ankita ತಂದೆವೆಂಕಟೇಶವಿಠಲ
ರಾಗ: ಭೈರವಿ ತಾಳ: ಆದಿ
ಶರಣಾಗತರ ಪೊರೆವ ಪರಮಾದ್ಭುತಚರ್ಯ
ಗುರುವೇ ಪಾಲಿಸೊ ನಿರುತ ಶ್ರೀರಾಘವೇಂದ್ರಾ ಪ
ದುರುಳ ದುಸ್ತರ್ಕದುಸ್ತರ ಮೋಹತಿಮಿರಕೆ
ತರುಣಾರ್ಕಸನ್ನಿಭ ಗುರುರಾಘವೇಂದ್ರಾ ಅ.ಪ
ಪ್ರಥಿತ ಚತೂಷಷ್ಟಿವಿತರಣವಿದ್ಯಾಮಾ-
ನಿತ ಮನ್ಮಥಾಹಿತಾಪ್ರತಿ ರಾಘವೇಂದ್ರ
ಕೃತಕ್ರತುಸದ್ಮ ಸನ್ಹಿತಶ್ರಿತಜನಪರಿ-
ವೃತ ಬೃಂದಾವನಸ್ಥಿತ ಶ್ರೀ ರಾಘವೇಂದ್ರಾ 1
ಅಲವಬೋಧಾಗಮ ಜಲನಿಧಿ ಚಂದ್ರಮ
ವಿಲಸಿತಗುಣಗಣಾನ್ವಿತ ರಾಘವೇಂದ್ರಾ
ಖಳರಾಜಸುಕುಮಾರ ಖಳರಾಜಸೋದರ
ಖಳಚರ ಖಳಹರಕುಲಜ ರಾಘವೇಂದ್ರಾ 2
ಸ್ತುತ್ಯ ಗ್ರಹಫಲ ಸಕಲಸತ್ತೀರ್ಥಾಮಿತ ಫಲ-
ವಿತ್ತಪುದು ತವ ಸ್ತವನ ಶ್ರೀರಾಘವೇಂದ್ರಾ
ವಿತ್ತವಿಹೀನತಾಪತ್ಯರಾಹಿತ್ಯಾದಿ
ತೆತ್ತದೋಷಕೆ ಅಪಮೃತ್ಯು ನೀ ರಾಘವೇಂದ್ರಾ 3
ಖಂಡಾರ್ಥ ವಿವೃತ್ತ್ಯಾದ್ಯ ಖಂಡಾಲಾಯುಧಧರ
ಪಂಡಿತೋತ್ಪಲಮುಖಾ ಖಂಡೇಂದು ರಾಘವೇಂದ್ರಾ
ದಂಡಕಾಷಾಯ ಕಮಂಡಲುಧಾರಿ ಕೋ-
ದಂಡಪಾಣಿ ಪಾದ ಬಂಡುಣಿ ರಾಘವೇಂದ್ರಾ 4
ತಂದೆವೆಂಕಟೇಶಾವಿಠಲಾ ಪಾದಾರ್ಚಕ
ನಿಂದಕಜನಕದಳಿ ಸಿಂಧೂರ ರಾಘವೇಂದ್ರಾ
ಸುಂದರ ಯತಿವರ ವೃಂದಾವನವಾಸಿ
ವಂದಿತಜನಸುರಮಂದಾರ ರಾಘವೇಂದ್ರಾ 5
***
ದುಸ್ತರ್ಕ=ಕೆಟ್ಟ ವಾದ; ದುಸ್ತರ=ದಾಟಲಶಕ್ಯವಾದ;
ಪ್ರಥಿತ=ಹೆಸರುವಾಸಿಯಾದ; ಚತೂಷಷ್ಠಿ ವಿತರಣ
ವಿದ್ಯ=64 ವಿದ್ಯೆಗಳು; ಕೃತಕ್ರತು ಸದ್ಮ=ಯಾಗ
ಮಾಡಿದ ಸ್ಥಳ; ಖಳ ರಾಜ ಸೋದರ=ವಿಭೀಷಣ;
ಖಳಚರ=ಬಾಹ್ಲೀಕ (ದುರ್ಯೋಧನನಿಗೆ ಸಹಾಯಕನಾಗಿ);
ಖಳಹರಕುಲಜ=ವಾಯುದೇವರ ಅಂದರೆ
ಶ್ರೀಮಧ್ವಾಚಾರ್ಯರ ಪರಂಪರೆಯಲ್ಲಿ ಬಂದ
ಶ್ರೀ ವ್ಯಾಸರಾಜರು ; ಆಖಂಡಾಲಾಯುದಧರ=ಇಂದ್ರನ
ವಜ್ರಾಯುಧಕ್ಕೆ ಸಮನಾದ ಗ್ರಂಥಗಳನ್ನು ಹೊಂದಿರುವ
(ರಚಿಸಿರುವ); ಪಂಡಿತೋತ್ಪಲ ಮುಖ
ಖಂಡೇಂದು=ಪಂಡಿತರ ಮುಖವೆಂಬ ನೈದಿಲೆಗೆ
ಪೂರ್ಣಚಂದ್ರ ಸದೃಶ; ಬಂಡುಣಿ=ದುಂಬಿ;
ನಿಂದಕಜನಕದಳಿ ಸಿಂಧೂರ=ನಿಂದಕರೆಂಬ
ಬಾಳೆಯ ತೋಟಕ್ಕೆ ಆನೆಯಂತೆ;