಿ ನೋಡುತಧೋಕ್ಷಜ ಹರಿಯೆ 1
ಸತ್ಯವಂತನೆ ಕೇಳಸತ್ಯ ಅಜ್ಞಾನ ಭವ-
ಕತ್ತಲೊಳಗೆ ಬಹಳ ಶತ್ರು ಸಮೂಹದಲ್ಲಿ
ಸುತ್ತಿ ಬಳಲುವೆ ಕೇಳಾಪತ್ತು ಬಾಂಧವ ನಿನ್ನ
ಚಿತ್ತಕ್ಕೆ ತಂದು ಸಮಸ್ತ ಸುರೇಶ ನಿನ್ನ
ಹತ್ತಿಲೆ ಕರಿ ಸರ್ವೋತ್ತಮ ಹರಿಯೆ 2
ಧೀರ ಗಂಭೀರ ನಿನ್ನ ಸಾರಥ್ಯ ದೊರೆಯಲ್ವಿ-
ಚಾರ ಮಾಡಿದರು ನಿನ್ನಾರು ತಿಳಿಯಲಿಲ್ಲೊ
ಶೂರ ಸುತಗೆ ಸುಕುಮಾರನೆನಿಸಿದಂಥ ಅ-
ಪಾರ ಮಹಿಮನೆ ಸಮೀರಜ ಭವ ಸುರ
ನಾರದಪ್ರಿಯನೆ ಉದ್ಧಾರಮಾಡು ಎನ್ನನು 3
ಗಜರಾಜ ವರದನೆ ತ್ರಿಜಗದೊಡೆಯ ನಿನ್ನ
ಧ್ವಜ ವಜ್ರಾಂಕುಶ ಪಾದಭಜಕರೆನಿಸುವಂಥ
ಸುಜನರ್ವಂದಿತನಾದ ಕುಜನ ಕುಠಾರಿಯೆ ನೀ
ಅಜಮಿಳಗೊಲಿದಂಥಜಗಣೇಂದ್ರನ ಪ್ರಿಯ
ನಿಜವಾಗಿ ನೋಡೆನ್ನ ರಜತಮ ಕಳೆಯುವ 4
ಕಡಲಶಯನನಾದ ಉಡುರಾಜ್ವದನ ಬಿಟ್ಟು
ಭಿಡಿಯ ಭೀಮೇಶ ಕೃಷ್ಣ್ನೆನ್ನೊಡೆಯನೆನುತ ಬಂದ
ಬಡವ ಸುದಾಮಗಿಟ್ಟಿ ಹಿಡಿ ಹಿಡೀ ಎಂದು ಭಾಗ್ಯ
ತಡೆಯದೆ ನಾ ನಿನ್ನಡಿಗಳಿಗೆರಗುವೆ ಕೊಡು
ಕೊಡು ವರಗಳ ಪೊಡವಿ ಪಾಲಿಪನೆ 5
***