Showing posts with label ಉಗಾಭೋಗ ugabhoga ankita vijaya vittala. Show all posts
Showing posts with label ಉಗಾಭೋಗ ugabhoga ankita vijaya vittala. Show all posts

Monday 16 November 2020

ಉಗಾಭೋಗ ugabhoga ankita vijaya vittala

 ಶ್ರೀ ವಿಜಯದಾಸರ ಉಗಾಭೋಗ


ನಿನ್ನ ಪಾದಾಂಬುಜವ ನೋಡಿದ ಮನುಜಗೆ

ಘನ್ನ ಪಾಪಗಳುಂಟೆ ಘನ್ನವರ್ನ

ನಿನ್ನ ಪೋಲುವ ದೈವ ಆವಾವ ಕ್ಷೇತ್ರದಲ್ಲಿ

ಬಣ್ಣಿಸಿ ನೋಡಿದರು ಕಾಣೆನಯ್ಯ

ಕಣ್ಣಿಲಿ ನೋಡಿದರು ಕರ್ಣದಲಿ ಕೇಳಿದರು

ಬಿನ್ನಹ ಮಾಡಿ ತುತಿಸಿದ ಕಾಲಕ್ಕು

ಎನ್ನ ಮೊದಲು ಮಾಡಿ ಪರಮೇಷ್ಠಿ ತನಕ 

ಸಂಪನ್ನ ಜ್ಞಾನದಲಿ  ಗುಣಿಸಿದರು

ಪನ್ನಗಶಾಯಿ ಸಿರಿ ವಿಜಯವಿಠಲರೇಯ 

ನಿನ್ನ ಮಹಿಮೆಗೆ ನಮೋ ನಮೋ ಎಂದೆಂಬೆನೊ

******

ಉ ಗಾ ಭೋ ಗ


ಜಠರವನು ಕೈಲಮಕಿ ಜುಣು ಜುಣುಗಿ ಮೆಲ್ಲನೆ

ನಿಟಿಲವನು ನರನ ಚರಣದಲಿಟ್ಟು

ಗಿಟಿಕಿರಿದು ಹಲ್ಲನು ಗಿದ್ಧನಾ ಕೊಡು ಎಂದು

ಪಟುವಾಗಿ ಕಾಯದೊಳಗಳುಕಿಕೊಳುತ

ಕಟುಕರಂಗಡಿ ಮುಂದೆ ಕಾಯ್ದ ನಾಯಿಯಂತೆ

ಗುಟುಕುಗಳು ಉಗುಳದಲೆ ನುಂಗಿಕೊಳುತಾ ಅ

ಕಟಕಟಾ ಹೀಗೆ ಮಾಡುವರೇನೋ ಹೇ ವಿಜಯ

ವಿಟ್ಠಲ ನಿನಗಿನಿತು ಕರುಣವು ಇಲ್ಲವೋ ll


ಮೇ 24


ನಿನ್ನ ಪೆಸರ್ಗೊಂಡರೆ ತತ್ತದಭಿಮಾನಿಗಳು l

ಘನ್ನವಾಗಿ ಒಲಿದು ಅಲ್ಲಲ್ಲಿ ತಾವೆಯಿದ್ದು l

ಬೆನ್ನುಬಲವಾಗಿ ಲೇಶ ಮಾತುರವಂಗೆ l

ಖಿನ್ನತೋರದಂತೆ ಸಂರಕ್ಷಿಸುವರು l

ನಿನ್ನದೊರೆತನದ ಭಯದಿಂದ ಸಮಸ್ತರು l

ಅನ್ಯಥಾಗಗೊಡದೆ ಕಾದುಕೊಂಡಿಪ್ಪರು l

ಇನ್ನೆನುಪೇಳಲಿ ಇಂಥವೈಚಿತ್ರ್ಯಕ್ಕೆ l

ಎನ್ನಿಂದಾಗದು ಸ್ವಾಮಿಕರಮುಗಿದು ನಮೋ ಎಂಬೆ l

ಘನ್ನಮೂರುತಿ ನಮ್ಮ ವಿಜಯವಿಟ್ಠಲರೇಯ l

