ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣ ಬಾಲಮಹಿಮಾ ಸುಳಾದಿ
ರಾಗ ಕಾಂಬೋಧಿ
ಧ್ರುವತಾಳ
ಪೆತ್ತ ಸಾವಿತ್ರಿ ತನ್ನ ತನುಜಂಗೆ ಪ್ರೀತಿಯಿಂದ
ಎತ್ತಲು ಪೋಗಗೊಡದೆ ಹಸಿದಾನೆಂದು
ಉತ್ತಮಾನ್ನವ ಮಾಡಿ ಕುಳ್ಳಿರಿಸಿಕೊಂಡು ಬಿಡದೆ
ತುತ್ತುಗಳನ್ನು ಮಾಡಿ ಉಣಿಸುತ ತಾನು
ಹತ್ತಾದು ಎಂದು ತಲೆದೂಗಿ ಎದ್ದು ಪೋಗಲು
ಮತ್ತೆ ಕರತಂದು ನ್ಯಾವರಿಸೀ
ಅತಿಶಯವಾಗಿ ರಂಬಿಸಿ ನಾಲ್ಕೂ ಕಡೆ
ಸುತ್ತಲು ತೋರಿ ತೋರಿ ಒಂದೊಂದು ತುತ್ತಾ -
ತುತ್ತನೆ ಮಾಡಿ ಒಲ್ಲೆನೆಂದರೆ ಅವನ
ನೆತ್ತಿಯ ಪಿಡಿದು ಚಂಡಿಕೆ ನೆವದಿಂದ
ಇತ್ತ ಪೇಳಾಲದೆ ಕವಳಾ ಬಾಯಿಗೆ ನ -
ಗುತ್ತ ಮೋಹದಲ್ಲಿ ಬೇಸರದೆ
ಚಿತ್ತಜನಯ್ಯಾ ನೀನೆ ಆವಾವ ಕಲ್ಪಕ್ಕೆ
ಹೆತ್ತ ತಾಯಿಯಂತೆ ಇಪ್ಪ ಮಹಿಮಾ
ಎತ್ತಣ ಪ್ರಯೋಜನವಿಲ್ಲಾ ಅದೃಷ್ಟವೆ
ರತ್ತುನವೆ ಪ್ರಾಪ್ತಿ ವಿಷ್ಣುರಹಸ್ಯದೀ
ಬಿತ್ತರಿಸಿ ನಿನ್ನ ಬಗೆಬಗೆಯಿಂದ ನಾನು
ತುತ್ತಿಸಿಕೊಂಡಾಡಿದೆ ಎನಗೆ ಇನಿತು
ವೃತ್ತಿಯ ಕಲ್ಪಿಸಿದ್ದು ಆಗದೆಂದು ಬಿನ್ನೈಸೆ
ಚಿತ್ತಕ್ಕೆ ತಾರದಿಪ್ಪ ಬಗೆ ಆವದೋ
ಹತ್ತಿಲಿಯಿದ್ದು ತಾಯಿ ಮಗನಿಗೆ ಉಣಿಸಿದಂತೆ
ನಿತ್ಯ ತೊಲಗಲೀಯದೆ ಉಣಿಪ ದೇವಾ
ತತ್ತಳಗೊಂಬಾದೇನು ಸರ್ವ ಕಾಲದಲ್ಲಿ ನೀ -
ನಿತ್ತದ್ದು ಉಂಡು ತೀರಿಸಲೇಬೇಕು
ಬತ್ತಿಯ ಚಾಚಿದಂತೆ ದಿನದಿನಕೆ ಎನ್ನ ಭಾರ
ಪೊತ್ತ ಅತ್ಯಂತ ಶಕ್ತ ಸರ್ವೋತ್ತಮಾ
ಭೃತ್ಯವತ್ಸಲ ನೀನಲ್ಲದೆ ಒಬ್ಬರಿಲ್ಲಾ
ಸತ್ಯವೇ ನುಡಿದೆ ಇದು ಸಿದ್ಧಾಂತವೋ
ವಿತ್ತ ಗೋ ಧಾನ್ಯ ನಾನಾ ವಸ್ತುಗಳೆಲ್ಲ -
ವಿತ್ತರೆ ಬಾರದಯ್ಯಾ ಇದು ಸೋಜಿಗಾ
ಸುತ್ತುವ ಸುಳಿಗೆ ಕೊನೆ ಮೊದಲಾವದು ಕಾಣೆ
ಉತ್ತಮ ಶ್ಲೋಕ ನೀನು ಕೊಡುವದೆಂತೊ
