ಕೂಸು ಕಂಡಿರ್ಯಾ ವಿಶ್ವದೊಳೊಂದು
ಕೂಸು ಕಂಡಿರ್ಯಾ ll ಧ್ರುವ ll
ವೇದವ ತಂದು ಉಳುಹಿತೀ ಕೂಸು
ಮೇದಿನಿ ಭಾರವ ತಾಳಿತೀ ಕೂಸು
ಸಾಧಿಸಿ ಧಾರುಣಿ ಗೆದ್ದಿತೀ ಕೂಸು
ಉದಿಸಿ ಸ್ತಂಭದೊಳು ಮೂಡಿತೀ ಕೂಸು ll 1 ll
ಭೂಮಿಯ ಮೂರಡಿ ಮಾಡಿತೀ ಕೂಸು
ನೇಮದಿ ಪರಶುವ ಹಿಡಿಯಿತೀ ಕೂಸು
ಸಮುದ್ರ ಸೇತುವೆ ಕಟ್ಟಿತೀ ಕೂಸು
ಕಾಮ ಪೂರಿಸಿತೀ ಕೂಸು ll 2 ll
ಬೆತ್ತಲೆ ತ್ರಿಪುರದಲಿ ಸುಳಿಯಿತೀ ಕೂಸು
ವಸ್ತಿ ಕುದುರೆ ನಾಳಿತೀ ಕೂಸು
ನಿತ್ಯಮಹಿಪತಿ ಮನದೊಳಗಾಡುವ ಕೂಸು
ಸತ್ಯಸನಾತನಾಗಿಹ್ಯ ಕೂಸು ll 3 ll
***