ಶ್ರೀ ಗುರುರಾಮವಿಠಲ ದಾಸರ ರಚನೆ
ಹ್ಯಾಗೆ ಮುಕ್ತಿಯಾಗುವುದು ಕೂಗಿದರೇನು ಫಲ ಪ
ಯೋಗವರಿತು ತನ್ನಲಿರುವ ನಾಗಶಯ್ಯನನ ನೋಡದೆ ಅ.ಪ
ಗುರುಸೇವೆ ಮಾಡಲಿಲ್ಲ ಗುರುತು ತಿಳಿಯಲಿಲ್ಲ
ಅರಿತೆವೆಂದು ಹಾರಾಡುವ ಅಹಂಕಾರಿಗಳಿಗೆ
1
ವೇದಶಾಸ್ತ್ರ ಓದಲಿಲ್ಲ ವಾದವಿಲ್ಲಿ ಸಲ್ಲ
ಬೋಧೆ ಮನಸಿಗಂಟಲಿಲ್ಲ ಬುದ್ಧಿಶೂನ್ಯರಿಗೆಲ್ಲ
2
ಜೀವರಕ್ಷಣ ತಿಳಿಯದೆ ದೇವರನ್ನು ನಂಬದೆ
ನಾವು ನಮ್ಮದೆಂಬುದು ಬಿಡದೆ ಸಾವ ಕುನ್ನಿಗಳಿಗೆ
3
ಬಾಯಿಮಾತಿಲಿಂದಲೇನು ಮಾಯವಾದಗಳೇನು
ನ್ಯಾಯಮಾರ್ಗವರಿತವನು ಕಾಯದಾಸೆಮಾಡನು
4
ಗುರುರಾಮವಿಠ್ಠಲನ ಸ್ಮರಣೆಯ ಮಾಡದೆ
ಗರುವದಿ ಮೆರೆಯುವ ದುರುಳ ನರರಿಗೆ
5