Showing posts with label ನಿನ್ನ ಚಿತ್ತ ಎನ್ನ ಭಾಗ್ಯ gopala vittala ankita suladi ಹರಿಸ್ವತಂತ್ರ ಸುಳಾದಿ NINNA CHITTA ENNA BHAGYA HARI SWATANTRA SULADI. Show all posts
Showing posts with label ನಿನ್ನ ಚಿತ್ತ ಎನ್ನ ಭಾಗ್ಯ gopala vittala ankita suladi ಹರಿಸ್ವತಂತ್ರ ಸುಳಾದಿ NINNA CHITTA ENNA BHAGYA HARI SWATANTRA SULADI. Show all posts

Saturday 5 June 2021

ನಿನ್ನ ಚಿತ್ತ ಎನ್ನ ಭಾಗ್ಯ gopala vittala ankita suladi ಹರಿಸ್ವತಂತ್ರ ಸುಳಾದಿ NINNA CHITTA ENNA BHAGYA HARI SWATANTRA SULADI

Audio by Mrs. Nandini Sripad


ಶ್ರೀಗೋಪಾಲದಾಸಾರ್ಯ ವಿರಚಿತ 


ಹರಿಸ್ವತಂತ್ರ ಸುಳಾದಿ 


(ಸ್ವಾಮಿ ಚಿತ್ತವೇ ಜೀವರಿಗೆ ಸರ್ವ ಭಾಗ್ಯ. ಇಂಥ ಜ್ಞಾನವೇ ಸುಜ್ಞಾನ. ಸಕಲ ಕಾಲ ಕ್ರೀಯೆ ಧರ್ಮಗಳಿಗೆ ಪ್ರೇರಕನೆ ಶ್ರೀಹರಿಯು.) 


