ಮೋಸಹೋದೆವೈ ಸಖಿ ವಾಸುದೇವನ ತಿಳಿಯದೆ ಪ
ಮೋಸಹೋದೆವೈ ಸಖಿ ಮೂಸಿತು ಮನವಮ್ಮ
ದೋಷದೂರ ಜಗದೀಶನ ಈ ಲೋಕಶಿಶುವೆಂದರಿಯುತ ಅ.ಪ.
ಪುಟ್ಟಿದ ಶಿಶು ಮೊಲೆ ಕೊಟ್ಟವಳಳಿದನೆ
ಸುಟ್ಟಾನು ದೈತ್ಯರ ಗೋಷ್ಠಿಗಳೆಲ್ಲವ
ಬೆಟ್ಟವನೆತ್ತುತ ವೃಷ್ಟಿಯ ತಡೆದನೆ
ಮೆಟ್ಟುತ ಕಾಳಿಯ ತುಷ್ಟಿಯ ನೀಡಿದನೆ
ಇಷ್ಟಾದರುನಾವು ತಿಳಿಯದೇ
ಸೃಷ್ಟಿಗೊಡೆಯ ಬಹು ದುಷ್ಟನು ಎಂದೇವೆ
ಪಟ್ಟೆ ಪೀತಾಂಚರ ಕದ್ದವನೆಂದೇವೇ
ಪುಟ್ಟವನಿವ ಗೋಗೋಷ್ಟಿಯ ಕಾಯುವ
ಇಟ್ಟನು ಕಣ್ಣನು ನಮ್ಮಲೆಂದೇವೇ
ಜೇಷ್ಠ ಶ್ರೇಷ್ಠ ಪರಾತ್ಪರ ಹರಿ ಸಂ-
ತುಷ್ಟ ಗುಣಾರ್ಣವ ನಿರುಪಮ ಸುಖಿ ಜಗ-
ಚೇಷ್ಟೆಯ ನಡೆಸುವ ಶಿಷ್ಯರ ಧೂರೆ ಪರ-
ಮೇಷ್ಠಿಯ ಪಿತ ನೆಂದರಿಯದೆ ಕೃಷ್ಣನಾ 1
ಮೆಲ್ಲನೆ ಬಾಯಲಿ ಲೋಕವ ನೆಲ್ಲವ ತಾಯಿಗೆ ತೋರಿದನೆ
ಬಲ್ಲಿದನಿವ ತಾ ಬೆಂಕಿ ಜ್ವಾಲೆಯನುಂಗುತ ತಾಪೊರೆದನೆ
ಗೊಲ್ಲರಪತಿ ಮುಳುಗಲು ಪಾತಾಳದಿ ತಂದನೆ ತಂದೆಯನು
ಬಾಲರ ಗುಂಪಿಗೆ ಲೋಕಗಳೆಲ್ಲವ ನೀರೋಳು ತೋರಿದನೆ
ಬಾಲಿಶರಾಗುತ ತಿಳಿಯದೆ ಕಳ್ಳನು ಪಾಲ್ಬೆಣ್ಣೆಯ
ಮೆದ್ದನು ಎಂದೇವೇ
ನಿಲ್ಲದೆ ನಿಶಿಯೊಳು ನಮ್ಮನು ಕೆಡಿಸಿದನೆಂದೇವೆ
ಸುಳ್ಳನು ಹೇಳುವ ಜಾಣ ಗೋಪಾಲನು ಎಂದೇವೇ
ಸಲ್ಲದ ನುಡಿಗಳ ನಾಡುತ ಕಾಲವ ಕಳೆದೇವೇ
ಎಲ್ಲರ ಹೃದಯದಿ ಮತ್ತೆ ಬ್ರಹ್ಮಾಂಡದಿ ಒಳಹೊರ-
ನೆಲ್ಲಿಯು ತುಂಬಿಹಏಕನು ಬಲ್ಲನು ಎಲ್ಲವ
ಎಲ್ಲವ ಮಾಡುತ ಮಾಡಿಸಿ ಪೊರೆವನು ದೋಷಗಳಿಲ್ಲದ
ಸ್ವರತ ರಮಾಧವ ಕೃಷ್ಣನು ಎನ್ನದೇ 2
ತಿಂಗಳ ಬೆಳಕಲಿ ರಂಗನು ಬಂದಾನೇ
ಅಂಗಜತಾಪವ ಹರಿಸುವೆನೆಂದಾನೆ
ಕಂಗಳಿಗ್ಹಬ್ಬವ ನೀಡುತ ಪೊರೆದಾನೇ
ಹಿಂಗದೆ ತನುಮನ ಎಲ್ಲವ ಸೆಳೆದಾನೇ
ಮಂಗಳಕಾಯನು ನೀಡಲು ನಮಗಾ
ಲಿಂಗನ ಸುಖವನು ಬಹುಮುಡಿ ಆದಾನೇ
ಅಂಗವ ಮರೆಸುತ ಮಹದಾನಂದ ತ-
ರಂಗದಿ ಒಯ್ಯುತ ಚೆಲುವನು ಕೂಡಿದನೇ
ಅಂಗನೆ ಬುದ್ಧಿಲಿ ಇವನನು ತಿಳಿಯದೇ
ರಾಗ ವಿಹೀನನ ನಮ್ಮೊಡನಾಡಿಯು ಎಂದೇವೇ
ಸಾಗುತ ಬಂದಿಹ ನಮ್ಮಯ ರೂಪಕೆ ಎಂದೇವೇ
ನಮ್ಮನು ಕೂಡುತ ಭೋಗವ ಪಡೆಯುವನೆಂದೇವೇ
ಗಾಗ್ರ್ಯರು ಮುಂಚೆಯೆ ಪೇಳಿದ ನುಡಿಗಳ ಮರೆತೇವೇ
ಭೋಗಿಶಯನ ಜಗದೇಕವೀರ ಸಕಲಾಗಮ ವಂದಿತ
ಸಾಗಿಸೆ ದಿತಿಜರ ಕೃಷ್ಣನು ಬಂದಿಹ ದೇವಕಿ ಜಠರದಿ
ಬಾಗುತ ಜಯಮುನಿ ವಾಯ್ವಂತರ್ಗತ ಶ್ರೀ ಕೃಷ್ಣವಿಠಲನು
ಭಾಗವತgಶ್ರಯ ಪೂರ್ಣಾನಂದನ ಲೀಲೆಯ ತಿಳಿಯದೇ 3
****