ಶ್ರೀ ಗೋರೆಬಾಳ ಹನುಮಂತರಾಯರಿಂದ ರಚಿತವಾದಂತಹ " ಸುಂದರವಿಠಲಾಂಕಿತ "
" ವ್ರತವೆ ಉತ್ತಮ ವ್ರತ..."
ಹನುಮದ್ವ್ರತ ಕಥಾ ಸುಳಾದಿ
ರಾಗ : ಕಾಪಿ
ಹಾಡಿರುವವರು : ಶ್ರೀ ಸುಮುಖ್ ಮೌದ್ಗಲ್ಯ
ವ್ರತವೆ ಉತ್ತಮ ವ್ರತವೆಂದು ಪೇಳಿಹರು
ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು
ಸತತ ಅಧ್ಯಾತುಮ ಅನಂತ ವ್ರತವೆಂದು
ಕ್ಷಿತಿಯೊಳು ಈ ವ್ರತಕೆ ಸರಿಗಾಣೆನೊ
ಪತಿತ ಮಾನವರ ಉದ್ಧಾರಗೋಸುಗವಾಗಿ
ದ್ವಿತಿಯ ಉತ್ತಮ ವ್ರತವು ಹನುಮದ್ವ್ರತವೊ
ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ
ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯ ವ್ರತವೊ
ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು
ಮತಿವಂತರು ಮನಕೆ ತಂದು ತಿಳಿದು
ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವ್ರತವೊ
ಪತಿಭಕುತಿ ಯುಕುತಳಾದ ದ್ರೌಪದಿಯೂ
ಪತಿ ಮೂರ್ಲೋಕದ ಶ್ರೀಕೃಷ್ಣನುಪದೇಶದಂತ್ಯೆ
ಮಿತ ಜ್ಞಾನದಿಂದ ಚರಿತ ವ್ರತವೊ
ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಅ -
ಚ್ಯುತನಾದ ರಾಮನು ಮತಿವಾನ್ ಹನು -
ಮಂತನ ಭಕುತಿಗೆ ವೊಲಿದು ಮಾಡ್ದ ವ್ರತವೊ
ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ
ಮಿತಿ ಇಲ್ಲದೇ ಪೇಳಿ ಮಾಡಿಸಿದ ವ್ರತವೊ
ವೃತತಿಜಾಸನ ಪ್ರಿಯ ಸುತ ಸುಂದರವಿಟ್ಠಲನ ಭ -
ಕುತಿ ಜ್ಞಾನವೀವ ಮಹಾಶ್ರೇಷ್ಠ ವ್ರತವೊ ॥ 1 ॥
ಮಟ್ಟತಾಳ
ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು
ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ
ಮೇಣು ಭಕುತಿಯಿಂದ ಜ್ಞಾನವಂತರೆ ನಿಮ್ಮಿಂ -
ದಾನೇಕ ವ್ರತಮಹಿಮೆಯಾನು ಕೇಳಿ ನಿತ್ಯ
ಧೇನಿಸುವೆವು ಹರಿಯಾ ಪುನೀತರ ಮಾಡುವಾ
ಕಾಣೋವನ್ಯ ವ್ರತವು ಆವುದು ಪೇಳೆನಲು
ಪ್ರಾಣದ ಪಾವನಿಯ ಪರತರ ಪ್ರಿಯವ್ರತವು
ಸಾನುರಾಗದಿ ನಿತ್ಯ ಶೂದ್ರಾದಿ ನಾಲ್ಕು
ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ
ಏನು ಬೇಡಿದರೆ ತಡಿಯದೆ ಕೊಡುವುದೊ
ಜ್ಞಾನಿಜನಗಳಿಗೆಲ್ಲ ಮಂಗಳತಮ ವ್ರತವು
ಏನು ಪೇಳಲಿ ಮತ್ತೆ ಆರೋಗ್ಯ ಐಶ್ವರ್ಯ ಪುತ್ರಾದಿಗಳೀವುದು
ಶ್ರೇಣಿ ದಿನಪ್ರತಿದಿನದಲ್ಲಿ ವರವಿದ್ಯ ಪ್ರದವೊ
ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ
ಮಾನನಿಧಿ ಸುತ ಸುಂದರವಿಟ್ಠಲನ
ಧ್ಯಾನ ಧಾರಣವೀವ ಉತ್ತುಮಾ ಮಹವ್ರತವೊ ॥ 2 ॥
ರೂಪಕತಾಳ
ಒಂದಾನೊಂದು ಸಮಯದಲ್ಲಿ ಶ್ರೀವ್ಯಾಸ ಶಿಷ್ಯ -
ವೃಂದದಿಂದೊಡಗೂಡಿ ಯುಧಿಷ್ಠಿರನ ನೋಡಲು
ಅಂದುಳ್ಳ ದ್ವೈತವನಕೆ ನಡೆತಂದರು ಏನಂಬೆ
ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ
ಕುಂದ ಮಂದಾರಾದಿ ಪುಷ್ಫ ಫಲ ವೃಕ್ಷಗಳಿಂ ಶೋಭಿಪ
ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು
ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ
ಮುಂದೆ ಅಧ್ಯಯನ ಶ್ರುತ ಸಂಪನ್ನರಾದವರು
ಒಂದೊಂದು ವೇದ ಋಗು ಯಜುಃಸಾಮಾಥರ್ವಣ
ಒಂದೊಂದು ಶಾಖಾ ಶಾಸ್ತ್ರದಿ ಪ್ರವಚನಾಸಕ್ತರು
ಮಿಂದು ಹರಿಪದಜಲದಿ ಚತುರವೇದ ಘೋಷದಿ
ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ
ಎಂದೆಂಬುವ ಹರಿಕಥಾಮೃತ ಪಾನ ಮಾಡುವ
ಸಂದೋಹ ಮುನಿಗಳಿಗೆ ನಿತ್ಯಾನ್ನ ದಾನವ ಮಾಡಿ
ಬಂಧುಗಳಿಂ ಸಹಿತ ಇರುವ ಯುಧಿಷ್ಠಿರನನ್ನು
ಸುಂದರವಿಟ್ಠಲಾತ್ಮಕ ವ್ಯಾಸದೇವನು
ಅಂದು ದ್ವೈತವನದಲ್ಲಿ ಕೃಪಾದೃಷ್ಟಿಯಿಂದ ನೋಡಿದನು ॥ 3 ॥
ಝಂಪಿತಾಳ
ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ
ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ
ಜೇಷ್ಠನಾದ ಯುಧಿಷ್ಠಿರನು ತಾ ದೂರ ನಡೆತಂದು ವಾ -
ಸಿಷ್ಠ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ -
ರ್ದಿಷ್ಟವಾದೇಕಾಂತ ಸ್ಥಳಕೆ ಕರೆತಂದು
ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ
ಜಿಷ್ಣ್ವಾದಿ ಕೃಷ್ಣೆಯೊಡನೆ ಉತ್ಕೃಷ್ಟ ಪೂಜೆಯ ಮಾಡೆ ಪರ -
ಮೇಷ್ಠಿ ಜನಕನು ತಾನು ತುಷ್ಟನಾಹೆ
ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ -
ರ್ದುಷ್ಟ ಭೀಮಾರ್ಜುನರೆ ಆಶ್ವಿನಿಯರೇ ಮನ -
ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೆ ?
