..
ಗುರುವ್ಯಾಸರಾಯ ಪಾಲಿಸೊ | ಮೊರೆ ಹೊಕ್ಕೆ ನಿನ್ನ
ಶರಣನ್ನ ಮಾತು ಲಾಲಿಸೊ ಪ
ಕರುಣಾಕರ ಭವ ಕರಕರಿಗಾರದೆ ಕರವ ಪಿಡಿದು
ಪೊರೆ ಎಂದು ನಿನ್ನ ನಾ ಕರೆವೆ ಬಾಯ್ದೆರೆವೆ
ಆಲ್ವರಿವೆ ನತಜನ ಸುರತರುವೆ ಅ.ಪ
ಮಧ್ವಮುನಿ ಸುಮತೋದ್ಧಾರಕ ಯತಿಕುಲ ತಿಲಕ
ಅದ್ವೈತಾರಣ್ಯ ಪಾವಕ | ವಿದ್ವತ್ ಜನತತಿ
ಸದ್ವಿನುತನೆ ಪಾದ ಪದ್ಮಕೆ ನಮಿಸುವೆ
ಶುದ್ಧ ಸುಜ್ಞಾನವ ನೀಡೊ ಅಘದೂಡೋ
ಕೃಪೆ ಮಾಡೋ | ಸುತನೆಂದು ನೋಡೋ 1
ವಿರಚಿಸಿ ಗ್ರಂಧತ್ರಯವ | ಬೋಧಿಸಿ ಭೇದ
ಪೊರೆದಿ ದ್ವಿಜ ಪರಿವಾರವ |
ನೆರೆನಂಬಿದ ಭೂಪಗೆ ಧಾವಿಸುತ
ಭರದಿ ಬರುವ ಕುಹಯೋಗ ಕಂಟಕವ ದಯದಿ
ನೀತರಿದಿ | ಸುಖಗರೆದಿ ಧಾರುಣಿಯೊಳು ಮೆರಿದಿ 2
ವಂದಿಪೆ ಸುಸುಗತಿದಾಯಕ ಶ್ರೀವರ ಶಾಮ
ಸುಂದರ ಕೃಷ್ಣೋಪಾಸಕ
ತಂದೆ ಎಂದು ನಿನ್ನ ಪೊಂದಿ ಪ್ರಾರ್ಥಿಸುವೆ
ಬಂದು ಜವದಿ ಪುರಂದರದಾಸರ ಪ್ರಿಯಾ 3
***