ರಕ್ಷಿಸೋ ಜಗನ್ನಾಥದಾಸ ರಕ್ಷಿಸೋ
ರಕ್ಷಿಸು ಗುರು ಜಗನ್ನಾಥದಾಸ
ಪಕ್ಷಿವಾಹನನ ನಿಜದಾಸ ಮು
ಮುಕ್ಷು ಮಾರ್ಗವ ತೋರ್ದಧೀಶ ನೀನೆ ಪ್ರ
ತ್ಯಕ್ಷ ಪ್ರಹ್ಲಾದನನುಜ- ||ಅಹಾ||
ಈ ಕ್ಷಿತಿಯೊಳು ಸುರಶ್ರೇಷ್ಠನೆನಿಸಿ ವಿ
ಶಿಷ್ಟರ ಮನೋಭೀಷ್ಟವನಿತ್ತ ಹರಿದಾಸ 1
ವೇದವಂದ್ಯನ ನಿಜತತ್ತ್ವ ನಿಜ
ಸಾಧುಜನರು ತಿಳಿಯೆ ನಿತ್ಯ (ಸತ್ಯ) ಪೂರ್ಣ
ಬೋಧರ ಗ್ರಂಥ ತತ್ತ್ವ ನೀತಿ ತ
ಪ್ಪದೆ ಪೇಳ್ದೆ ಮಹತ್ವ ||ಅಹಾ||
ಮೋದಪಡಿಸಿ ಮೋದತೀರ್ಥರ ಮತ ದು
ಗ್ಧಾಬ್ಧಿಸುಧೆಯನಿತ್ತ ಬಾದರಾಯಣನ ದಾಸ 2
ಪ್ರಕೃತಿಬಂಧಕರಾದ ಜನರು ನಿನ್ನ
ಪ್ರಾಕೃತಗ್ರಂಥನೊಡಿ ಮೋದಿಪರು ಸತತಾ
ಪ್ರಾಕೃತನ ತಾ ವಂದಿಪರು ಜನ್ಮ
ಸುಕೃತಕ್ಕೆ ತಾವು ಸಾಧಿಪರು ||ಅಹಾ||
ಸಂಸ್ಕøತ ಭಾಷೆಯ ಪ್ರಕರಣಗಳನೆಲ್ಲ ಪ
ರಿಷ್ಕøತ ಪಡಿಸಿ ನೀ ಪ್ರಾಕೃತದೊಳು ತೋರ್ದೆ3
ವಿಪ್ರವರೇಣ್ಯನೆ ನೀನು ಜಗದಿ
ಅಪ್ರಮೇಯನ ಪ್ರಮೇಯವನ್ನೂ ಅದಕ್ಕೆ
ಸಪ್ರಮಾಣಗಳೆಲ್ಲವನ್ನೂ ತೋರಿ ದಿ
ಕ್ ಪ್ರದರ್ಶನ ಮಾಡಿ ಇನ್ನೂ ||ಅಹಾ||
ಸ್ವಪ್ರಯೋಜನ ರಹಿತ ಅಪ್ರಮೇಯನ ಮಹಿಮೆ
ಕ್ಷಿಪ್ರ ಭೋಧೆಯಾಗಲ್ ತ್ವತ್ಪ್ರಸಾದವನಿತ್ತೆ4
ನಿನ್ನುಪಕಾರದ ಪರಿಯಾ ನಾನು
ಜನ್ಮಜನ್ಮಾಂತರಕೆ ಮರೆಯೆ ನೀನೆ
ಘನ್ನ ಶ್ರೀಹರಿದಾಸಾಗ್ರಣಿಯೇ ಇನ್ನು
ನಿನ್ನ ಹರಿಕಥಾಮೃತಸಾರಕ್ಕೆಣೆಯೇ ||ಅಹಾ||
ಇನ್ನಿಲ್ಲ ನಿನ್ನಂಥ ಘನ್ನ ಕವಿಗಳ ಕಾಣೆ
ಪನ್ನಂಗಶಯನ ಶ್ರೀ ವೆಂಕಟೇಶನ ದಾಸಾ 5
****