ನಿನ್ನ ನಂಬಿದವಗೆ ಕೇಡಿಲ್ಲ ಕೇಡಿಲ್ಲ ll

****


ಕೋಟಿ ಕೋಟಿಗೆ ನಿನ್ನ ನಾಮ ಒಂದೆ ಸಾಕು

ದಾಟಿಸುವುದು ಭವಸಾಗರ

ಬೂಟಕತನದಲಿ ಹರಿದಾಸನಾದರೆ

ತೋಟವಿಲ್ಲದೆ ಮೋಟಿ ಎತ್ತಿದಂತೆ

ನೀಟಾಗದು ಕಾಣೊ ಎಂದಿಗೂ ಯಮಭಟರ

ಕಾಟತಪ್ಪದು ಕಾಶಿಯೊಳಗಿದ್ದರು

ಹಾಟಕಾಂಬರಧರ ವಿಜಯವಿಠಲರೇಯ 

ನಾಟಿಸು ನಿನ್ನ ಚರಣದಲಿ ಎನ್ನ ಮನಸು||

********


ಕೋಟಿ ಕೋಟಿಗೆ ನಿನ್ನ ನಾಮ ಒಂದೇ ಸಾಕು 

ದಾಟಿಸುವುದು ಭವಸಾಗರವ

ಬೂಟಕತನದಲಿ ಹರಿದಾಸನಾದರೆ

ತೋಟವಿಲ್ಲದೆ ಮೋಟಿ ಎತ್ತಿದಂತೆ

ನೀಟಾಗದು ಕಣೊ ಎಂದಿಗು ಯಮಭಟರ 

ಕಾಟತಪ್ಪದು ಕಾಶಿಯೊಳಗಿದ್ದರು

ಹಾಟಕಾಂಬರಧಾರ ವಿಜಯವಿಟ್ಠಲರೇಯ 

ನಾಟಿಸು ನಿನ್ನ ಚರಣದಲಿ ಎನ್ನ ಮನಸು ll

******

ಕಠಿಣವಾದರು ನಿನ್ನ ನಾಮ ಅನುಗಾಲ

ಜಠರದೊಳಗೆ ಇಟ್ಟು ಎಂತಾದಾರಾಗೆ

ನಟನೆಯ ಮಾಡುತ ತಿರುಗುವ ಮಾನವಗೆ

ಅಟವಿಯಲ್ಲಾದರು ಪೂರ್ಣಸುಖವು

ಸಟೆಯಲ್ಲ ಈ ಮಾತು ಅಜಭವಾದಿಗಳೆ ಬಲ್ಲರು 

ನಿಚ್ಚಟಾ ತಿಳಿದು ಪೇಳಿದರು ಪುಸಿಯಲ್ಲ

ವಟಪತ್ರಶಾಯಿ ನಮ್ಮ ವಿಜಯವಿಠಲರೇಯ 

ವಿಠಲಾ ಎಂದು ನುಡಿದವಗೆ ಆವ ಭಯವುಂಟು ll

*****


ನಿನ್ನ ಮನದೊಳಗೆ, ಉಳಿಸುವೆನೆಂಬುವದು

ಘನ್ನವಾಗಿರಲಿಕ್ಕೆ ಎನ್ನೊಳಗೆ

ಇನಿತು ಪ್ರೇರಿಸಿ ನೀನೇ ನುಡಿಸಿದ್ದು

ಘನ್ನವಲ್ಲವೆ, ಇದಕೆ ಸಂಶಯವಿಲ್ಲ

ಇನ್ನು ಯೋಚಿಸಲ್ಯಾಕೆ?  ಭಕ್ತಪಾಲಕ ಬಿರುದು 

ಅನಂತಕಾಲಕ್ಕೂ ನಿನ್ನದಯ್ಯಾ

ಉನ್ನತಮಹಿಮ ಶಿರಿವಿಜಯವಿಠಲರೇಯ

ಎನ್ನ ಮಾನಾಪಮಾನ ಮತ್ತಾರದಲ್ಲ

**

ಅನಂತ ಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ |

ಖಿನ್ನತೆ ಯಿಲ್ಲವೆಂಬುದೆ ಕೇಳಿ ಬಲ್ಲೆ |

ಚಿಣ್ಣ ಧ್ರುವ ಪ್ರಹ್ಲಾದ ಮೊದಲಾದ ಭಕ್ತರ |