ಧಿಟ್ಟತನದಲೆ ತಪವನೆಸಗಿ ಕಿರೀಟಿಯೂ
ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು -
ತ್ಕೃಷ್ಟಾಸ್ತ್ರ ಸಂಪಾದನೆಯು ಮಾಡಿದದು ಕೇಳಿ
ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ
ಕಷ್ಟ ಬಡುತಿರುವ ನಿನ ದುಃಖ ಶಾಂತ್ಯರ್ಥ
ಇಷ್ಟವೀವುದಕಾಗಿ ಬಂದಿಹನು ರಾಜಾ ಯು -
ಧಿಷ್ಠಿರನೆ ಕೇಳುತ್ತುಮ ವ್ರತವು ನಿನಗೋಸುಗ
ಸೃಷ್ಟಿಗೊಡೆಯ ಸುಂದರವಿಟ್ಠಲ ಪೇಳ್ವೆನೆನಲು
ನಿಷ್ಠಿಯಿಂದಲಿ ಧರ್ಮತನಯ ನುಡಿದನು ॥ 4 ॥
ತ್ರಿವಿಡಿತಾಳ
ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ
ನಮೊ ನಮೊ ನಮೊ ಎಂದು ಬಿನ್ನೈಸುವೆ
ಶ್ರಮ ಪರಿಹರ ವ್ರತವಾವುದದರ ಮಹಿಮೆ
ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ
ಕುಮತಿ ಪರಿಹರಿಸುವ ದೇವತೆ ಆರು ಉ -
ತ್ತುಮ ನಿಯಮ ಆವುದು ಪೂಜಾಕ್ರಮವು
ಶಮೆ ದಮೆವೀವ ನಿಯಮ ತಿಥಿ ಆವುದು
ರಮೆ ರಮಣನೆ ಆವ ಮಾಸದಲಿ ಮಾಡೋದು
ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ -
ಗಮನವು ಎಮ್ಮಯ ಕಷ್ಟ ದೂರೋಡಿಸಲು
ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ
ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು
ಭ್ರಮಣ ಮತಿಯ ಕಳೆವ ಹನುಮಾನ್ ಹ -
ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು
ಅಮಮ ಪೇಳಲೇನೊ ಹನುಮದ್ವ್ರತವೋ
ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ
ಸಾಮಸ್ತ ಕಾರ್ಯ ಸಿದ್ಧಿಪದು ಸಂಶಯ ಬ್ಯಾಡಿ
ಆ ಮಹಾ ದುಷ್ಟ ಗ್ರಹೋಚ್ಚಾಟನ ಜ್ವರಾದಿ
ತಾಮಸ ರೋಗ ನಿವಾರಣವಾಗುವದು
ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ?
ಸೀಮೆಗಾಣದ ಅಭೀಷ್ಟಪ್ರದಾಯಕವೊ
ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ
ಶ್ರೀಮದ್ವಿಷ್ಣುವೆ ಕೃಷ್ಣ ಪಾಂಚಾಲಿಯ ನಿ -
ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ -
ನೂಮದ್ವ್ರತವನ್ನು ಉಪದೇಶಿಸಿ
ನೇಮದಿಂದಲೀ ವ್ರತವು ಮಾಡಿಸಿರಲು
ಕಾಮಿತ ಫಲವೀವಾ ವ್ರತದ ಮಹಿಮೆ ಆ
ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯಾದಿ
ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ
ಈ ಮಹಾ ವ್ರತ ಮಹಿಮೆ ತಿಳಿಯದ ಪಾರ್ಥನು
ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ
ಹೇ ಮಹಿಷಿಯೆ ಇದೇನ್ನೆನ್ನಲಾಗಿ
ತಾಮರಸನಯನೆ ಶ್ರೀಹನುಮದ್ದೋರವೆನ್ನೆ
ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ -
ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು
ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ
ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ
ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ
ಕಾಮಿತಫಲ ಕೊಡಬಲ್ಲದೆ ಕೇಳಿನ್ನು
ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು
ಕಾಮಿಜನರ ತೆರದಿಂದಲಿ ಅರ್ಜುನನು
ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ
ಆ ಮುದದ ದೋರವನು ಹರಿದು ಬಿಸಾಟಲು
ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು
ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ
ಭ್ರಾಮಕ ಮತಿಯಿಂದ ನೀವುಗಳೀ ಪರಿ
ಶ್ರೀಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು
ಸ್ವಾಮಿ ಆಜ್ಞದಿ ಹದಿಮೂರೊರುಷ ಪರಿಯಂತ
ನೇಮಿಸಿದಂತೆ ಅನುಭವಿಸಬೇಕಯ್ಯಾ ಶ್ರೀ -
ರಾಮೆ ಮನೊರಮನು ಇನಿತು ನುಡಿಯೆ
ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು
ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ
ಭೀಮಭವಾಬ್ಧಿ ದಾಂಟಿಸುವ ಸುಂದರವಿಟ್ಠಲನ
ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು ॥ 5 ॥
ಧ್ರುವತಾಳ
ಕೇಳಯ್ಯಾ ಧರ್ಮರಾಜ ಆಲಸ ಮಾಡದೆ
ಪೇಳುವೆ ನಿನಗೊಂದು ಪುರಾತನ ಕಥೆಯು
ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು
ಶೀಲೆ ಸೀತೆಯ ನೋಡುವ ಇಚ್ಛಾ ಉಳ್ಳ ಮಾ -
ಲೋಲ ರಾಮನು ನಿತ್ಯ ಲಕ್ಷ್ಮಣನೊಡಗೂಡಿ
ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ
ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ
ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ -
ಹಾಳ ಮತಿಯುಳ್ಳ ವಾಯುಜ ಮಾಡಿಸೆ
ನಾಲಕು ಮಾಸ ಮಳೆಗಾಲವು ವಾಸ ಮಾಡ್ದ
ಕಾಲದಲಿ ಹನುಮನು ರಾಮದೇವಗೆ ನಮಿಸಿ
ನೀಲಮೇಘಶ್ಯಾಮ ಶ್ರೀರಾಮ ನೀನಿನ್ನ
ಬಾಲನ ಬಿನ್ನಪ ಮನಕೆ ತರಲೂ
ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ
ಮೇಲು ಸಿಲೆಯನುದ್ಧರಿಸಿದ ಶ್ರೀರಾಮ ನೀನಜ್ಞನೆ
ಕಾಲ ಜನನದಲಿ ಇಂದ್ರನಿಂದಲಿ ಎನ್ನ
ಮೇಲಾದ ವಜ್ರಾಯುಧದಿಂದ ಹನು ಘಾತಿಸಲು
ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗೆ
ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ
ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು
ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ
ಈ ಲೀಲೆಯ ತಿಳಿದು ಲೋಕಶಿಕ್ಷಣಗೋಸುಗ
ಕಾಲ ವಜ್ರಾಯುಧದಿಂದ ಹೊಡೆಯಲು ಮೂರ್ಛಿತ
ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ -
ಲೋಲನ ಸಖನಾದ ವಾಯುದೇವನು ಎನ್ನ
ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ
ಕಾಲನಾಮಕ ಭಗವಾನಿಚ್ಛೆಯಂತೆ ತೃಟಿ -
ಕಾಲ ಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ -
ಲೋಲನಿಂದೆನ್ನ ಪುತ್ರನ ಕೆಡಹಿರಲವನನ್ನು ಈ
ಕಾಲ ಲವದಲ್ಲಿ ಕೆಡಹೆನೆನಲು ಆ -
ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ
ಓಲೈಸಿ ಪೇಳ್ದ ಮಾತು ಎನಗೋಸುಗ ಆಂಜನೇಯಾ
ಬಾಲನೆ ಚಿರಂಜೀವಿಯಾಗು ನೀನೆ ಪರಾಕ್ರಮಿ
ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ
ಬಾಲ ಹನುಮನ ಪೂಜೆ ಮಾಡ್ದರು ದೇವತೆಗಳು
ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ
ಕಾಲ ಅಭಿಜಿನ್ ಮುಹೂರ್ತದಲ್ಲಿ ಆರು ಪೂಜಿಪರೊ
ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು
ತಾಳ ಮ್ಯಾಳರೊಡನೆ ವರವ ನೀಡಿ ಪೋದರು
ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ
ಪೇಳೆ ಸುಂದರವಿಟ್ಠಲ ರಘುರಾಮನು ನಸುನಗೆ -
ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು ॥ 6 ॥
ಮಟ್ಟತಾಳ
ಭಕುತ ವತ್ಸಲ ನೀನು ಭಕುತರಿಚ್ಛಿದ ನೀನು
ಭಕುತ ಬಾಂಧವ ನೀನು ಭಕುತರೊಡಿಯ ನೀನು
ಭಕುತ ಪಾಲಕನೆಂಬ ಬಿರುದುಳ್ಳವ ನೀನು
ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು
ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ
ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು
ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ
ವ್ಯಕುತವಾಗ್ವದು ಸತ್ಯ ಸರ್ವಜ್ಞನು ನೀನು
ಭಕುತರ ಮನದಿಂಗಿತ ತಿಳಿಯದವನೆ ನೀನು
ಅಖಿಳ ಬ್ರಹ್ಮಾಂಡದರಸೆ ನಮೊನಮೊ ನಮೊನಮೊ
ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ
ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು
ಭಕುತರು ನಿನ್ನಿಂದಲೆ ಕೀರ್ತಿವಂತರಹರು
ಅಕುಟಿಲ ಪ್ರಭೋ ನೀನು ನಾ ನಿನ್ನ ನಿಜ ಭಕ್ತ
ಸಕಲ ಕಾಲದಲ್ಲಿ ನಿನ್ನ ನಾ ಮರೆಯದಲೇ
ವಿಖನಾಸಾಂಡದಲ್ಲಿ ಸೇವೆ ಮಾಳ್ಪದು ನಿಜವಾಗೆ
ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ
ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ
ಭಕುತ ಹನುಮಂತ ಇನಿತು ವಿಜ್ಞಾಪಿಸಿ ನಿಲಲು
ಪ್ರಕಟಿತ ಅಶರೀರ ವಾಕ್ಯವು ಬಿಡದಲೆ
ಸಕಲ ನುಡಿ ಹನುಮಾ ಸತ್ಯನಾಡಿದನೆನಲು
ಸುಕರ ಏಕಮೇವದ್ವಿತಿಯ ಸುಂದರವಿಟ್ಠಲ ತುಷ್ಟನಾಹೆ ॥ 7 ॥
ಝಂಪಿತಾಳ
ಮಾಸ ಮಾರ್ಗಶೀರ್ಷ ಶುದ್ಧ ತ್ರಯೋದಶಿ
ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ
ಶ್ರೀಶ ರಾಮನು ಹನುಮದ್ವ್ರತವ ಮಾಡ್ದ ತ್ರಯೋ -
ದಶ ಗ್ರಂಥಿಯುತ ಹರಿದ್ರಾ ದೋರಗಳಲಿ
ಭಾಸುರಾ ಮತಿವೀವ ಹನುಮನಾವ್ಹಾನಿಸಿ
ಪೇಶಲಾ ಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ
ಶ್ರೀಸೀತೆ ವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ
ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದ ನೇನಂಬೆ
ಲೇಶ ಬಿಡದೇ "ಓಂ ನಮೋ ಭಗವತೇ ವಾಯುನಂದನಾಯ"
ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ದನೋ
ದೇಶಪರಿಮಿತ ಪ್ರಸ್ಥ ತ್ರಯೋದಶ ಗೋಧೂಮವನು
ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತ ದಾನ
ಮೀಸಲಾ ಮನದಿ ಈ ಸತ್ಕಥೆಯನು ಕೇಳಿ
ಭೇಶಮುಖಿ ಸೀತಿಯಳ ಕೂಡ್ದನೆಂಬದು ಖ್ಯಾತಿ
ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ
ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ
ತೋಷದಲಿ ವಿಭೀಷಣ ಶ್ರೀರಾಮನಾಜ್ಞೆಯಿಂ ಮಾಡ್ದು
ದೇಶ ಲಂಕೆಯ ರಾಜ್ಯವನು ಪಡೆದನು
ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ
ಲೇಸು ವಿಶ್ರುತವಾದಿತೈ ಹನುಮದ್ವ್ರತವೂ
ಆ ಸುಸಂವತ್ಸರ ತ್ರಯೋದಶ ಪರಿಯಂತ ಮಾಡ್ದುದ -
ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೇ
"ಮಾಸಾನಾಂ ಮಾರ್ಗಶೀರ್ಷೋಹಂ" ಎಂದು ಗೀತೆಯಲಿ
ಆ ಸ್ವಾಮಿ ದಿವ್ಯ ನುಡಿಯುಂಟು ಕೇಳ್ ಧರ್ಮಜನೆ
ಸ್ತ್ರೀ ಸಹಿತ ಅನುಜರೊಡನೇ ಈ ವ್ರತವನು
ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ
ಕೋಶ ಭಾಂಡಾರ ಪ್ರಾಪ್ತಿಯಾಗುವದು
ಲೇಶ ಸಂಶಯ ಬ್ಯಾಡೆನಲು ಶ್ರೀವ್ಯಾಸ
ಆ ಸುಂದರವಿಟ್ಠಲನ ಭಕುತರು ಮುದಭರಿತರಾಗೆ ॥ 8 ॥
ರೂಪಕತಾಳ
ರವಿಯು ವೃಶ್ಚಿಕ ರಾಶಿಗೆ ಬರಲಾಗಿ
ಸವೆಯಾದ ಪದವೀವ ವ್ರತವ ಮಾಡುವದಕ್ಕೆ
ಕವಳಾ ಅಜ್ಞಾನಾಖ್ಯ ರಾತ್ರಿ ಕಳೆದು
ಸುವಿಮಲಾ ಜ್ಞಾನಾಖ್ಯ ಪ್ರಾತಃಕಾಲದಲೆದ್ದು
ಕವಿ ವ್ಯಾಸರ ಮುಂದೆ ಮಾಡಿ ಧರ್ಮಜನು
ಸುವಿವೇಕ ಬುದ್ಧಿಯಿಂ ಸ್ನಾನಾದಿಗಳ ಮಾಡಿ
ಹವಿಷಾದಿ ದ್ರವ್ಯಗಳಲಿ ಹರಿಯ ಚಿಂತಿಸಿ ಮಾ -
ಧವನಾಜ್ಞೆಯಂತೆ ಉದ್ಯಾಪನವಂ ಗೈದು
ಕವ್ಯವಾಹನನಲ್ಲಿ ಮೂಲಮಂತ್ರದಿಂದ
ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ
ನವಭಕುತಿಯಲಿ ಹನುಮಂತನ ವ್ರತಾಚರಿಸಲು
ಹವಣಿಸಿ ಸಂವತ್ಸರವು ಪೋಗಲು ಪಾಂಡವರು
ಬವರದಲ್ಲಿ ಕೌರವರ ಗೆಲಿದು ನಿಜರಾಜ್ಯ ಪಡೆದರೆಂದು
ಪ್ರವಚನಾಸಕ್ತ ಸೂತಾಚಾರ್ಯರು ಶೌನಕರೆ
ತವಕದಲಿ ನೀವೀ ವ್ರತವನು ಮಾಡಿರೈಯ್ಯಾ
ಭವಿಷ್ಯೋತ್ತರದಲ್ಲಿ ಪೇಳಿಹರು ವ್ಯಾಸದೇವ
ಪವಮಾನಿಸುತ ಹನುಮದ್ವ್ರತ ಮಹಿಮೆಯನು
ಜವಭಕುತಿಯಲಿ ಮಾಡೆ ಸುಂದರವಿಟ್ಠಲ ವೊಲಿವಾ ॥ 9 ॥
ತ್ರಿವಿಡಿತಾಳ
(ಅಧ್ಯಾತ್ಮ-ಸಮಾಲೋಚನೆ)
ಪರಮಾತ್ಮ ಶ್ರೀರಾಮ ಪರಿಪೂರ್ಣಕಾಮನು
ಪುರಹರನುತ ಈಪರಿ ಭಕುತನಭಿಲಾಷೆ
ಪರಿಪೂರೈಸಿದನಲ್ಲದೆ ಇದರಿಂದೇನು ಪ್ರಯೋಜನ ಪಾ -
ಮರ ಮತಿ ತ್ಯಜಿಸಿ ತಿಳಿಯೆ ಮಾನವರು ನಿತ್ಯ
"ಯದ್ಯದಾಚರತಿ ಶ್ರೇಷ್ಠ ತದ್ದೇವೇತರೋಜನಾಃ"
ಸುರರೊಡಿಯ ಪೇಳಿಹ ಸತ್ಯವಾಕ್ಯವು
ಸರಿಯೆನ್ನಿ ಮುಂದೆ ಅನೇಕ ಪ್ರಮೇಯಗಳುಂಟು
ಪರಮಾನಂದಭರಿತಾ ಸುಜ್ಞಾನ ವಿಜ್ಞಾನಾತುಮ
ಮುರವಿರೋಧಿಯ ರೂಪಾ ಪುಂಸ್ತ್ರೀ ಭೇದದಲಿ
ಎರಡುಂಟು ಎಂದಿಗೂ ನಿತ್ಯಸತ್ಯವಾಗಿ
ಅರವಿದೂರರು ಇನಿತುಪಾಸನೆಯ ಮಾಡುವರು
ನಿರುತದಲಿ ಆನಂದಮಯ ಪುರುಷ ತಾನು
ಸ್ವರಮಣನು ತನ್ನ ವಿಜ್ಞಾನಾಖ್ಯ ಸ್ತ್ರೀರೂಪದಿ
ಚರಿಸಿ ಸುಖಪಡುವ ಆನಂದಮಯ ರಾಮ
ಹರನೈಯ ಹನುಮನೆಂಬುದು ಜ್ಞಾನಕೆ ಶಬ್ದ
ವರದೊರದು ಪೇಳಿಹ್ಯವು ಅನೇಕ ಶ್ರುತಿಗಳು
ಕರಣಶುದ್ಧಿಲಿ ತಿಳಿ
"ರಮಂತೆ ಯಸ್ಮಿನ್ ಯೋಗಿನಃ" ರಾಮೆಂದು
ಭರಿತ "ಆನಂದಮಯ ರಾಮನು" ಹನುಮಾಭಿದಾ -
ತುರದ ಜ್ಞಾನ ವಿಜ್ಞಾನ ರೂಪದಿ ರಮಿಸಿ ಆನಂದ -
ಭರಿತನಾದನು ಮುದದಿಂದ ಕೇಳಿ ಮುಂದೆ
ಕರುಣಾಕರ ರಾಮ ಮಾಡಿದ ಚರಿಯವು
ಸರಸವಾದ ಮಾರ್ಗಶೀರ್ಷ ವೃಶ್ಚಿಕ ಮಾಸೇನು ?
