1st Audio by Mrs. Nandini Sripad
ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ
ಉಪದೇಶದ ಸುಳಾದಿ
( ಪ್ರಪಂಚದಲ್ಲಿ ಹುಟ್ಟಿ ಬಂದ ಮಾನವನಿಗೆ , ಸಂಸಾರ ಬಂಧನದಿಂದ ಪಾರಾಗಿ ಶ್ರೀ ಹರಿಯ ಚರಣವನ್ನು ಹೊಂದುವುದೇ ಪರಮೋಚ್ಛ ಗುರಿ. ಮೋಕ್ಷೋಪಯೋಗಿ ಉಪಾಯಗಳನ್ನು ಬಹು ಮಾರ್ಮಿಕವಾಗಿ ಸಿದ್ಧಾಂತದ ಬೆಳಕಿನಲ್ಲಿ ಈ ಉಪದೇಶದ ಸುಳಾದಿಯಲ್ಲಿ ತಿಳಿಸಿ ಹೇಳಿದ್ದಾರೆ.)
ರಾಗ ಪಂತುವರಾಳಿ
ಧ್ರುವತಾಳ
ಹರಿ ತನ್ನ ಏಕಾಂತಿಗಳಿಗೆ ಕೊಡ ವೈಭವವ
ಸಿರಿ ಸಂಪದದೆ ಸೌಖ್ಯದ ಲಂಪಟವ
ಹರಿ ತನ್ನೇಕಾಂತಿಗಳಿಗೆ ಕೊಡ ಅಖಿಳದ
ಅರಸುತನದ ಸೌಭಾಗ್ಯದ ಬಯಕೆಯ
ಕರುಣಾಂಬುಧಿ ತನ್ನ ಶರಣ ಜನರ ಭವ -
ಭಾರಕನೆಂಬೊ ಬಲು ಬಿರುದು ರಕ್ಷಕನಾಗಿ
ಅರಿಭಯದ ಬೆದರಿಕೆ ಮನೋವ್ಯಥಾ ವ್ಯಸನವು
ಬರುವುವೆಂದರಿದು ಶ್ರೀಪ್ರಸನ್ನವೆಂಕಟ ಕೃಷ್ಣ ॥ 1 ॥
ಮಠ್ಯತಾಳ
ಮರೆಯೆ ಹರಿಗಭಿಮುಖರ ಭಾಗ್ಯವೆ ಭಾಗ್ಯ
ಹರಿಗೆ ವಿಮುಖರ ಭಾಗ್ಯ ದೌರ್ಭಾಗ್ಯ
ಹರಿಪ್ರಿಯಜನರ ವೃತ್ತಿ ನಿವೃತ್ತಿ
ಹರಿಪರವಲದ ಯಜ್ಞ ಅವಜ್ಞ
ಹರಿಮುಖ್ಯನೆಂಬೊ ನಿಗಮ ಸುಗಮ
ಹರಿಯಾದರಿಸದ ಆಗಮ ದುರಾಗಮ
ಸಿರಿ ಪ್ರಸನ್ವೆಂಕಟ ಕೃಷ್ಣ ಜೀವರಿಗೆ
ಸರಿಯೆಂದವನು ಇಹಪರಕೆ ಬಾಹಿರನು ॥ 2 ॥
ತ್ರಿಪುಟತಾಳ
ಹರಿಯಂಘ್ರಿಯ ಮೂಲದಾಸತ್ವವ ಹೊಂದಿ
ಪರಮಮಂಗಳ ನಾಮಸ್ಮರಣೆಯನು ಬಿಡದೆ
ಇರಲೆನ್ನ ಮನವು ಇರಲೆನ್ನ ತನುವು
ತರುಣಿ ಪುತ್ರ ಮಿತ್ರಾ ಸರ್ವರಿಂ ಪ್ರಿಯನೆಂದು
ಹರಿಚರಣಾಂಬುದಮೃತಾನುಂಬೊ ಸ್ನೇಹ -
ದಿರಲೆನ್ನ ಮನವು ಇರಲೆನ್ನ ತನುವು
ನಿರುಪಾಧಿಕ ಪ್ರಿಯ ನಿರ್ಮಳ ಶ್ರುತಿಗೇಯ
ನಿರುತ ಪ್ರಸನ್ವೆಂಕಟ ಕೃಷ್ಣ ಸೇವೆಯಲಿರಲಿ ॥ 3 ॥
ಅಟ್ಟತಾಳ
ನಿಷ್ಠರಿನ್ನೊಲ್ಲರು ನಾಕವಾಸದ ಸುಖ
ಕೊಟ್ಟರಿನ್ನೊಲ್ಲರು ಸಕಲ ಸಂಪದವನು
ಅಷ್ಟಾಂಗ ಯೋಗದ ಪಥಸಿದ್ಧಿಯೊಲ್ಲರು
ಕೃಷ್ಣಪ ಪಾದಬ್ಜ ಮಕರಂದ ಭಕುತರು
ತುಷ್ಠಿಯನೊಲ್ಲರು ಸ್ವರೂಪದ ಅನುಭವಾ -
ನಿಷ್ಟ ಕೋಟಿಗಳನು ದೃಷ್ಟಿಗೆ ತಾರದ
ಶಿಷ್ಟರಿಗಿಷ್ಟಮೂರುತಿ ಪ್ರಸನ್ವೆಂಕಟ
ಕೃಷ್ಣನ ಭಕುತಿಗೆ ಮೋಹಿತ ಮರುಳರು ॥ 4 ॥
ಏಕತಾಳ
ಗರಿ ಉದುಭವಿಸದ ಮರಿ ತಾಯಗರೆದಂತೆ ಕಣ್
ದೆರೆಯದ ಶಿಶು ಜನನಿಯ ಬಯಸುವ ಪರಿ
ಪಿರಿಯನ ಕಾಣದ ರಮಣಿಯ ಮನದಂತೆ
ಸಿರಿರಮಣನ ಆಗಮವನೆ ಬಯಸುತಿಹೆ
ಕರಿವರದ ಪ್ರಸನ್ವೆಂಕಟ ಕೃಷ್ಣನ
ಕರುಣಾಮೃತವನುಂಡು ಸುಖಿಪೆನನುದಿನ ॥ 5 ॥
ಜತೆ
ಸಂಸಾರ ಚಕ್ರದಿಂದ ನಿಜರ ದಾಟಿಪ ಪರಮ
ಹಂಸೇಶ ಪ್ರಸನ್ನವೆಂಕಟ ಕೃಷ್ಣ ನಮೊ ನಮೊ ॥
**********