ರಾಗ ಸಾವೇರಿ 


ಧ್ರುವತಾಳ 


ನಿನ್ನ ಚಿತ್ತ ಎನ್ನ ಭಾಗ್ಯ ಇನ್ನೊಬ್ಬರೆನಗೆ ಯಿಲ್ಲ

ಮನ್ನಣೆ ಅಮನ್ನಣೆ ನಿನ್ನದೊ ಸರ್ವೇಶನೆ

ಬೆನ್ನು ಕೊಟ್ಟೆನೊ ನಿನಗೆ ಎನ್ನ ಏನನ್ನ ಮಾಡು

ಕಣ್ಣಿಲಿ ಕಂಡ್ಯಾ ಅಷ್ಟು ಎನ್ನ ಕೇಳೋಣ ನಿನ್ನ

ಬಣ್ಣಿಸಿ ನಿನ್ನ ನಾನು ಘನ್ನ ಬೇಡುವದಿಲ್ಲ

ನನ್ನದೆಂಬೊ ಅಹಂಕಾರವನ್ನು ಬಿಡಿಸೊ ದೇವಾ

ಎನ್ನ ಸಂಕಲ್ಪವೆಲ್ಲ ನಿನ್ನ ಅಧೀನವಯ್ಯಾ

ನಿನ್ನ ಸಂಕಲ್ಪಕ್ಕಿನ್ನು  ಛಿನ್ನ ಭಿನ್ನಗಳಿಲ್ಲ

ನಿನ್ನಿಚ್ಛೆ ನೀ ಪ್ರೇರಕ ನಿನ್ನದೊ ಎನ್ನ ಭಾರಾ

ಇನ್ನು ಮುನ್ನೆ ಎಂದೆಂದು ಇನ್ನಿದೆ ಸಿದ್ಧವಯ್ಯಾ 

ಇನ್ನೊಂದು ನಾನರಿಯೆ ಎನ್ನೊಡಿಯನೆ ಕೇಳು

ಮನ್ನ ವಾಚಾ ಕಾಯದಿ ಇನ್ನು ಹೀಗೆ ಹಾರೈಸಿ

ಬಿನ್ನಹ ಮಾಡಿದೆ ನಿನ್ನ ನಿಲಿಸಿಕೊಂಡು

ಚಿನ್ನುಮಯ ಮೂರುತಿ ಗೋಪಾಲವಿಟ್ಠಲ

ನಿನ್ನ ಬೇಡುವೆನಲ್ಲದನ್ಯರಿಗಾಲ್ಪರಿಯೆ ॥ 1 ॥ 


ಮಟ್ಟತಾಳ 


ನಿನ್ನಿಂದಲಿ ದತ್ತವಿನ್ನು ಆಗದವಸ್ತ

ಅನಂತವಿದ್ದರು ಇನ್ನೊಲ್ಲೆ ಇನ್ನೊಲ್ಲೆ

ಅನ್ಯ ಕರ್ಮವ ಮಾಡಿ ಅನ್ಯ ದೈವವ ನೋಡಿ

ಎನ್ನುದರ ಪೂರ್ತಿಯನ್ನು ಮಾಡೋದಕ್ಕಿಂತ

ಬಣ್ಣಗೆಟ್ಟವನಾಗಿ ಅನ್ಯವಿಷಯವ ಬಿಟ್ಟು

ನಿನ್ನವನಾಗಿನ್ನು ಅನ್ಯವಿಲ್ಲದಲೆ ಅ -

ರಣ್ಯವಾ ಸೇರಿನ್ನು ಹಣ್ಣು ಹಂಪಲಮೆದ್ದು 

ನಿನ್ನ ವಿಷಯಕ್ಕೆ ಕರ್ಮ ನಿನ್ನ ವಿಷಯಕ್ಕೆ ಧರ್ಮ

ಇನ್ನೇನಾದದ್ದು ನಿನ್ನ ಪರವು ಮಾಡಿ

ಇನ್ನ ಇಡಿಸಿದರೆ ಘನ್ನುಪಕಾರವು ಇನ್ನೆಂದಿಗೆ ಮರಿಯೆ

ಚಿನ್ನುಮಯ ಮೂರುತಿ ಗೋಪಾಲವಿಟ್ಠಲ

ನಿನ್ನ ಚಿತ್ತಕೆ ಬಾರದಿನ್ನೆಂದಿಗೆ ವಲ್ಲೆ ॥ 2 ॥ 


ರೂಪಕತಾಳ 


ಹಾಗೆ ಇತ್ತೆ ಇನ್ನು ಹಾಗೆ ಆಗಲಿ ದೇವಾ 

ಹೀಗೆ ಇತ್ತೆ ಇನ್ನು ಹೀಗೆ ಆಗಲಿ ದೇವಾ

ಹಾಗೆ ಹೀಗೆ ಇನ್ನು ಎರಡು ಆಗಲಿ ದೇವ

ಆಗ ಅಂಜುವನಾರು ಈಗ ಅಳುಕುವನಾರು

ಆಗದಂಥ ಕಾರ್ಯ ಆಗ ಮಾಡುವನಾರು

ಆಗುವಂಥ ಕಾರ್ಯ ಆಗಲೀಸುವನಾರು

ಬಾಗಿದೆ ನಿನ್ನ ಚರಣಗಳಿಗೆ ನಾನು

ಹ್ಯಾಗೆ ಆದರೂ ಲೇಸೆ ನೀ ಯಿತ್ತ ಭಾಗ್ಯಕ್ಕೆ

ಹೋಗು ಹೊರಡೆಂದರೆ ಆಗೋದೆ ಎನ್ನಿಂದ

ಸಾಗು ಸಾಗಿ ಇನ್ನು ತೂಗಿದ ತೊಟ್ಟಿಲು

ಹೋಗಿ ಹೋಗಿ ತನ್ನ ಸ್ಥಳಕ್ಕೆ ನಿಲ್ಲುವದು

ಸಾಗರಶಯನ ಗೋಪಾಲವಿಟ್ಠಲ

ಭೋಗ ತೀರಿಸಿ ದೋಷ ನಿಯೋಗ ಮಾಡೊ ದೇವ ॥ 3 ॥ 


ಝಂಪೆತಾಳ 


ನೀ ನಿತ್ಯ ನಾ ನಿತ್ಯ ಅನಾದಿ ಕಾಲದಿ

ಏನು ಆಗುವ ಪ್ರೀತಿ ನಿನ್ನಿಂದಲೆ ಎನಗೆ

ಕಾಣದೊಂದು ಉಂಟೆ ನಿನ್ನ ಕಂಡವರಿಗೆ

ಜಾಣತನವ್ಯಾಕೆ ಎನ್ನೊಡನೆ ಮಾಜಲಿ ಬೇಡ