ಹರಿತಾಭ ತ್ರಯೋದಶಿ ಗ್ರಂಥಿ ದೋರವೇನು ?
ಮೆರೆವ ತ್ರಯೋದಶಿ ಜಯಾ ಅಭಿಜಿನ್ ಏನು ?
ವರ ಗೋಧೂಮ ಪರಿಮಿತ ಪ್ರಸ್ಥವಾವುದು ?
ಸುರಗಂಗೆಯಾದ ಜಾಹ್ನವಿ ತೀರವಾವುದೊ ?
ಪೌರಾಣಿಕ ಸೂತ ಶೌನಕರಾರಯ್ಯ ?
ಪರಮ ಮಂಗಳಯುಕ್ತ ದ್ವೈತವನವಾವುದು ?
ಪರಾಶರತನಯ ವ್ಯಾಸರೆ ಸರ್ವತ್ರದಲಿ
ಅರನಿಮಿಷ ಬಿಡದಲೆ ವ್ಯಾಪ್ತನಾಗಿಪ್ಪನು
ವರವೇದಾದಿ ವಿಭಾಗಗೈಸಿ
ನಿರ್ಣೈಸಿದ ಚಾರಿತ್ರನೋ ?
ಸ್ಮರನೈಯ್ಯ ಶ್ರೀಕೃಷ್ಣ ವರ ಪಾಂಡವರಾರು ?
ಮರುತಾತ್ಮ ಭೀಮ ಅರ್ಜುನ ಅಶ್ವಿನೇಯರು
ನಿರುವೈರ ಧರ್ಮಜ ಕೃಷ್ಣೆ ಆರೈಯ್ಯ ತಿಳಿಯೆ ?
ಸರುವ ಅಧ್ಯಾತ್ಮ ಅಧಿದೈವದಿಂದಲೆ ಮಿಳಿತ
ಸಿರಿ ವರ ಸುಂದರವಿಟ್ಠಲ ತಾನಿಂದು ದಯದಿ
ಗುರುವಂತರ್ಯಾಮಿ ಪೇಳಿಸಿದಂತೆ ಪೇಳ್ವೆ ॥ 10 ॥
ಝಂಪಿತಾಳ
ಸಾಧನವ ಮಾಡುವಾ ಮಾಧವನ ಭಕುತರೇ
ಬಾದರಾಯಣರ ಮತಕೆ ಅನುಕೂಲವಾಗಿ
ಆದರದಿ ಶ್ರೀಮದಾನಂದತೀರ್ಥರುಕ್ತಿಯಂತೆ
ಸಾದರದಿ ಒರೆವೆ ಜ್ಞಾನಿಗಳ ಪದಕೆರಗಿ
ಆ ದ್ವೈತವನವೆ ಸುಖದುಃಖ ಸಂಸಾರವನಧಿ ಅ -
ಗಾಧ ದಾಟುವದಕೆ ಜೀವಿಗಳು ನಿತ್ಯ
ಸಾಧನ ಸಾಧ್ಯ ಸಿದ್ಧರು ಮೂರು ಬಗೆಯಲಿ
ಮೋದ ಭರಿತರಾದ ವರ ಜ್ಞಾನಿಗಳ ಸಂಗದಲಿ
ಭೇದ ಪಂಚಕ ತರತಮವರಿತು ಅವರಿಗೆ ಅ -
ನ್ನಾದಿಗಳ ಕೊಡಲು ಶ್ರೀಹರಿ ಪ್ರೀತನಾಗಿ
ಕಾದುವಾ ಕರ್ಮ ವಿಕರ್ಮಗಳ ತಗ್ಗಿಸಲು
ಮೇದಿನಿಯೊಳು ವರ ಬ್ರಾಹ್ಮಣ ಜನುಮವಿತ್ತು
ಭೂದೇವರಾದ ಜ್ಞಾನಿಗಳಲಿ ಭಕುತಿ ಇತ್ತು
ಖೇದ ದೂರೋಡಿಸಿ ಜ್ಞಾನವೀವುದಕೆ ಮಹಾ
ಸಾಧುಗಳ ಸಂಗತಿಯಿತ್ತು ಶ್ರವಣ ಮನ -
ನಾದಿ ನಿಧಿಧ್ಯಾಸವನೀಯಲೂ ಶ್ರೀ -
ಪಾದತೀರ್ಥ "ಗಂಗಾ ಇಡಾಖ್ಯನಾಡಿ" -
ಯಾದ ನದಿಯೇ ಜಾನ್ಹವಿಯಲಿ ಮಿಂದು ಶುಚಿಯಾಗಿ
ಕ್ರೋಧರಹಿತ ಸೂತಪೌರಾಣಿಕ ಗುರುಗಳು
ಮೋದಭರಿತ ಜ್ಞಾನಭಕ್ತಿವೈರಾಗ್ಯ ಹರಿ -
ಪಾದದಲಿ ಪ್ರಸವಿಸುವ ಸೂತರಲಿ
ಸಾಧನಾ ಸಾಧ್ಯ ಭಕುತರೆಂಬ ಶೌನಕರು
ಆಧ್ಯಾತುಮಾ ಅಧಿಧೈವ ತಿಳಿಯೇ ಪ್ರಶ್ನವು
ಆದರದಿ ಮಾಡ್ದುದೇನಚ್ಚರವೆಂದು ತಿಳಿಯಬೇಡಿ
ಆ ಧರ್ಮಜನೆ ಮುಖ್ಯ ಶ್ರವಣಕ್ಕೆ ಅಭಿಮಾನಿ
ತಾ ದೂರದಲಿ ಬಾಹಿರದಲಿದ್ದ ಶಬ್ದಾದಿಗಳ ಗಂಧಜ್ಞಾನಾ -
ವಾದುದಕೆ ಅಶ್ವಿನಿಯರು ಈ ಮನವೆ ಚಂಚಲ -
ವಾದ ಮದ ಮದಕರಿ ಕಟ್ಟಲು ಆ ಅರ್ಜುನನೆ ಇಂದ್ರನು
ತಾಯದಿ ಭಕುತಿ ವೀವುದಕೆ ಭಾರತಿ ಕೃಷ್ಣೆ
ಈ ದಯಿತೆಯೊಡೆಯ ಮಹಾಜ್ಞಾನ ವಾಯು ಭೀಮಾ
ಆ ದುರಿತ ಕಳೆವುದಕೆ ಶ್ರೀಕೃಷ್ಣನ ಪ್ರ -
ಸಾದವೇ ಮುಖ್ಯವು "ಏನಂ ಮೋಚಯಾಮಿ"
ಸಾಧನದೀ ವಿಧದಿ ಶ್ರವಣಾದಿ ನವಭಕುತಿ ಭರಿತ
ಮಾಧವನ ವಿಭೂತಿ ಪೂರ್ಣವಿರುವ ಮಾಸ -
ವಾದ ಕಾಲವೆ ಮಾರ್ಗಶೀರ್ಷ ನವಮಾ -
ವಾದ ಕಾರಣದಿ ಬಹು ಶ್ರೇಷ್ಠವಹುದೈಯ್ಯ ರವಿ -
ಯಾದ ಸವಿತೃನು ವೃಶ್ಚಿಕಕುದಯನಾಗೆ ಸಮಗತಿಯೆಂದು
ಆದರದಿ ಬುಧರು ಪೇಳುವರು ಭಾಗವತದಿ ಮನ ನಿ -
ರೋಧಿಸಿ ಚಿತ್ತ ಸಮವಿಡುವದೇ ವೃಶ್ಚಿಕ ರಾಶಿ ಎಂ -
ಬ್ಹಾದಿಯನೆ ತಿಳಿಯಲು ರವಿಯುದಯ ಮಿಹಿರಾಖ್ಯ ಜ್ಞಾ -