ಘನತೆ ಏನೆಂಬೆ ಲೋಕದಲ್ಲಿ | 

ಮನ್ನಿಸೋ ಮಹರಾಯ ವಿಜಯ ವಿಠಲರೇಯ |

ಬಿನ್ನಪ ಕೈ ಕೊಂಡು ಭಕ್ತನ ಪಾಲಿಸೋ |

*****

ಉ ಗಾ ಭೋ ಗ


ಅಬಲೆಯ ಮಾತಿಗೆ, ಮನಸು ಕರಗಿತು ನಿನ್ನ 

ಅಂಬುಜಪಾದಕೆ, ಬಿಡದೆ ಬಿನ್ನೈಸಿದೆ 

ಪ್ರಬಲ ನೀನಾದಕಾರಣದಿಂದ, ಚನ್ನಾಗಿ

ವಿಭುದೇಶ ನಾನಾರೋಗವಿನಾಶನೇ

ಶುಭವೇ ಕೊಡು ಜೀಯ್ಯಾ ನಿನಗಲ್ಲದೆ ಅನ್ಯ

ವಿಭುಗಳಿಗೆ ಶರಣೆನ್ನೆ ಸರ್ವಕಾಲ

ಶಬದಮಾತುರವಲ್ಲ ಅಂತರಂಗದ ಸ್ತೋತ್ರ

ಕುಬುಜೆಯ ತಿದ್ದಿದ ವಿಜಯವಿಠಲರೇಯ,

ನಿಬಿಡಕರುಣಾಂಬುಧಿ ಮಹಾದುರಿತಾರಿ

****


ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಿಗೆ
ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲಿ
ಬಂದು ಬದಿಯಲಿ ನಿತ್ಯ ಬಾರಾಸನಾಗಿ ನಿಂದು
ಹಿಂದು ಮುಂದುಪದ್ರವವಾಗದಂತೆ
ಇಂದಿರೆರಮಣ ಕಾಯುತ್ತಲಿರೆ
ಎನಗಾವ ಬಂಧಕಗಳು ಇಲ್ಲ
ಧನ್ಯ ಧನ್ಯ ಕಂದರ್ಪನಯ್ಯಾ ಸಿರಿ ವಿಜಯ ವಿಠ್ಠಲರಾಯ
ದೇವ ಆಪತ್ತು ಬರಲೀಯ ನೋಡಿ ||

ಈ ಮೇಲ್ಕಂಡ ಸ್ತುತಿ(ಉಗಾಭೋಗ)ಯು ಬಹಳ ಭಯಪಡುವವರಿಗೆ, ಮೇಲಿಂದ ಮೇಲೆ ದುಃಸ್ವಪ್ನಗಳು ಆಗುತ್ತಿರುವವರಿಗೆ ಈ ಪ್ರಾರ್ಥನೆ ವಿಶೇಷ ಫಲಕಾರಿ.

*******


ಶ್ರೀ ವಿಜಯದಾಸರು ರಚಿಸಿದ ಒಂದು ಉಗಾಭೋಗ —-

ಶ್ರವಣ ಮಾಡಿದ ಮನುಜ ಸರ್ವದಾ ಪವಿತ್ರ
ಶ್ರವಣಾಸಕ್ತನಿಗೆ ಭಯಶೋಕಗಳಿಲ್ಲ
ಶ್ರವಣಕೆ ಒಲಿದ ವಿಜಯವಿಠಲ//

ನಿನ್ನನು ನೋಡುವ ಕಾಮವು ಎನಗಿರಲಿ
ನಿನ್ನ ವಿರೋಧಿಗಳ ಕಂಡೆನೆಗೆ ಕ್ರೊಧ ಬರಲಿ

ನಿನ್ನ ಚರಣವ ಬಿಡೆನೆಂಬ ಲೋಭ ಬರಲಿ
ನಿನ್ನ ನಾಮದಲಿ ಸದಾ ವ್ಯಾಮೋಹವೆನಗಿರಲಿ

ನಿನ್ನ ನಾಮಸ್ಮರಣೆಯ ಮದವೇರಲಿ
ನಿನ್ನವರಂತೆ ನಾನಾಗಲಿಲ್ಲವೆಂಬ ಮತ್ಸರವಿರಲಿ
ನಿನ್ನವನೆನಿಸೊ ಸಂಪನ್ನ ವಿಜಯವಿಠ್ಠಲ //

