ಕ್ಷೀರಸಾಗರತನಯೆ ಮುರಹರಹರಿಯ
ಉರಮಂದಿರೆಯ ಇಂದಿರೆಯೆ ಪರಿಪಾಲಿಸನುದಿನ ಪ
ಸತ್ಯಶಾಶ್ವತನಚ್ಯುತನ ನೀ ನಿತ್ಯಸೇವಿಸಿ ಸ್ತುತ್ಯಳಾಗಿ
ನಿತ್ಯಪ್ರಕೃತಿಯ ಕೃತ್ಯನಡೆಸಿ ನಿರ್ಲಿಪ್ತಳಾಗಿಹೆ ನಿತ್ಯಮುಕ್ತಳೆ 1
ಅಕ್ಷರಳೆ ಪಕ್ಷಿವಾಹನನ ವಕ್ಷದೊಳು ಕ್ಷಣಬಿಡದೆ ನಲಿದು
ಮೊಕ್ಷದನ ಗುಣ ಈಕ್ಷಿಪಳೆ ಜಗರಕ್ಷಕಳೆ ಕಮಲಾಕ್ಷನಾ ಪ್ರಿಯೆ 2
ಭರದಿ ಕರವೀರಪುರದಿ ನಿಂದೆ ಉರಗಗಿರಿ ಶ್ರೀ ವೆಂಕಟೇಶನ
ಪರಮಪ್ರೀಯೆ ನಿತ್ಯಾವಿಯೋಗಿನಿ ಪದುಮಸರೋನಿವಾಸಿನಿ 3
ಮುಕ್ತನಾಥಗೆ ಪ್ರೀಯೆ-ನೀ ಅವ್ಯಕ್ತತತ್ವಾಭಿಮಾನಿಯೇ |
ವ್ಯಕ್ತಗೊಳಿಸೆನ್ನ ಚಿತ್ತದಲಿ ವೇದೋಕ್ತನ ನೀ ನಿತ್ಯದಲ್ಲಿ 4
ಪುರುಷಸೂಕ್ತಸುಮೇಯ ಶ್ರೀ ಉರಗಾದ್ರಿವಾಸವಿಠಲನ
ನಿರುತ ಗುಣರೂಪಕ್ರಿಯಶರಧಿಯೊಳು
ಹರುಷದಲಿ ನಲಿದಾಡಿ ಸುಖಿಸುವ 5
****