ಚಿತ್ರವಾಗಿದೆ ಎನಗೆ ಎಂದೆಂದಿಗೆ ನೋಡೆ
ಚಿತ್ರಾಚಿತ್ರವೆಂದೆಂಬೆ ಬಲು ವಿಚಿತ್ರಾ
ಕೀರ್ತಿಪುರುಷ ನಮ್ಮ ವಿಜಯವಿಟ್ಠಲ ನಿನ್ನ
ಕೀರ್ತನೆ ಮಾಡುವದು ಒಂದೇ ಮರವಾಗದಿರಲಿ ॥ 1 ॥
ಮಟ್ಟತಾಳ
ಜನಕನ ಉದರದಲ್ಲಿ ತಂದಿಟ್ಟವನಾರು
ಜನನಿಯ ಗರ್ಭದಲ್ಲಿ ಪೊಗಿಸಿದವನಾರು
ದಿನದಿನಕೆ ಅಲ್ಲಿ ಅವಯವಗಳ ತಿದ್ದಿ
ತನುವ ಬೆಳೆಸಿ ಕಡಿಗೆ ಹಾಕಿದವನಾರು
ಕ್ಷಣಕ್ಷಣಕೆ ಸ್ನೇಹ ಪೆಚ್ಚಿಸಿ ಎನ್ನ ರ -
ಕ್ಷಣೆಯನು ಮಾಡಿ ಸಲುಹಿದವನಾರು
ಮನೆ ಮನದಲಿ ಇದ್ದು ನಾನಾ ಬಗೆಯಿಂದ
ಇನಿತು ಪಾಲಿಸುವ ಮಹಾ ಮಹಿಮ ಭಕ್ತರ ಪ್ರೀಯ
ಕನಸು ಸುಷುಪ್ತಿಯಲಿ ಅನುಭವಗಳು ಸಾಕ್ಷಿ
ನಿನಗೆ ನೀನೇ ನಲಿವ ವಿಜಯವಿಟ್ಠಲರೇಯಾ
ಮನದಲಿ ನಿಂದು ಬಲು ಚರಿತೆ ಮಾಳ್ಪೆ ॥ 2 ॥
ತ್ರಿವಿಡಿತಾಳ
ಏನು ಹೇಳಲಿ ಹರಿ ಈ ಪರಿ ಸೌಖ್ಯಗಳ
ನಾನೇ ಅನುಭವಿಸುವೆನೆ ತಿಳಿಯಾ ನೋಡು
ಕಾಣಬಂದ ಮಾತು ತೋರಿ ನುಡಿದೆ ಉದಾ -
ಸೀನ ಮಾಡಿದಂತೆ ಸುಮ್ಮನಿದ್ದು
ನಾನಾ ಪರಿಯಲ್ಲಿ ಆಣೆಗಳಿಟ್ಟು ಸ -
ನ್ಮಾನ ವಲ್ಲೆನೆಂದು ಚಾಲುವರಿಯೇ
ನೀನೇ ಈ ಪರಿಯಿಂದ ಎಲ್ಲೆಲ್ಲಿ ಇದ್ದು ಸೋ -
ಪಾನವೇರಿದಂತೆ ವಿಷಯಂಗಳಾ
ಭಾನು ಉದಯ ಅಸ್ತಮಾನ ತೊಲಗಲೀಯದೆ
ನೀನುಣಿಪದು ನಿನಗೆ ಬಲು ಧರ್ಮವೇ
ಅನಂತ ಕಾಲಕ್ಕೆ ಇದನೇ ನೇಮಿಸಿದರೆ
ಜ್ಞಾನ ಬರುವದೆಂತೋ ಜ್ಞಾನಾಂಬುಧಿ
ಮಾಣಿಸು ನಮಿಸುವೆ ಇನ್ನೊಂದು ವರವನ್ನು
ಮಾನಸದಲಿ ಬೇಡಿ ಕೊಂಡಾಡುವೆ
ಕಾಣಿ ಮೊದಲಾದ ಆಶಿಯ ಬಿಡಿಸಿ ನಿ -
ದಾನದಲಿ ನಿನ್ನ ಚರಣಯುಗಳ
ಧ್ಯಾನ ಮಾಡಿ ಏಕಾಂತದಲಿ ಇದ್ದು
ಮಾನವರಿಗೆ ಗೋಚರಿಸುವಂತೆ
ಆನಂದ ಕಾನನದೊಳಗಿದ್ದು ಪರಿಯನ್ನು
ಶ್ರೀನಿವಾಸನೆ ಮಾಡು ಅನಾಥಬಂಧು
ಶ್ವಾನನಂತೆ ನಾನು ಗಣ ಗಣಿಕಾ ಶೂದ್ರ