ನೋದಯದಿ ಸಮಮನಸ್ಕನಾಗಲೂ ಚಿತ್ತದಲ್ಲಿ
ತಾ ದಯದಿ ಅಧೋಕ್ಷಜನು ಪೊಳೆವನು ಈ
ಆದಿ ಮೂರುತಿಯೆ ಕಪಿಲ ಕಲ್ಕಿ ಹಯಾ -
ಸ್ಯಾದಿ ತ್ರಯೋದಶ ಮೂರುತಿ ತಿಥಿ ತ್ರ -
ಯೋದಶಕೆ ಅಭಿಮಾನಿಯಾದ ಕುಬೇರನಲಿ
ನಿಂದು ಸ್ಥಿರ ಧರ್ಮ ಬುದ್ಧಿ ಮೋದದಿಂ ಪಾಲಿಪರು
ಕಪಿಲ ಕಲ್ಕಿ ರೂಪಾದಿ ಸುಪ್ರಕಾಸ್ಯವೇ ಅಭಿಜಿನ್
ಕಾಲ ರವಿ ಅಚಲನಾಗಿಹ್ಯನೆಂದು
ಸಾಧು ಸಮ್ಮತವಾದ ಈ ಮರ್ಮವ ತಿಳಿದು ಆ -
ರಾಧಿಸು ಜ್ಞಾನಾಖ್ಯ ಅಭಿಜಿನ್ ಪ್ರಕಾಶದಲಿ ಜಯವೂ
ಆ ದೀಪದಲಿ ಪ್ರಕಾಶಿಸುವ ಗುಣವಿರುವದಾದುದರಿಂದ
"ದೀಪ ಸಂಯೋಜನಾಜ್ಞಾನಂ ಪುತ್ರಲಾಭೋಭವೆದ್ಧ್ರುವಂ"
ವಾದಿಗಳ ಪಲ್ಮುರಿವ ಬುಧರ ವಾಕ್ಯವೆ ಉಂಟು
ಮೇದಿನಿ ಸುರರು ತಿಳಿಯಿರಿ ಆ ತ್ರಯೋದಶ ರೂಪ
ಈ ದೀಪವೆಂಬ ಜ್ಞಾನಾಖ್ಯ ಪ್ರಕಾಶವು
ವೇದವ್ಯಾಸಾದಿ ರೂಪಗಳಿಂ ಆಗುವದೆಂದು
ವೇದ ಸಾಮದಿಂ ಕಾಲರೂಪಗಳ ತಿಳುವಳಿಕೆಯಾಗಲು
ವೇದ ವಿಸ್ತರಿಸಿದಾ ವ್ಯಾಸರ ದಯ ಬೇಕು ಆ
ವೇದಗಳಿಗೆಲ್ಲ ಪ್ರಕೃತಿ ಶುದ್ಧರೆ ಅಭಿಮಾನಿ -
ಯಾದ ಈರ್ವರ ಪಿತನು ಕೃತಿಪತಿ ದೇವ -
ನಾದ ಪ್ರದ್ಯುಮ್ನನೆಂದು ಗಾಯನ ಮಾಡಿರೋ ಸಾಮ -
ವೇದಕ್ಕೆ ಅಭಿಮಾನಿ ಹರಿತಾಭ ಪ್ರದ್ಯುಮ್ನನೋ
ಭೇದ ಜ್ಞಾನನೀವ ಹನುಮಾನುಪನಿಷತ್ ಸಾಮ -
ವೇದೀಯವಾದ ಕಾರಣದಿ ಹರಿದ್ವರ್ಣವುಳ್ಳ -
ಯಾದ ದೋರವೆ ಪ್ರದ್ಯುಮ್ನಾಖ್ಯ ಕರುಣಾಮಾಲೆ
ಆ ದೇವತೆಗಳೆಲ್ಲ ಮಧುವಿದ್ಯಾ ಉಪಾಸಕರಾಗಿ
ಊರ್ಧ್ವಗತ ರವಿ ರಶ್ಮಿ ಪೀತವರ್ಣ ವಿಶಿಷ್ಟಾನೇಕ
ವೇದ ಸಮೂಹಗಳಿಂ ಸ್ತುತಿ ಮಾಡಿ ಜ್ಞಾನಾಖ್ಯ -
ವಾದ ಮಹೋದಧಿಯಲ್ಲಿ ಮುಳುಗಿ ಆನಂದ ಬಡುವರು ನಿತ್ಯ
ಮೋದಾರ್ಯರಂತಗ ಸುಂದರವಿಟ್ಠಲ ನುಡಿಸಿದಂದದಿ ನುಡಿದೆ ॥ 11 ॥
ಅಟ್ಟತಾಳ
ಆ ಪೀತವರ್ಣ ವಿಶಿಷ್ಟ ದೋರದ ಗ್ರಂಥಿ
ಶ್ರೀಪ್ರದ್ಯುಮ್ನನ ಜ್ಞಾನಾಖ್ಯ ರೂಪಗ -
ಳೀ ಪರಿ ಚಿಂತಿಸಿ ಹನುಮನ್ನಾವ್ಹಾನಿಸಿ
ಆ ಪುರುಷ ವೈಕುಂಠ ಅನಂತಾಸನ ಶ್ವೇತ -
ದ್ವೀಪ ಮಂದಿರನ ಮೂರು ರೂಪಗಳೊಂದೆ
ತಾಪಸಿ ಬದರಿನಿವಾಸಿ ವೇದವ್ಯಾಸ ದೇವ ಮತ್ತೇ
ಭೂಪ ಮಹಿದಾಸ ಶಿಂಶುಮಾರ ಹಯಶೀರ್ಷ
ಕೋಪ ಕಳೆದ ಧನ್ವಂತ್ರಿ ಕಲ್ಕಿ ವಡಭಾ
ಪಾಪಹರ ಕಪಿಲ ಹಂಸವಕ್ತ್ರ ಋಷಭ ಯಜ್ಞಾ -
ದೀ ಪ್ರಶ್ನಿಗರ್ಭ ಜ್ಞಾನ ರೂಪಗಳು ನಿತ್ಯಾ
ಈ ಪರಿ ಸುಜ್ಞಾನ ಕೊಡುವರು ಬಿಡದಲೆ
ಮಾಪತಿ ರೂಪಗಳಂತೆ ಅನುದಿನದಲ್ಲಿ
ಶ್ರೀಪಯೋನಿಧಿಸುತೆ ರೂಪ ಧ್ಯಾನಿಸು ಸತತ
ಈ ಪೊಡವಿಯೊಳಿದರಂತೆ ಹನುಮ ವಾಯು
ರೂಪಗಳು ಬಿಡದೆ ಸೇವೆ ಮಾಳ್ಪರು ಹರಿಯಾ
ಈ ಪಥದಿಂ ಸುಜ್ಞಾನಿಗಳು ಚರಿಸುವರೈಯ್ಯಾ
ಆ ಪುಣ್ಯವೆಂಬ ಸುಪರಿಮಳ ಗಂಧಾನು -
ಲೇಪನ ಶಾಸ್ತ್ರಾಲಾಪನವೆ ಶ್ರೀತುಲಸಿ ಪೂ -
ಚಾಪನಭಿಮತ ಮನೋವೃತ್ತಿಗಳೆ ಪುಷ್ಪ
ಕೋಪವೆ ಧೂಪವು ಭಕ್ತಿಯೇ ಭೂಷಣ
ವ್ಯಾಪಿಸಿದ ಸದ್ಬುದ್ಧಿ ಛತ್ರವಯ್ಯಾ
ದೀಪವೆ ಸುಜ್ಞಾನ ಆರಾರ್ತಿಗಳೆ ಗುಣಕಥನ
ಪಾಪರಹಿತ ಹರಿ ರೂಪಗಳೈಕ್ಯ ಚಿಂತಿಸುವದೆ
ಸೋಪಸ್ಕಾರ ನಿವೇದನ ನೈವೇದ್ಯವೆಂದು