ಪ್ರಾಣರಿಗೆ ಒಂದೊಂದು ನಿತ್ಯ ವಸ್ತುಗಳಲ್ಲಿ

ಏನು ಭ್ರಮೆ ಪುಟ್ಟಿಸಿ ಮರುಳು ಮಾಡುವಿ ದೇವ

ಶ್ರೀನಾಥ ನಿನ್ನ ಸಾಹಸಕೆ ಆನೇನೆಂಬೆ

ಧೇನಿಸಿ ನೋಡ ಶತಆನಂದಗೊಶವಲ್ಲ

ಕಾಣುವೆನೆನ್ನಂಥ ನರಗೂರಿಯು ನಿನ್ನ ನಾ

ಶ್ರೀನಿವಾಸನೆ ನಮೊ ನಮೊ ಎಂದೆನೋ

ದೀನರಕ್ಷಕ ದೇವ ಗೋಪಾಲವಿಟ್ಠಲ

ನೀನು ಕುಣಿಸಿದಂತೆ ನಾನು ಕುಣಿವೆನಯ್ಯಾ ॥ 4 ॥ 


ತ್ರಿವಿಡಿತಾಳ 


ವಾಸುದೇವನೆ ನಿನಗೆ ವಾಸೆ ಒಂದೇ ಕೇಳು

ಈಶನೆಂಬೊ ಪೆಸರು ನಿನ್ನಗಯ್ಯಾ

ದಾಸನೆಂಬೊ ಪೆಸರು ನಿನಗೆ ಎಂದಿಗೆ ಯಿಲ್ಲ

ದಾಸತ್ವ ತನವೆಲ್ಲ ನಮ್ಮದಯ್ಯಾ

ದಾಸರು ಇಲ್ಲದ ಈಶತ್ವ ಪ್ರಕಟಿಸದು

ಈಶನು ಇಲ್ಲದ ದಾಸತ್ವತನವ್ಯಾಕೆ

ದೇಶ ಕಾಲ ಪಾತ್ರ ಈಸು ಕೂಡಿದ ಅಲ್ಲಿ

ಕಾಸು ಕೊಡುವ ದಾತಾನಿಲ್ಲದರೆ

ಕಾಸು ಇದ್ದವನಲ್ಲಿ ದೇಶ ಪೋಗುವದೊ

ದೇಶ ಇದ್ದಲ್ಲಿಗೆ ಕಾಸು ಬಾಹುವದೆ

ದಾಸತ್ವ ಎನ್ನಲ್ಲಿ ಲೇಶಮಾತ್ರವನ್ನ

ಆಶ್ರೈಸಿ ಇತ್ತೆ ಈಶ ಎನಗುಂಟು

ದೇಶ ದೇಶದವರು ಕಾಲಕೆ ಕುರುಹ

ಮಾಸದೆ ಕಂಡರೆ ಪೋಷಿಸುವರು ಬಿಡದೆ

ಲೇಸಾಗಿ ಇಬ್ಬರು ಒಂದೆ ಸ್ಥಳದಲ್ಲಿ ವಾಸವಾಗಿ ಯಿದ್ದು

ನಾಶ ರಹಿತರಾಗಿ ಕ್ಲೇಶಕೊಬ್ಬನ ಮಾಡಿ

ಕ್ಲೇಶ ರಹಿತ ನೀನಾಗಿ ಘಾಸಿಯ ಬಡಿಸೆಮ್ಮ

ಮೀಸಲಾಗಿ ನೀ ನಂದು

ದೋಷರಹಿತ ರಂಗ ಗೋಪಾಲವಿಟ್ಠಲ

ದಾಸರ ಬಿಡದಿರು ಏಸೇಸು ವಿಡಿದರು ॥ 5 ॥ 


ಅಟ್ಟತಾಳ 


ಧನದಿಂದ ನೆಂಟರು ಕೆಲವರು ಎನಗಿನ್ನು

ತನುವಿನ ನೆಂಟರು ಕೆಲವರು ಎನಗಿನ್ನು

ಮನದಿಂದ ನೆಂಟರು ಕೆಲವರು ಎನಗಿನ್ನು

ದಿನದಿಂದ ನೆಂಟರು ಕೆಲವರು ಎನಗಿನ್ನು

ಗುಣದಿಂದ ನೆಂಟರು ಕೆಲವರು ಎನಗಿನ್ನು

ಇನಿತು ನೆಂಟರೊಳು ಎನಗೆ ಒಬ್ಬರ ಕಾಣೆ

ಅನುವಾಗಿ ಇದ್ದರೆ ಅಷ್ಟು ನಮ್ಮವರೆಲ್ಲ

ನನಗೆ ನಿನಗೆ ನೆಂಟತನವು ಹೀಗಲ್ಲಾ

ಅನಿಮಿಷ ಅಗಲದೆ ಅನಿಮಿತ್ಯ ಬಂಧು ಆಗಿ

ಕ್ಷಣಬಿಡದಲೆ ಕಾಯುವ ಗೋಪಾಲವಿಟ್ಠಲ

ನಿನಗೆ ಮಾಡುವದೇನು ನಮೊ ನಮೊ ಎನ್ನಿಂದಾ ॥ 6 ॥ 


ಆದಿತಾಳ 


ನೀನೇವೆ ವೈಕುಂಠ ನೀನೆವೆ ಮುಕುತೆನಗೆ

ನೀನೆವೆ ಸಕಲಾದಿ ತೀರ್ಥಯಾತ್ರಿಗಳೆನಗೆ

ನೀನೇವೆ ಇಹ ಪರದಲ್ಲಿ ಕಾವುವಾ ನೀನೊ

ಆನೆಲ್ಲಿ ನೋಡಲು ನೀನೆ ಕಾಣಿಸುವದು

ನೀನಿದ್ದ ಸ್ಥಳದಲ್ಲಿ ಸಕಲ ದೇವತೆಗಳು

ನೀನೆವೆ ಫಲಂಗಳು ಸಕಲದಲ್ಲಿ ನಿಂತು

ದೀನಜನರಪಾಲ ಗೋಪಾಲವಿಟ್ಠಲ

ಜ್ಞಾನಿಗಳಿಗೆ ಪ್ರೀಯ ನಿನಗೆ ಜ್ಞಾನಿ ಪ್ರೀಯಾ ॥ 7 ॥ 


ಜತೆ 


ಕಾಣದವನೆ ನಿನ್ನ ಕಂಡದ್ದು ಹಾರೈಸುವ

ಕಾಣುವ ಬಿಡ ನಿನ್ನ ಗೋಪಾಲವಿಟ್ಠಲ ॥

***