ಹೀನಾಳು ತವಕ ರಜಾ ವೈರಿಗಳು
ಯೋನಿ ವಿಕ್ರಯ ಶೂದ್ರ ಬ್ರಹ್ಮವಿಘಾತಕ
ನಾನಾ ದೋಷಿಗಳ ಮನೆ ಅನ್ನೋದಕ
ಕೇಣಿಗೊಳದೆ ತಿಂದೆ ದಶಮಿ ದ್ವಾದಶಿ ಆ -
ಯನ ಪರ್ವಣಿ ಪುಣ್ಯಕಾಲದಲ್ಲಿ
ಈ ನುಡಿ ಕೇಳಯ್ಯಾ ಮುಣುಗಿದೇ ಮುಣಗಿದೆ
ಮೇಣು ಮುಣಗಿದೆ ಮತ್ತು ಮುಣುಗಿದೆನೊ
ನೀನುದ್ಧರಿಸದಿರೆ ಎನಗಾವನು ದಿಕ್ಕು
ಈ ನಾಡಿನೊಳಗೆ ಎಲ್ಲೆಲ್ಲಿ ನೋಡೆ
ನಾನೋತ ಫಲ ಎಂತೊ ನಿನಗೆ ಕರುಣವಿಲ್ಲೊ
ಏನಯ್ಯಾ ಮೊರೆಯಿಡಲು ಸುಮ್ಮನಿಪ್ಪೆ
ಜ್ಞಾನಿಗಳರಸ ಶ್ರೀವಿಜಯವಿಟ್ಠಲ ನಿನ್ನ
ಧ್ಯಾನ ಮಾಳ್ಪದಕೆ ಸತತ ಸಂಗತಿಯಾಗೋ ॥ 3 ॥
ಅಟ್ಟತಾಳ
ಉಣಿಸು ಉಣಿಸು ನಿನ್ನ ಸರಿಬಂದ ತೆರದಂತೆ
ಮನೋ ಇಂದ್ರಿಯಂಗಳು ಪ್ರಾಣ ನಿನ್ನಾಧೀನ
ಎನಗಾವ ಸ್ವಾತಂತ್ರ ಲೇಶ ಮಾತ್ರವು ಇಲ್ಲ
ವಣಗಿದ ವೃಕ್ಷ ಪಲ್ಲೈಸಿದ ಬಗೆಯಾಗಿ
ದಿನ ಪ್ರತಿದಿನದಲ್ಲಿ ಕಾಣಿಸುತಿಪ್ಪದು
ಜನುಮ ಜನುಮದಲ್ಲಿ ಬಾಹಿರಂತರ ದರು -
ಶನ ಕೊಡುತಲಿ ಎನ್ನ ಸಾಕುವ ದಾತಾರ
ಘನ್ನಮೂರುತಿ ನಮ್ಮ ವಿಜಯವಿಟ್ಠಲರೇಯಾ
ಎಣೆಗಾಣೆ ನಿನ್ನ ಲೀಲೆಗೆ ನಮೋ ಅನಂತ ನಮೋ ॥ 4 ॥
ಆದಿತಾಳ
ಆರ ಓದನ ಉಂಬೆ ಆರ ವಸ್ತ್ರ ಉಡುವೆ ತೊಡುವೆ
ಆರಿಂದ ಸುಖಬಡುವೆ ಆರಿಂದ ದೇಹತೆತ್ತು ಉದ್ಧಾರನಾಗುವೆ
ಆರಿಂದ ಬಾಳಿ ಬದುಕಿ ಕಾಲಕ್ರಮಣ ಮಾಡುವೇ
ಆರಾದರೂ ಉಂಟೇ ಈ ಜಗತ್ತಿನೊಳಗೇ
ಶ್ರೀರಮಣ ನೀನೇಯಲ್ಲದೆ ಅನ್ಯರೊಬ್ಬರ ಕಾಣೇ
ಸಾರಿಸಾರಿಗೆ ನಾನೇ ಅನುಭವಿಸುವ ಸೌಖ್ಯ
ಆರದಲ್ಲಾ ಆರದಲ್ಲಾ ನಿನ್ನದೇ ಸತ್ಯ ಸತ್ಯ
ಕ್ರೂರಜನರ ವೈರಿ ವಿಜಯವಿಟ್ಠಲ ನಿನ್ನ
ಕಾರುಣ್ಯವಿರಲಾಗಿ ಸರ್ವಾನುಕೂಲ ನಿತ್ಯಾ ॥ 5 ॥
ಜತೆ
ಅಡಿಗಡಿಗೆ ಚಿಂತಿಸಿ ಬಡವಾಗುವದ್ಯಾಕೆ
ಒಡಿಯಾ ನೀನೆ ಗತಿಯೋ ವಿಜಯವಿಟ್ಠಲ ಸ್ವಾಮಿ ॥
***