ಈ ಪರಿ ಷೋಡಶೋಪಚಾರ ವಿಧಾನದಿಂ -
ದೀ ಪೂಜೆ ಅಧ್ಯಾತುಮದಲ್ಲಿ ಅಧಿಧೈವಗ -
ಳೀ ಪರಿ ವ್ಯಾಪ್ಯ ವ್ಯಾಪಕ ರೂಪಗಳ ಧ್ಯಾನಿಸೆ
ನೀ ಪರಿಪಾಲಿಪದೆಂದು ಭಕುತಿ ಸ್ನೇಹ
ರೂಪ ಸ್ನಿಗ್ದಾಖ್ಯ ಗೋಧೂಮವನು ನೀನು
ಶ್ರೀಪತಿ ತ್ರಯೋದಶ ಭೂಪ ಬ್ರಾಹ್ಮಣ -
ರೂಪಗಳಿಗರ್ಪಿಸು ಮನೋವಾಚ ಕಾಯಿಕ ದಕ್ಷಿಣೆ
ರೂಪ ವಿಶಿಷ್ಟ ತಾಂಬೂಲ ಗಂಗಾ ಹರಿ -
ರೂಪ ದ್ರವದಿ ಅವಭೃತನೆಸಗು ಜ್ಞಾನಾಖ್ಯ ಯಜ್ಞ
"ನಹಿ ಜ್ಞಾನೇನ ಸದೃಶಂ ಪವಿತ್ರಮಿಹವಿದ್ಯತೇ"
ಆ ಪರಮಾತ್ಮ ಪೇಳಿಹದು ನಿಜ ನಂಬು
ಖ್ಯಾಪಿಖ್ಯಾಪಿಗೆ ಹನುಮ ಹನುಮನೆಂದು ನುಡಿಯೆ
ಶ್ರೀಪತಿ ಸುಂದರವಿಟ್ಠಲ ವೊಲಿದು ನಲಿದಾಡುವಾ ॥ 12 ॥
ಆದಿತಾಳ
(ಫಲಶ್ರುತಿ)
ಅರಿತು ಈ ಪರಿಯಿಂದ ಸರಸ ಜ್ಞಾನ ಹೃದಿ
ಸರಿತು ಸಲಿಲ ಧ್ಯಾನದಿ ನಿರುತ ಮಿಂದು
ಸರುವ ರಾಗದ್ವೇಷ ಮಲವನ್ನು ಕಳೆದು
ಪರತರ ಜ್ಞಾನ ಸಂಪಾದಿಸಲಿ ಬೇಕು
ಹರ ಮುಖ್ಯ ತಾತ್ವರಿಗೆ ಇದೆ ಇದೆ ವ್ರತ ಮುಖ್ಯ
ನಿರಂಶಿಗಳಾದ ಮುಮುಕ್ಷುಗಳೀ ಪರಿ
ವ್ರತವನು ಮಾಡೆ ಜ್ಞಾನ ದೊರೆಯುವದಚ್ಚರವೇ ?
ಭರಿತ ಭಕ್ತಿ ಯಿಂದಾರು ಕೇಳಿ ಮಾಡ್ವರು ಸತತ
ಬರೆದದು ಈ ಕಲ್ಪ ಆರ ಮನೆಯಲ್ಲಿಹದು
ನಿರುತ ಪಠಣೆ ವ್ರತ ಮಾಡಿದ ಪುಣ್ಯವು
ದೊರೆವುದು ಸಂಪೂರ್ಣ ಮನೋರಥ ಸಿದ್ಧಿಪುದು
ವರ ಬ್ರಾಹ್ಮಣ ವೇದವೇದ್ಯ ಶ್ರೀಮಂತನಾಹ
ಧುರದಿ ಕಾದುವ ಕ್ಷತ್ರಿಯನಿಗೆ ಪರಾಕ್ರಮ
ಬರುವದು ವೈಶ್ಯನಿಗೆ ಧನದ ಕೋಶವು
ಚರಣಜ ಶೂದ್ರನಿಗೆ ಮಹಾ ಕೃಷಿ ಧನ ಪ್ರಾಪ್ತಿ
ವರ ಆರೋಗ್ಯವು ರೋಗಿಗೆ ಪುತ್ರಾರ್ಥಿಗೆ ಪುತ್ರಲಾಭ
ಎರಡೊಂದು ಧರ್ಮಕ್ಕೆಲ್ಲನುಕೂಲಾದ ದ್ರವ್ಯಾಗಮ
ಪರಮ ಮಂಗಳ ಮೋಕ್ಷಾರ್ಥಿಗೆ ಮೋಕ್ಷವು
ಸ್ಮರಿಸುತ ಹನುಮನ್ನಾಮ ಪ್ರಯಾಣ ಮಾಡಲು
ಸರುವದ ವಿಜಯಪ್ರದನಾಗಿ ತಿರುಗಿ ಬರುವ ತೀ -
ವರದಿಂದ ನರರೀ ಪರಿ ಭಕುತಿಯಿಂದ ವ್ರತ ಮಾಡೀ -
ಪರಿ ಮೂರಾವರ್ತಿ "ಓಂ ನಮೋ ಭಗವತೇ ವಾಯುನಂದನಾಯ"
ವರ ಮಂತ್ರದಿಂದ ಗಂಧ ಲೇಪನ ಮಾಡಿ ಫಣಿಗೆ
ಸ್ಮರಿಸಿ ತಿಲಕವನಿಡಲು ಲೋಕ ರಾಜ ವಶ ಸದಾಚಾರ
ನಿರತನಾಹನು ಸರ್ವತ್ರ ಸಭೆಯಲ್ಲಿ
ಬರುವ ವ್ಯವಹಾರ ದ್ಯೂತಾದಿ ವ್ಯಸನವು
ಕರಕರಿಗೊಳಿಸುವ ಸಿಂಹ ವ್ಯಾಘ್ರ ಭಯದಿಂದ ಮುಕ್ತನಾಹ
ಸರುವ ಕಾರ್ಯಗಳಿಂ ಸರ್ವತ್ರ ವಿಜಯನಾಹ
ತ್ವರಿತ ತ್ರಯೋದಶ ಗ್ರಂಥಿಯುಕ್ತ ಹನುಮಂತನ
ಹರಿತ ದೋರ ಕಂಠ ದಕ್ಷಿಣ ಕರದಲ್ಲಾದರು
ಧರಿಸಿದರೆ ಸರ್ವಾಭೀಷ್ಟ ಸಿದ್ಧಿಸುವದು ನಿಸ್ಸಂದೇಹ
ವರ ಬ್ರಾಹ್ಮಣ ಕ್ಷತ್ರ ವೈಶ್ಯ ಶೂದ್ರರಿಗೆ ಸಂಪ -
ತ್ಕರ ವಿಶೇಷ ಪತಿವ್ರತ ಸ್ತ್ರೀಯರಿಗೆ
ನಿರುತ ಜ್ಞಾನಭಕ್ತ್ಯಾದಿಗಳೀವುದು ಸತ್ಯ ಸತ್ಯ
ಹರಿ ವೇಷಧಾರಿ ಹನುಮಂತನ ವ್ರತವು
ಹರಿಯ ಮಂಗಳನಾಮ ಮಹಿಮೆ ತಿಳಿಸಿ ನಿತ್ಯಾ
ಹರಿ ವೊಲಿಮೆಯಾಗಿ ಹರಿಯು ವೊಲಿವನು ಸತ್ಯ
ವರ ವ್ಯಾಸದೇವನು ನಿರುತ ವಿಜ್ಞಾನದಲಿ
ಚರಿಸಿದ ಈ ಪರಿ ಸ್ತೋತ್ರ ಮಾಡಿರೈ ಜ್ಞಾನಿಗಳು
(ವಾಯುದೇವರ ಮಹಾಮಹಿಮೆ ವರ್ಣನಪೂರ್ವಕ ನಮನ)
