ಏ ರಂಗಧಾಮ ರಂಗ ಏ ರಂಗಧಾಮ ಪ.
ನಾರುವ ಮೈಯವನತ್ತ ಸಾರು ಮುಟ್ಟದಿರೊ ಎನ್ನ
ದೂರನಿಲ್ಲು ತರವಲ್ಲ ಏ ರಂಗಧಾಮ
ಸಾರ ಶ್ರುತಿಗಳ ತಂದು ವಾರಿಜಸಂಭವಗಿತ್ತೆ
ಧೀರ ಮತ್ಸ್ಯರೂಪಕಾಣೆ ಎಲೆ ಸತ್ಯಭಾಮೆ 1
ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು
ಡÉೂಂಕಿದೇನೋ ಪೇಳೋ ಏ ರಂಗಧಾಮ
ಸಿಂಧುಮಥನವ ಮಾಡಲಂದು ಮಂದರ ಮುಳುಗೆ
ಬಂದು ನೆಗಹಿದ ಕೂರ್ಮ ಎಲೆ ಸತ್ಯಭಾಮೆ 2
ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು
ಗಾಡಿಕಾರ ನೀನಾರಯ್ಯ ಏ ರಂಗಧಾಮ
ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ
ಕಾಡವರಾಹನು ಕಾಣೆ ಎಲೆ ಸತ್ಯಭಾಮೆ 3
ಮನುಷ್ಯಾಗಿದ್ದಮೇಲಣಕಾನನದ ಮೃಗರಾಜ
ಆನನವಿದೇನೊ ಪೇಳೊ ಏ ರಂಗಧಾಮ
ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ
ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ 4
ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ
ತಿರುಕನೆಂಬೋದರಿಯದಾದೆನೊ ಏ ರಂಗಧಾಮ
ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ
ಗರುವ ವಾಮನ ಕಾಣೆ ಎಲೆ ಸತ್ಯಭಾಮೆ 5
ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ
ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ
ಮಡುಹಿ ಕ್ಷತ್ರೇರನೆಲ್ಲ [ಮುದದಿ] ಸೇರ್ದ ಮಾತೆಗಾಗಿ
ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ 6
ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ
[ಕಾರಣ]ವಿದೇನೊ ಪೇಳೊ ಏ ರಂಗಧಾಮ
ಕ್ರೂರರಾವಣನ ಗೆಲಿದು ನಾರಿಸೀತೆಯನು ತÀಂದ
ಧೀರರಾಘವನು ಕಾಣೆ ಎಲೆ ಸತ್ಯಭಾಮೆ 7
ವಲ್ಲಭೆಜನರಿಗೆಲ್ಲ ನೀ ವಲ್ಲಭನಾಗಿ
ಗೊಲ್ಲನಂತೆ ಗೋವ ಕಾಯುವ ಕಾರಣವೇನೊ ಏ ರಂಗಧಾಮ
ಬಿಲ್ಲಹಬ್ಬಕ್ಕೆ ಹೋಗಿ[ಮಲ್ಲ] ಕಂಸನ ಕೊಂದ
ಬಲ್ಲಿದ ಶ್ರೀಕೃಷ್ಣ ಕಾಣೆ ಎಲೆ ಸತ್ಯಭಾಮೆ 8
ನಗೆಗೀಡು ಮಾಡಿಕೊಂಡು ದಿಗ್ವಸನನಾಗಿ ನಿಂತ
ಹಗರಣವಿದೇನೊ ಪೇಳೊ ಏ ರಂಗಧಾಮ
ಮಿಗೆ ಮೂರುಪುರದ ಸತಿಯರ ವ್ರತವ ಕೆಡಿಸಿ
ಜಗವ ಮೋಹಿಸುವ ಬೌದ್ಧ ಎಲೆ ಸತ್ಯಭಾಮೆ 9
ಕರದಿ ಖಡ್ಗವನೆ ಪಿಡಿದು ತರಳ ಅಶ್ವವನೇರಿ
ತಿರುಗುವುದಿದೇನು ಪೇಳೊ ಏ ರಂಗಧಾಮ
ವರ ಹಯವದನ ಹರುಷದಿಂದಲಾಡಿ ಪಾಡಿ ಕಲ್ಕಿಯಾದೆ
ಹರಿಲೋಚನೆ ಎಲೆ ಸತ್ಯಭಾಮೆ 10
***