Audio by Mrs. Nandini Sripad
ಶ್ರೀಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ
(ಮುಕುತಿ ಯೋಗ್ಯರಾದ ಭಕ್ತರ ಸಾಧನ ವಿವರ)
ರಾಗ ಆನಂದಭೈರವಿ
ಧ್ರುವತಾಳ
ಮುಕುತಿಯು ಬೇಕು ಎಂಬಾಸಕತಿ ವುಳ್ಳವರೆಲ್ಲ
ಯುಕುತಿಯ ಕೇಳಿ ಎನ್ನ ಶಕುತಿದ್ದಷ್ಟು ಪೇಳುವೆ
ಸಕಲ ಧರ್ಮವು ನೋಡಾ ಪ್ರಕಟಾಗೆ ಬಂದವೆರಡು
ಭಕುತಿ ಜ್ಞಾನವು ಪುಟ್ಟಿ ತಿಳಿಯಬೇಕು
ಸುಖತೀರ್ಥರ ಶಾಸ್ತ್ರದ ಉಕುತಿಯ ಅನುಸರಿಸಿ
ಕಕುಲಾತಿ ಹರಿಯಲ್ಲಿ ಮುಕುರಿ ಬಿದ್ದಿರಬೇಕು
ಲಕುಮಿ ಮೊದಲು ಮಾಡಿ ಪುಷ್ಕರ ಪರಿಯಂತ
ಭಕುತರ ತಾರತಮ್ಯ ಯುಕುತಿಯಿಂದ ಅರಿಯಬೇಕು
ಭಕುತರೊಳು ತನ್ನಿಂದಧಿಕರನ್ನು ಕಂಡರಲ್ಲಿ
ಭಕುತಿಯನಿಟ್ಟು ಅವರ ಕೃಪೆಯ ಪಡಿಯಬೇಕು
ಭಕುತರೊಳು ತನ್ನಿಂದ ಸುಖಿಸುತ್ತಲಿರಬೇಕು ಅ -
ಶಕತರ ಕಂಡರೆ ಭಕುತಿ ಪುಟ್ಟುವಂತೆ ಕರುಣ ಮಿಗಿಲಾಗಿ ಮಾಡಬೇಕು
ಸಕಲ ಪ್ರಾಣಿಗಳೆಲ್ಲ ಸುಖದಲ್ಲಿರಲಿ ಎಂದು
ವಿಕಸಿತವಾಗಿ ಮುಖ ಪ್ರಕಾಶಿಸುತ್ತಿರಬೇಕು
ಭಕುತರೊಳಗೆ ಸಮಾನಿಕರಲ್ಲ್ಯಾದರು ತನಗೆ
ಸಖತ್ವವಾಗಿ ಸತತ ಸಕಲ ಇಂದ್ರಿಯಗಳೆಲ್ಲ
ಪ್ರಕಟಿಸದೆ ಬಂಧಿಸಿ ಬಕನಂತೆ ಭಕುತಿಯಕ್ಕು ಯುಕುತಿ ಬಿಟ್ಟು
ಮುಕುತಿದಾಯಕ ಚಲ್ವ ಗೋಪಾಲವಿಟ್ಠಲನ್ನ
ನಖಶಿಖ ಪರಿಯಂತ ನಿತ್ಯ ಧ್ಯಾನವ ಮಾಡು ॥ 1 ॥
ಮಟ್ಟತಾಳ
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ
ನೇಮದಿ ಬಿಡಬೇಕು ನೇಮದಲ್ಲಿಡಬೇಕು
ಸ್ವಾಮಿಯ ಬಿಟ್ಟು ಅನ್ಯವಿಷಯ ಕೇಳುವಂಥ
ಕಾಮವನ್ನು ಹಿಡಿದು ಖಂಡ್ರಿಸಲಿಬೇಕು
ಸ್ವಾಮಿಯ ದ್ರೋಹಿಗಳ ಕಂಡರವರ ಮೇಲೆ
ಕ್ಷೇಮ ಚಿಂತಿಸದಲ್ಲಿ ಕ್ರೋಧ ಮಾಡಲಿಬೇಕು
ಸ್ವಾಮಿ ವಿಷಯದಲ್ಲಿ ತತ್ವ ಧರ್ಮದ ಮಾರ್ಗ
ನೇಮವು ಬಲ್ಲಾತನಾಗಿದ್ದರು ಸರಿಯೆ
ತಾಮಸ ಜೀವನು ಬಂದು ಕೇಳಿದರೆ
ಪಾಮರ ಗರುವದಲೊಶ ಮಾಡಲಿಬೇಕು
ತಾಮಸ ಜೀವನ್ನ ತಾ ಮತ್ತೆ ಕಂಡರೆ