ವರ ಕಪಿ ಹನುಮನೆ ವಾಯುಪುತ್ರನೆ ನಮೊ
ಮರುತ ಭಾವಿ ಬ್ರಹ್ಮ ಪದಾರ್ಹನೆ ನಮೊ ನಮೊ
ಕರೆವ ಮಹಾಭೀಷ್ಟ ಸದಾಕಾಲ ನಮೊ ನಮೊ
ನಿರುತ ರಾಮಭಕ್ತ ಹನುಮನೆ ನಮೊ ನಮೊ
ಸ್ಮರನಯ್ಯ ಕೃಷ್ಣಪ್ರೀಯ ಭೀಮನೆ ನಮೊ ನಮೊ
ಗುರು ವ್ಯಾಸಶಿಷ್ಯ ಮಧ್ವರಾಯನೆ ನಮೊ ನಮೊ
ಸರುವ ವೇದಗಳಿಂದ ಸ್ತುತ್ಯನೆ ನಮೊ ನಮೊ
ಪರಿಪೂರ್ಣ ಜ್ಞಾನಭಕುತಿ ವಿರಕುತನೆ ನಮೊ ನಮೊ
ಭರಿತ ಲಾಘವ ಶಕ್ತನೆ ನಮೊ ನಮೊ ನಮೊ
ಕರೆವ ವಿದ್ಯಾಬುದ್ಧಿ ಕುಶಲನೆ ನಮೊ ನಮೊ
ಸಿರಿಯೆ ಮಾಧುರ್ಯ ತೇಜ ಶುಭವಾಕು ನಮೊ ನಮೊ
ಪರತರ ಪೂರ್ಣ ಧೈರ್ಯ ಶೌರ್ಯನೆ ನಮೊ ನಮೊ
ಮೆರೆವ ಅಭಯ ಕೀರ್ತಿ ಪ್ರಾಜ್ಞತೆ ಪ್ರಾಣ ನಮೊ
ಹರಿ ರೂಪಗಳಂತೆ ರೂಪಧರನೆ ನಮೊ ನಮೊ
ನಿರುತ ಹರಿ ಗುಣರೂಪಕ್ರೀಯಾ ಧ್ಯಾನ ಮಾಳ್ಪನೆ ನಮೊ
ಸರುವ ಲೋಕಕ್ಕೆ ದ್ವಿತಿಯ ಈಶ್ವರ ನಮೊ ನಮೊ
ಎರಡು ವಿಧದ ಮುಕ್ತಿದಾತನೆ ನಮೊ ನಮೊ
ಪರಮೇಷ್ಠಿ ಆರಭ್ಯ ಸಕಲ ಜೀವರಲಿ
ನಿರುತ ಹಂಸಮಂತ್ರ ಜಪ್ತನೆ ನಮೊ ನಮೊ
ಕರಣ ಮನಾದಿ ವ್ಯಾಪಾರ ನಿರುತ ಬಿಡದೆ ಮಾಡ್ದು
ನಿರವಿಕಾರನಾಗಿ ಇರುವನೆ ನಮೊ ನಮೊ
ಸರುವದ ಸ್ತ್ರೀರೂಪ ಧರಿಸಿ ಹರಿಯ ವೊಡನೆ
ಪರಿಪರಿ ಕ್ರೀಡೆ ರಮಿಸಿದಾನಂದ ಹರಿಗೆ ಅರ್ಪಿಪ ನಮೊ
ನಿರುತ ಸ್ವರೂಪದಿ ಬಿಡದೆ ವ್ಯಾಪ್ತನೆ ನಮೊ
ಚರಿಸಿ ಲಿಂಗ ಅವ್ಯಕ್ತ ಅನಿರುದ್ಧ
ಶರೀರ ಪ್ರಾಕೃತ ಸ್ಥೂಲ ಕಾರ್ಯ ಮಾಳ್ಪನೆ ನಮೊ
ಕರಣ ನಿಯಾಮಕ ತತ್ವರೊಡೆಯನೆ ನಮೊ ನಮೊ
ನಿರವ್ಯಾಜದಿಂ ಹರಿಯ ಪೂಜಿಪ ಭಕ್ತನೆ ನಮೊ ನಮೊ
ಪರಮಾಣು ಜೀವಿಗಳಿಗೆ ದೇಹ ಕೊಡುವನೆ ನಮೊ
ಕರುಣಾಳು ನಿತ್ಯನಾಗಿ ತನಪದ ಜೀವಿಗಳಲಿ
ಚರಿಸಿ ಶ್ವಾಸೋಚ್ಛ್ವಾಸ ತುಳಸಿದಳಗಳ ನಿತ್ಯ
ವರ ಮೂಲೇಶಗೆ ಅರ್ಪಿಪ ಲಾಳೂಕನೆ ನಮೊ
ಮೆರೆವ ದ್ವಾಸಪ್ತ ನಾಡಿಗಳಲಿ ವ್ಯಾನ ರೂಪೀ -
ಪರಿಯು ಧರಿಸಿ ಹರಿಯ ಮೆಚ್ಚಿಪನೆ ನಮೊ ನಮೊ
ಕರೆವ ಅನ್ನಮಯಾದಿ ಕೋಶಗಳಲಿಪ್ಪನೆ ನಮೊ ನಮೊ
ತ್ವರಿತದಿ ಪಂಚಪರ್ವದಿ ಕಾರ್ಯ ಮಾಳ್ಪ
ಸುರರಲ್ಲಿಪ್ಪ ಪಂಚರೂಪನೆ ನಮೊ ನಮೊ
ಸ್ವರ ವ್ಯಂಜನನುದಾತ್ತ ಉದಾತ್ತನೆ ನಮೊ ನಮೊ
ವರ ಬ್ರಹ್ಮನಾಡಿಗತ ಉದಾನನೆ ನಮೊ ನಮೊ
ಸರುವ ಕಮಲಗಳಲ್ಲಿ ನಿರುತ ವ್ಯಾಪ್ತನೆ ನಮೊ
ಸ್ಮರಿಸಿ ಹರಿಪದ ಪೂಜೆ ಮಾಳ್ಪನೆ ನಮೊ ಹೃನ್ಮಂ -
ದಿರದ ಮಂಟಪ ದ್ವಾರಗತ ಪಂಚಪ್ರಾಣನೆ ನಮೊ
ಹರಿರೂಪ ನೋಳ್ಪುದಕೆ ಕನ್ನಡಿಯಾಗಿಪ್ಪನೆ ನಮೊ ನಮೊ
ಚರಣ ಸ್ಮರಿಪ ಭಕ್ತರ ದೋಷ ಕಳೆವನೆ ನಮೊ ಆ -
ತುರದಿಂದ ದಕ್ಷಿಣಾಕ್ಷಿಗತ ಗೋವತ್ಸ ರೂಪನೆ ನಮೊ ನಮೊ
ಬರುವ ಮೂರಾವಸ್ಥಿಗೆ ನಿಯಾಮಕ ನಮೊ ನಮೊ
ಪರಿಪರಿ ರೂಪದಿ ಸಪ್ತಧಾತುಗತನಾಗಿ
ವರ ಸಪ್ತ ಛಂದಸ್ಸುಗಳಿಂ ಸ್ತೋತ್ರ ಮಾಳ್ಪನೆ ನಮೊ
ನಿರುತ ಆಖಣಾಶ್ಮ ಕಾಯನೆ ನಮೊ ನಮೊ
ಕರ ಚರಣಾದಿ ಅವಯವದಿ ವ್ಯಾಪ್ತನೆ ನಮೊ
ಸರುವ ರೋಮ ಕೂಪಗಳಲ್ಲಿಪ್ಪನೆ ನಮೊ ನಮೊ
ವರಟಳೆನಿಪ ಲಕ್ಷ್ಮೀವರ ಹಂಸೋಪಾಸಕನೆ ನಮೊ
ಪುರುಟ ಗರ್ಭಾಂಡದಿ ಖೇಟ ಕುಕ್ಕುಟ ಜಲಟ
ಧರಿಸಿದ ತ್ರಿಕೋಟಿರೂಪ ಕಾಪಿಲನೆ ನಮೊ ನಮೊ
