ಮೈಸೂರಿನ ಶ್ರೀ ಗೋವಿಂದರಾಯರಿಗೆ ಪ್ರಮಾಥಿ ನಾಮ ಸಂವತ್ಸರದ ಫಾಲ್ಗುಣ ಬಹುಳ ಪ್ರತಿಪದೆಯಂದು ( 24.03.1940 ) ಅಂಕಿತೋಪದೇಶವನ್ನು ತಮ್ಮ ಬಿಂಬಮೂರ್ತಿಯನ್ನು ಹೀಗೆ ಪ್ರಾರ್ಥಿಸುತ್ತಾ ಅನುಗ್ರಹಿಸಿದರು.
ರಾಗ : ಕಾಂಬೋಧಿ ತಾಳ : ಝಂಪೆ
ಗುರು ಗೋವಿಂದವಿಠಲನೆ ನೀನವರ ।
ಕರುಣಾ ಕಟಾಕ್ಷದಿಂದೀಕ್ಷಿಸುತಾ
ಕಾಪಾಡೋ ಹರಿಯೇ ।। ಪಲ್ಲವಿ ।।
ಗರುಡ ಗಮನನೆ ದೇವ -
ಗರ್ವಗಳ ಪರಿಹರಿಸಿ ।
ಸರ್ವಾಂತರಾತ್ಮಕನೇ
ಕಾಪಾಡೋ ಹರಿಯೇ ।। ಅ. ಪ ।।
ಸೃಷ್ಟ್ಯಾದಿಕರ್ತನೇ ಸುಗುಣ
ಮೂರುತಿ ದೇವಾ ।
ಕಷ್ಟಗಳ ಪರಿಹರಿಸಿ
ಕಾಪಾಡೋ ಹರಿಯೇ ।
ಕೃಷ್ಣಮೂರುತಿ ಹೃದಯ
ಅಷ್ಟದಳ ಮಧ್ಯದಲ್ಲಿ ।
ದೃಷ್ಟಿ ಗೋಚರನಾಗಿ
ಕಾಪಾಡೋ ಹರಿಯೇ ।। ಚರಣ ।।
ಅಪಾರ ಮಹಿಮನೆ
ಆಪದ್ಬಾಂಧವನಾಗಿ ।
ತಾಪತ್ರಯಗಳ ಕಡಿದು
ಕಾಪಾಡೋ ಹರಿಯೇ ।
ಕೋಪ ತಾಪಾದಿ ದುರ್ಗಗಳನೆ
ಪರಿಹರಿಸಿ ಭವ ।
ಕೂಪಾರದಿಂದೆತ್ತಿ ನೀ
ಕಾಪಾಡೋ ಹರಿಯೇ ।। ಚರಣ ।।
ಹರಿಯೇ ಸರ್ವೋತ್ತಮ
ಶಿರಿವಾಯು ಮೊದಲಾದ ।
ಸುರರೆಲ್ಲ ಕಿಂಕರರೆಂಬ ।
ವರ ಮಧ್ವ ಶಾಸ್ತ್ರ ಸಾರ್ವನೆ
ತಿಳಿಸಿ ಕಾಪಾಡೋ ಹರಿಯೇ ।
ಪರಮ ಪುರುಷನೆ ತಂದೆ -
ಮುದ್ದುಮೋಹನವಿಠಲನೇ ನಿನ್ನ ।
ಪರತರಾತ್ಮಕವಾದ ರೂಪವನೆ
ತೋರಿ ಕಾಪಾಡೋ ಹರಿಯೇ ।। ಚರಣ ।।
****