ತಮಸಿಗೆ ಹೋಗುವಂತೆ ಮೋಹ ಪುಟ್ಟಿಸಬೇಕು
ಸ್ವಾಮಿಯ ಧ್ಯಾನಾನಂದ ಭರಿತನಾಗಿ
ಪಾಮರನೆದುರಿಗೆ ಮದದಿ ತಿರುಗಬೇಕು
ಸ್ವಾಮಿ ಸರ್ವೋತ್ತಮತ್ವ ಬಿಟ್ಟು ಪೇಳುವಂಥ
ತಾಮಸನ್ನ ಕಂಡು ಮತ್ಸರಿಸಲಿಬೇಕು
ಸ್ವಾಮಿಯ ಸೇವಿಯು ಬೇಕು ಎಂಬುವಂಥ
ಕಾಮವು ಸರ್ವದ ಕಕುಲಾತಿಯು ಬೇಕು
ಸ್ವಾಮಿದಾಸರ ಕಂಡರಾಯಿತೆ ಇನ್ನು
ಪ್ರೇಮದಿಂದಲಿ ಇನ್ನು ಮೋಹ ಮಾಡಲಿಬೇಕು
ಸಾಮಜವರದ ಶ್ರೀಗೋಪಾಲವಿಟ್ಠಲನೆ
ಕಾಮಕ್ರೋಧಂಗಳಿಗೆ ನಿಯಾಮಕ ನೆನಬೇಕು ॥ 2 ॥
ರೂಪಕತಾಳ
ಆಡಲಿ ಬೇಕಿನ್ನು ಸರ್ವ ಮಾತುಗಳು
ಆಡಿಸುವ ಬ್ಯಾರೆ ಎಂದು ತಿಳಿಯಬೇಕು
ನೋಡಲಿ ಬೇಕು ಎಲ್ಲ ಜೀವರು ಮಾಡುವ ಕರ್ಮ
ಮಾಡಿಸುವ ಬೇರೆ ಎಂದು ತಿಳಿಯಲಿ ಬೇಕು
ಮಾಡಬೇಕು ಜಡಗಳಿಂದ ಹರಿಯ ಪೂಜೆ
ನೋಡಿ ಚಿಂತಿಸಬೇಕು ಅಲ್ಲಿಪ್ಪ ಮೂರ್ತಿಗಳ
ಆಡಿಸುವ ಮೂರ್ತಿ ಬೇಡಿಸುವ ಮೂರ್ತಿ
ನೋಡಿಸುವ ಮೂರ್ತಿ ಕೂಡಿ ಚಿಂತಿಸಿ ತನ್ನ
ಗೂಡಿನಲ್ಲಿ ನಿತ್ಯ ಮಾಡಬೇಕು ಧ್ಯಾನ
ರೂಢಿಗೊಡೆಯ ರಂಗ ಗೋಪಾಲವಿಟ್ಠಲಂಗೆ
ಈಡಿಲ್ಲವೆಂದು ಕೂಗ್ಯಾಡಬೇಕು ನಿತ್ಯ ॥ 3 ॥
ಝಂಪಿತಾಳ
ಆರುಪರಿಯ ಭೇದ ತಾರತಮ್ಯವಾಗಿ ತಿಳಿದಿರಲಿಬೇಕು
ಕಾರಣ ಅಕಾರಣರ ದಾರಿ ವಿಚಾರಿಸುತ್ತ
ಇರಲಿಬೇಕು ಸೋಪಾನಗಳನು
ನಾರಾಯಣಗೆ ನಾರಾಯಣನ ರಾಣಿಗೆ ಭೇದ
ನಾರಾಯಣಗೆ ಜೀವನಕೆ ಭೇದ
ಆರಾರು ಜೀವರು ತಮ್ಮೊಳು ತಮಗೆ ಭೇದ
ನಾರಾಯಣಗೆ ಜಡಕೆ ನಿತ್ಯ ಭೇದ
ಕಾರಣವಾಗಿಪ್ಪ ಜೀವ ಜಡಕೆ ಭೇದ
ಆರಿಸುವದು ಜಡಕೆ ಜಡಕೆ ಭೇದ
ನಾರಿಯರಿಗೆ ಭೇದ ಪುರುಷರಿಗೆ ಭೇದ
ನಾರಾಯಣ ಲಕುಮಿ ಇವರೆ ಎಂದು
ತಾರತಮ್ಯವು ನಿತ್ಯ ಮೂರೆರಡು ಭೇದ ನಿತ್ಯ
ಸಾರುತಿಪ್ಪವು ಶ್ರುತಿ ಸ್ಮೃತಿ ವಾಕ್ಯವು
ಆರು ಮೂರು ಭಕುತಿಯಿಂದ ಶ್ರೀಹರಿಯನ್ನು
ಆರಾಧಿಸುವಂಥ ಭಕುತರಿಗೆ
ತೋರುತಿಪ್ಪ ತನ್ನ ಮೂರ್ತಿ ಇಷ್ಟರೊಳಗೆ
ಸೂರಿಯನಂದದಿ ಪೊಳೆವುತಲಿ
ಕಾರುಣ್ಯ ಸಾಗರ ಗೋಪಾಲವಿಟ್ಠಲ
