Audio by Mrs. Nandini Sripad
ರಾಗ ಸಿಂಧುಭೈರವಿ
ಧ್ರುವತಾಳ
ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ಪ |
ನಗದ ಪ್ರದೇಶ ಇದರ ಅಗಲಾ ಸುತ್ತ ಯೋಜನ |
ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ |
ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು |
ಅಗಣಿತದಲ್ಲಿ ಭಕ್ತಗೆ ತಂದು ಕೊಡುವದೂ |
ನಿಗಮಾಸನ್ನುತ ಹರಿ ಮೊಗನ ಹಗೆಗಳಿಗಿಲ್ಲ |
ಖಗರಾಜಾನಿಲ್ಲಿ ತಪಸಿಗನಾಗಿ ಕೃಷ್ಣನ |
ಹೆಗಲಲ್ಲಿ ಪೊತ್ತು ತಿರಗುವ ವರವನ್ನು ಪಡೆದು |
ಪೊಗಳಿದ ಜನ ಕಣ್ಣಿಗೆ ಸುಳಿವ ಸುಲಭಾ ನರ - |
ಮೃಗರೂಪ ವಿಜಯವಿಠ್ಠಲಾ ಕದರಿನಿವಾಸ |
ಬಗೆಬಗೆಯಿಂದ ಚನ್ನಿಗನಾಗಿ ಮೆರೆವ ॥ 1 ॥
ಮಟ್ಟತಾಳ
ಪ್ರಹ್ಲಾದಗೆ ಮೆಚ್ಚಿ ಶ್ರೀಹರಿ ಉದುಭವಿಸಿ |
ಅಹಿತ ದಿತಿಸುತನ ಆವಹದೊಳು ಕೊಂದು |
ಸಾಹಸವುಳ್ಳ ಸುರರ ದಾಹನ ಮಾಡುವೆನೆಂದು |
ಅಹೋಬಲದಿಂದ ಈ ಮಹಿಯೊಳಗೆ ಸ್ತೋತ್ರ |
ಮಹಿಧರಕೆ ಬಂದು ವಹಿಲದಲ್ಲಿ ಕೆಡಹಿ
ಖಳರ ಕೊಂದೂ ಗಹಗಹಿಸಲು
ವಾರಿರುಹ ಭವಬಂದು ಬಿನ್ನಾಹ ಮಾಡುತಿರಲು ಬಹು ಮಹಿಮನಾದ ವಿಜಯವಿಠ್ಠಲರೇಯಾ |
ಮಹ ಸಂತೋಷದಲಿ ಬಾಹುಬಲದಿ ಮೆರೆದಾ ॥ 2 ॥
ತ್ರಿವಿಡಿತಾಳ
ಈ ತೆರದಲಿ ಇಲ್ಲಿ ನರಹರಿ ಇರುತಿರೆ |
ಶ್ವೇತ ಮುನೇಶ್ವರ ಬಂದು ವೇಗ |
ತಾ ತಪವನೆ ಮಾಡಿ ಚಿತ್ತ ನಿರ್ಮಳದಲ್ಲಿ |
ಖ್ಯಾತ ಪಡೆದ ವರವಿನಿಂದ |
ಭೂತಳದೊಳಗಿದ್ದು ಅಂದಾರಭ್ಯವಾಗಿ |
ಶ್ವೇತಾರಣ್ಯ ಕಾಣೊ ನಾಮದಲ್ಲೀ |
ಭೀತಿಯಿಂದಲಿ ಭೃಗುನು ಇಲ್ಲಿ ತಪವನೆ ಮಾಡಿ |
ಪಾತಕ ಪರಿಹಾರ ಮಾಡಿಕೊಂಡ |
ಶ್ವೇತವಾಹನನಂದು ಯಾತ್ರಿ ಮಾಡುವಾಗ |
ನೀತಿಯಿಂದಲಿ ಇಲ್ಲೆ ಶುದ್ಧನಾದ |
ಭೂತಾಧಿಪನೆ ಬಲ್ಲ ಇದರ ಮಹಿಮೆಯನ್ನು |
ಪ್ರೀತಿಯಿಂದಲಿ ನಾರದಗರುಹಿದ |
ಮಾತುಳವೈರಿ ಸಿರಿ ವಿಜಯವಿಠ್ಠಲ ಮಾಂ - |
ಧಾತಾನಿಂದಲಿ ಪೂಜೆಗೊಂಡು ವರವನಿತ್ತ ॥ 3 ॥
ಅಟ್ಟತಾಳ
ಶ್ವೇತ ಪುಷ್ಕರಣಿಯು ಭವನಾಶಿ ಭೃಗುತೀರ್ಥ |
ಶ್ವೇತವಾಹನ ವಶಿಷ್ಟ ನಾರದತೀರ್ಥ |
ಧಾತಾ ನರಸಿಂಗ ಇಂದ್ರಾದ್ಯಷ್ಟತೀರ್ಥ |
ಪಾತಕಹರ ಋಣಮೋಚನತೀರ್ಥ ಮ - |
ಹಾತಿಶಯವುಳ್ಳ ರಾಮ ಶಂಖಾಚಕ್ರ |
ಶ್ವೇತ ನಾನಾ ಚಂದ್ರ ಸೂರ್ಯತೀರ್ಥ |
ಅಷ್ಟೋತ್ತರ ತೀರ್ಥಗಳಲ್ಲಿ ಉಂಟು ಶು - |
ದ್ಧಾತುಮಾ ಬಂದೊಂದು ಮಜ್ಜನಮಾಡಲು |
ಜ್ಞಾತಿಗಳ ಕೂಡ ಸದ್ಗತಿ ಐದುವ |
ವಾತಾವಿನುತ ಸ್ವಾಮಿ ವಿಜಯವಿಠ್ಠಲರೇಯಾ |
ಮಾತೂಮಾತಿಗೆ ನೆನಿಸೆ ಒಲಿದು ಸಂಗಡ ಬಪ್ಪ ॥ 4 ॥
ಆದಿತಾಳ
ಅರ್ಜುನ ನದಿಯಲ್ಲಿ ಸಜ್ಜನರ ಕೂಡ |
ಮಜ್ಜನವನ್ನು ಮಾಡಿ ಹೆಜ್ಜಿಹೆಜ್ಜಿಗೆ ನಿ - |
ರ್ಲಜ್ಯರಾಗಿ ಹರಿಯಾ ಗರ್ಜನೆಯಲಿ ನುಡಿದು |
ಮೂರ್ಜಗದೊಳು ಬಲು ಪೂಜ್ಯವಂತರಾಗಿ |
ಅರ್ಜುನ ಮರದೆಡಿಯಾ ಇಪ್ಪ ವಿಜಯವಿಠ್ಠಲ |
ನಿರ್ಜರಾಗಣದೊಡನೆ ಪಾಲಿಸುವಾ ಫಲವರಿತು ॥ 5 ॥
ಜತೆ
ಖಾದ್ರಿ ಪುರಾನಿಲಯಾ ನರಶಿಂಗಾ ಭವಭಂಗ |
ಭದ್ರಾ ಮೂರುತಿ ಜನಾರ್ದನ ವಿಜಯವಿಠ್ಠಲಾ ॥
****************