..
kruti by Nidaguruki Jeevubai
ಏನು ಮಾಯವೊ ಹರಿಯೆ ಶ್ರೀನಿವಾಸನೆ ನಿನ್ನ
ಧ್ಯಾನಿಸುವವರನು ಪೊರೆವೆ ಸಾನುರಾಗದಲಿ ಪ
e್ಞÁನಿಗಳು ಹಗಲಿರುಳು ಮೌನದಿಂದಲಿ ಭಜಿಸಿ
ದಾನವಾಂತಕ ನಿನ್ನ ಧ್ಯಾನ ಮಾಡುವರು ಅ.ಪ
ಬಡತನದಿ ಬಹು ವ್ಯಥೆಯ ಪಡುತ ಸತಿಸುತರಿರಲು
ನುಡಿಯೆ ಭಯ ಭಕ್ತಿಯಲಿ ಒಡೆಯರಿಲ್ಲೆಮಗೆ
ಮೃಡಸಖನು ಇಹನೆನಲು ಹಿಡಿಯವಲಿಯ ಕೊಡಲು
ಕೆಡದ ಸೌಭಾಗ್ಯವನು ಒಡನೆ ನೀಡಿದೆಯೊ 1
ಅಂದು ದುಶ್ಖಾಸನ ನೃಪನಂದನೆಯ ಬಾಧಿಸುತ
ನಿಂದು ಸೀರೆಯ ಸೆಳೆಯೆನೊಂದು ದುಃಖಿಸುತ
ಇಂದಿರಾಪತಿ ಕೃಷ್ಣ ಇಂದೆನಗೆ ನೀನೆ ಗತಿ
ಎಂದೊಡಕ್ಷಯವಿತ್ತು ಅಂದು ಸಲಹಿದೆಯೊ 2
ಮಡುವಿನಲಿ ಗಜರಾಜ ಪಿಡಿದ ಮಕರಿಗೆ ಸಿಲುಕಿ
ಮಡದಿ ಮಕ್ಕಳನಗಲಿ ಕಡೆಗೆ ಸೊಂಡಿಲಲಿ
ಪಿಡಿದ ಕುಸುಮವನು ಜಗದೊಡೆಯಗರ್ಪಿತವೆನಲು
ದಡದಡನೆ ಬಂದೆಯೊ ಮಡದಿಗ್ಹೇಳದಲೆ 3
ಅಂದು ದೂರ್ವಾಸಮುನಿ ಬಂದು ಶಿಷ್ಯರ ಸಹಿತ
ಇಂದೆಮಗೆ ಹಸಿವೆನಲು ನೊಂದು ಶ್ರೀಹರಿಯೆ
ತಂದೆ ನೀ ಸಲಹೆನಲು ಬಂದೆ ಬಹಳ್ಹಸಿವೆಯಲಿ
ಒಂದು ಪತ್ರದ ಶಾಖ ಉಂಡು ಸಲಹಿದೆಯೊ 4
ಹಿಂದಜಾಮಿಳ ತನ್ನ ಬಂಧುಬಳಗವ ತ್ಯಜಿಸಿ
ಅಂದು ಇಹಸುಖದಿ ಆನಂದ ಪಡುತಿರಲು
ಬಂದರಾಗ ಯಮಭಟರು ನಿಂದು ಬಾಧಿಸುತಿರಲು
ಕಂದನಾರಗನೆನಲು ಅಂದು ಸಲಹಿದೆಯೊ 5
ಚಿಕ್ಕವನು ಪ್ರಹ್ಲಾದ ಮಕ್ಕಳಾಟದ ಧ್ರುವನು
ರಕ್ಕಸಾಂತಕನ ಮೊರೆ ಇಕ್ಕಿ ಪ್ರಾರ್ಥಿಸಲು
ತಕ್ಕವರಗಳನಿತ್ತು ತಕ್ಕೈಸಿ ಅಣುಗನನು
ಮಿಕ್ಕಭಕುತರ ಪೊರೆದೆ ಲಕ್ಕುಮಿಯ ರಮಣ 6
ಈ ಪರಿಯಲಿ ಬಹುಭಕುತರಾಪತ್ತುಗಳ ಹರಿಸಿ
ಶ್ರೀಪತಿಯ ರಕ್ಷಿಸಿದಿ ಆಪನ್ನಜನರ
ಗೋಪತಿ ಕೃಷ್ಣ ಜಗದ್ವ್ಯಾಪಕನೆ ನೀ ಸಲಹಿ
ತಾಪಸರ ಒಡೆಯ ಹೃದ್ವ್ಯಾಕುಲವ ಕಳೆವೆ 7
ಕಾಳಿ ಮಡುವನೆ ಧುಮುಕಿ ಕಾಳಿಂಗನ್ಹೆಡೆ ತುಳಿದೆ
ಕಾಳದೇವಿಯರಮಣ ಕಾಲಿಗೆರುಗುವೆನು
ಕಾಳಯುಕ್ತಿನಾಮ ಸಂವತ್ಸರದಿ ಸುಜನರಿಗೆ
ಭಾಳ ಸುಖಹರುಷಗಳ ಲೀಲೆ ತೋರಿಸುವ 8
ಭ್ರಮಿಸಿ ಇಹ ಸುಖದಿ ಮನ ಶ್ರಮ ಪಡುತಲಿರೆ ದೇವ
ರಮೆಯ ರಮಣನೆ ಪೊರೆಯೊ ಮಮತೆಯನು ಬಿಡದೆ
ಕಮಲಸಂಭವಜನಕ ಕಮಲನಾಭ ವಿಠ್ಠಲ
ಸುಮನಸರ ಒಡೆಯ ಹೃತ್ಕಮಲದಲಿ ಪೊಳೆವ 9
***