ಈ ರೀತಿ ಅರಿದವರಿಗೆ ಪೊರೆಯದೆ ಬಿಡನು ॥ 4 ॥
ತ್ರಿವಿಡಿತಾಳ
ಭಕುತಿಯ ಮಾಡಿರಿ ಸಕಲವೆಲ್ಲವ ಬಿಟ್ಟು
ಮುಕುತಿಗೆ ಸೋಪಾನ ಇದೆ ಇದೆ ಎಂದು
ಭಕುತರೆಂಬವರಿಗೆ ಲಕುಮಿ ಪತಿಯೆ ಭಾಗ್ಯ
ಲಕುಮಿ ಪತಿಗೆ ಭಕುತರೇವೆ ಭಾಗ್ಯ
ಲಕುಮಿಯನು ಬಿಡುವೆ ಭಕುತರ ಬಿಡೆನೆಂದು
ಉಕುತಿ ಶ್ರೀಹರಿ ತಾನು ಶಪಥ ಮಾಡಿಹನು
ಸಕಲ ಸತಿಸುತರು ಮಿಗಿಲಾದ ದ್ರವ್ಯ ದೇಹ
ಸಕಲವೆಲ್ಲವು ನೋಡಾ ಸ್ನೇಹವು ಅಧಿಕವಾಗಿ
ಮುಕುರಾತಿ ಹರಿಯಲ್ಲೆ ಕಕುಲಾತಿ ಇರಬೇಕು
ಸಕಲ ಗುಣಪೂರ್ಣ ಗೋಪಾಲವಿಟ್ಠಲ
ಮಕ್ಕಳ ತಾಯಿ ಆಲಿಸಿದಂತಾಲಿಸುವಾ ॥ 5 ॥
ಅಟ್ಟತಾಳ
ನಿನಗೆ ನಿಜ ವಸ್ತು ನೀನು ಅರಿತು ನೋಡು
ನಿನಗೆ ಆವದು ಎಂದು ಖೂನವು ಪಿಡಿಯಿನ್ನು
ವನುತೆ ಸುತರು ನಿನ್ನ ಅನುವಿಗೆ ಬಾರರು
ತನು ಸಂಬಂಧಿಗರೆಲ್ಲ ತತ್ಕಾಲದವರೆಲ್ಲಾ
ನೆನಸದಿರಿವರಿಂದ ನಿನಗೆ ಆಗುವ ಸುಖ
ಕನಸಿನೊಳಾದರು ಕಾಣದಿರೆಲೊ ನೀನು
ನಿನಗೆ ಸುಖ ದುಃಖ ಕ್ಷಣ ಕ್ಷಣಕೆ ಇನ್ನು
ಅನುದಿನ ಬಿಡದಲೆ ಉಣಿಸುವ ಬೇರುಂಟು
ಘನಮಹಿಮ ನಮ್ಮ ಗೋಪಾಲವಿಟ್ಠಲನ್ನ
ನೆನವಂಗೆ ಈ ಸುಖ ಅನುಭವವಾಗುವದು ॥ 6 ॥
ಆದಿತಾಳ
ಸುಲಭವಾಹುದು ಅಗಾಧವಾಹುದು
ಗೆಲುವು ಅಹುದು ತಿಳಿಯಬಾರದು
ನಿಲಕ ಆಹದು ನೆಲಿಯ ದೋರದು
ಒಲಿದ ಬಳಿಕ ಚಲಿಸನೆಂದಿಗೂ
ತಲೆಯು ಕೆಳಗೆ ಮಾಡಿ ಹಲುಬಿದರು
ಹಲವು ಕಾಲ ನೆಲೆಯು ದೋರನವಗೆ ತನ್ನ
ತಳ ತಿಳಿಯದಂಥ ಮನುಜನಿಗೆ
ಅಳಿದು ವಿಷಯಂಗಳನು ಎಲ್ಲ
ಮಲವು ತೊಳೆದು ತಿಳಿದು ತನ್ನ
ಕೆಳಗೆ ಬಿದ್ದೆನೆಂದ ಬಳಿಕ
ತಿಳಿಯಗೊಟ್ಟು ಪೊರೆವನಾಗ
ಕಳೆವ ನಾನಾ ದೋಷರಾಶಿ
ಗಳನು ಯೆಲ್ಲನೆ ಕತ್ತಲೆಲ್ಲ
ಬೆಳಕು ಮಾಡುವನು ತನ್ನ
ಎಳಿಯ ಕರುಣ ನೋಟದಿಂದ
ಸುಲಭ ಭಕ್ತವತ್ಸಲ ಗೋಪಾಲವಿಟ್ಠಲರೇಯ ತನ್ನ
ತಿಳಿದ ಹಾಗೆಲ್ಲ ನಾವು
ತಿಳಿಸಿ ಕೊಡುವ ತನ್ನನೂ ॥ 7 ॥
ಜತೆ
ನಂಬಿರೊ ನಂಬಿರೊ ಇಂಬು ಬೇಕೆಂಬೋರು
ಡಂಭವ ಬಿಟ್ಟು ಗೋಪಾಲವಿಟ್ಠಲನ್ನ ॥
****