ಸರುವ ಜಡ ಜಂಗಮದಿ ವ್ಯಾಪ್ತನೆ ನಮೊ ನಮೊ
ವರ ಚತುರ್ದಶ ಲೋಕ ಪ್ರಭುವೆ ನಮೊ ನಮೊ
ಸ್ವರಣ ವರ್ಣ ಬ್ರಹ್ಮಾಂಡ ಬಾಹಿರದಲಿಪ್ಪನೆ ನಮೊ
ನಿರುತ ನವಾವರಣ ಅವ್ಯಾಕೃತ ಗಗನದಿ
ಹರಿರೂಪ ಗುಣಕ್ರೀಯ ತಿಳಿವನೆ ನಮೊ ನಮೊ ಮಹಾ -
ನ್ಮರುತ ಧೃತಿ ಸ್ಮೃತಿ ಬಲ ವಿಖ್ಯಾತ ನಮೊ
ಗುರುವರ ವಿಖ್ಯಾತ ಮಹಾ ಧ್ಯಾತನೆ ನಮೊ ನಮೊ
ಗರಳಭುಕ್ ಭವರೋಗ ಭೇಷಜ ನಮೊ ನಮೊ
ಸ್ವರವರಣನೆ ದೇಹಸ್ತ ಪ್ರತ್ಯಾಸ್ವರ ಸೂರ್ಯಗತನೆ ಜೀವೇ -
ಶ್ವರ ವಿಶ್ವಚೇಷ್ಟಕ ವಿಭೀಷಣೆ ನಮೊ ನಮೊ
ನಿರದುಷ್ಟ ವೀತಭಯ ಭೀಮನೆ ನಮೊ ನಮೊ
ದರ ಚಕ್ರಧರ ವರ ಅಭಯಹಸ್ತ ಅನಿಲನೆ ನಮೊ
ವೈರಾಗ್ಯನಿಧಿ ಸ್ಥಿತಿ ರೋಚನ ನಮೊ ನಮೊ
ಚರಿಸಿ ಮುಕ್ತಿಯಲಿ ಆನಂದಪ್ರದ ಹರಿಯಾ
ನಿರುತ ಸೇವೆ ಮಾಳ್ಪ ವಿಮುಕ್ತಗಾನಂದನೆ ನಮೊ
ಶರೀರ ಸತ್ವಾತ್ಮಕ ಶುಚಿ ಅನಿಮಿಷೇಶನೆ ನಮೊ
ಪರತರ ಜ್ಞಾನಿ ದಶಮತಿರಾಯನೆ ನಮೊ ನಮೊ
ಮರುತರೊಡೆಯ ಹರಿಯ ಅಚ್ಛಿನ್ನ ಭಕ್ತನೆ
ನಿರುತ ಪಂಚಪ್ರಾಣ ರೂಪ ಧರಿಸಿ ನಿಂದು
ಸರುವದ ಹರಿ ಪಂಚಾತ್ಮಕ ರೂಪ ಸೇವಿಪನೆ ನಮೊ
ಪರಮಾಣು ಮಹದ್ರೂಪನೆ ನಮೊ ನಮೊ ಎಂಬೆ
ಬರದು ಅಜ್ಞಾನದಿ ದೋಷ ಮಹಾ ಪ್ರಳಯದೀ
ತೆರದಲ್ಲಿ ನಿನ ಅಂಶ ಅವತಾರಾದಿಗಳಿಗೆ ಭೇದವಿಲ್ಲೆಂ -
ದೊರೆಯುತಿಹವು ಐತರೇಯ ಶ್ರುತಿಗಳು
ಕರೆವರು ಜ್ಞಾನಿಗಳು ನಿನಗೆ ಅಮೃತನೆಂದು
ಸ್ಮರಹರನಿಗೆ ನಿನ್ನ ಚರಿತೆ ವರ್ಣಿಸಲೊಶವೆ
ಪರಮ ಪಾಮರನಾನೊರಣಿಪುದಕೆ ಶಕ್ತನೆ
ನಿರುತ ನೀನೆ ಎನ್ನ ಮನೋಮಂದಿರದಲ್ಲಿ ನೆಲಸಿಪ್ಪ
ಮರುತಾಂತಸ್ಥ ಹರಿ ಬರೆದಂದದಿ ಬರೆದೆನಿದು
ತರತರದ ಜ್ಞಾನಿಗಳು ಮೆಲಿದ ಉಚ್ಛಿಷ್ಠ ಉಂಡು
ವರದೆನಲ್ಲದೇ ಎನ್ನ ಸ್ವಮತಿಯಲ್ಲಾ
ಮರುತಾವತಾರನಾದ ಹನುಮನೆ ನೀನು
ಭರದಿಂದ ರಾಮನೆಂಜಲೆಡೆ ಕೊಂಡು ಪೋದಂತೆ ಆ -
ತುರದಿಂದ ನಿನ್ನವರ ಎಂಜಲುಣಿಸಿದಕೀ -
ವರ ವೈಷ್ಣವ ಜನುಮವಿತ್ತು ಎನಗೆ ನೀನು
ವರವೀವ ವರದೇಂದ್ರರ ಆಶ್ರಯ ಪಾಲಿಸಿ
ಸುರರೊಡೆಯನೆ ನಿನ್ನ ಸೇವೆ ಇಪ್ಪತ್ತೇಳು -
ವರುಷವಿತ್ತುದದಕೆ ನಿನ್ನ ಇಪ್ಪತ್ತೇಳು
ಕಾರಿಯ ರೂಪಗಳಿಗೆ ಮೊರೆ ಹೊಕ್ಕೆ ಸಥೆಯಿಂದ
ಪರಿಪಾಲಿಸಯ್ಯ ಆಹೇಯ ವೈಷಿಕ ಸುಖ
ಹರಿಸಿ ದೂರೋಡಿಸಿ ನಿನ ಪದ ಸ್ಮರಿಪ ಭಕ್ತರ ಸಂಗ
ಇರಳು ಹಗಲು ನಿನ್ನ ಪಾದಸ್ಮರಣೆಯಿತ್ತು ಜ್ಞಾನ -
ವಿರಹಿತನ ಮಾಡದೇ ಸರ್ವಕಾರ್ಯಗಳಲಿ
ವೆರಗಿಸು ಮನವನು ನಿನ್ನಂತರ್ಯಾಮಿ
ಹರಿಯಲ್ಲಿ ಬಿಡೆ ಬಿಡೆ ನಾ ನಿನ್ನ ಚರಣಯುಗಳ
ಕೊರಳಿಗೆ ಕಟ್ಟಿ ಗಾಯನ ಮಾಡಿ ಕುಣಿಯುವೆ
ಅರವಿದೂರನೆ ನಿನ್ನ ಅಹಿತ ಬೇಡುವದಿಲ್ಲ
ಹರಿಯ ಪದ ಭಕುತಿ ವಿಷಯದಿ ವಿರಕುತಿ
ಸಿರಿ ರಮಣ ಸುಂದರವಿಟ್ಠಲ ಭಕ್ತನೆ ಈಯೋ
ಹರಿಯಾಜ್ಞೆಯಂತೆ ಮುಕ್ತಿದಾತೃನೆ ನಮೊ ನಮೊ ॥ 13 ॥
ಜತೆ
ಇನಿತು ಚಿಂತಿಸಿ ವ್ರತವೀ ಜನುಮದೋಳ್ ಮಾಡಲು
ಹನುಮನೊಡೆಯ ಸುಂದರವಿಟ್ಠಲ ಪೊಳೆವ ॥
***
for sahitya
click vratave uttama vrutavu HANUMAD VRATA SULADI
********