ಚಿತ್ತದಲಿ ಚರಣ ಭಜಿಸಿದ ಜೀವಿಗೆ

ನಿತ್ಯಾಯು ಉತ್ಸವ ವಿಜಯವಿಠಲ ಕೊಡುವ //

***********

ಮುಕ್ಕೋಟಿ ದ್ವಾದಶಿ - ಈ ಉಗಾಭೋಗದಲ್ಲಿ ದಾಸರು ಮಧ್ವರ ಸದಾಚಾರ ಸ್ಮೃತಿ ಮತ್ತು ಭಾಗವತದ ಭಾಗವತರನ್ನು ಸ್ಮರಿಸಿಕೊಂಡು ನಮ್ಮಂತಹ ಪಾಮರರಿಗೆ ಸಾಧನೆಯ ಮಾರ್ಗ ತೋರಿದ್ದಾರೆ. 
ಆಚಾರ್ಯರ ದ್ವಾದಶ ಸ್ತೋತ್ರದಲ್ಲಿ ವರ್ಣಿಸಿದಂತೆ ಕುರುಭುಂಕ್ಷ್ವಚ ಕರ್ಮ ನಿಜಂ ನಿಯತಂ.  ಪ್ರಾಕಾರ ದಿನ ನಿತ್ಯದ ಸಕಲ ಕರ್ಮಗಳು, ಅವುಗಳ ಫಲ ಶ್ರೀಹರಿಗೆ ಅರ್ಪಣೆಯಾಗಬೇಕು.  ಆ ಕರ್ಮಗಳು ಸುಕರ್ಮ, ದುಷ್ಕರ್ಮ, ಸಕಾಮ, ನಿಷ್ಕಾಮ ಆಗಿರಲಿ. ನಾವು ಕರ್ಮ ಮಾಡದೆಯಿದ್ದರೂ ನಾವು ಅದೆಷ್ಟೋ ಬೇಡವಾದ ಕರ್ಮ ಮಾಡಿದ್ದರಿಂದ ಪಾಪದ ಬಾವಿಗೆ ಬೀಳುತ್ತೇವೆ. ಕಾರಣ ದಾಸರು ಸುಳಾದಿಯಲ್ಲಿ ನಿತ್ಯ ನೈಮಿತ್ತಿಕವ ಮಾಡು ಮಾಡದಲಿರು ಎಂಬ ವಾಕ್ಯ ಪ್ರಯೋಗ ಮಾಡಿದ್ದಾರೆ. 
ಇದಕ್ಕೂ ಮೊದಲು ನಾವು ಮಧ್ವರಾಗಿ ಆಚಾರ್ಯರ ತತ್ವ ತಿಲಿಯುವದೇ ಮುಖ್ಯ ವಿಷಯವಾಗಿದೆ. ಅದಕ್ಕಾಗಿ ಭಾಗವತದ ಭಕ್ತರನ್ನು ಸ್ಮರಿಸಿ ಅವರ ತ್ಯಾಗ, ಆದರ್ಶ ಧರ್ಮ ನೀತಿಗಳನ್ನು ತಿಳಿಯಲು ದಶಮಿ ಏಕಾದಶಿ ದ್ವಾದಶಿ ವೃತಗಳ ಮಹಿಮೆಗಳನ್ನು ತಿಳಿಯಬೇಕು.  ಅದಕ್ಕಾಗಿ ಶ್ರೀ ಹರಿಯ ಮತದಂತೆ ಸದಾಚಾರ ತಿಳಿದೂ ಆಚರಣೆಯಲ್ಲಿ ತರುವದೇ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರವಾಗುವದು. ಈ ತತ್ವಗಳನ್ನು ಓದಿ ತಿಳಿದೂ ಸುಖಪಡುವದೇ ಪರಮಾತ್ಮನಿಗೆ ಪ್ರೀತಿಯ ವಿಷಯವಾಗಿದೆ. ಅದನ್ನೇ ದಾಸರು ತತ್ವವಾ ವಿಚಾರಿಸಿ ಸುಖಿಸಿ ಎಂದೂ ಹೇಳಿದ್ದಾರೆ. ಮತ್ತು ಸದಾಚಾರ ಸ್ಮೃತಿಯಂತೆ ಎಂಬ ಶಬ್ದ ಪ್ರಯೋಗವನ್ನು  ಮಾಡಿದ್ದಾರೆ. 
ದ್ವಾದಶಿ ಆಚರಣೆ ತಿಳಿ ಯಜಮಾನನು ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ಸ್ನಾನ ಸಂಧ್ಯಾದಿಗಳನ್ನು ಮಾಡಿ ದೇವರ ಪೂಜೆ, ನೈವೈಧ್ಯ ವೈಶ್ವದೇವ ಮಾಡಿಕೊಂಡು ಯಾರಾದರೂ ಯೋಗ್ಯ ವಿಪ್ರ ಬರುವದಾರಿ ಕಾಯಬೇಕು. ಆ ವಿಪ್ರನು ಭೋಜನಕ್ಕೆಯೋಗ್ಯನಾಗಿರಬೇಕು. ಯಜಮಾನನಿಂದ ಸ್ವೀಕರಿಸಿದ ದಾನಕ್ಕೆ ತಕ್ಕ ಅನುಷ್ಠಾನ ಜಪ ತಪ ಮಾಡಿಕೊಂಡು ತನ್ನಪುಣ್ಯವನ್ನು ತಿರುಗಿ ಗಳಿಸುವ ಸಾಮರ್ಥ್ಯ ಹೊಂದಿನವನಾಗಿರಬೇಕು. ಇಂಥವನು ದಾಸರ ಪ್ರಕಾರ, ಪುರಾಣ ಶಾಸ್ತ್ರ ಪ್ರಕಾರ ಸತ್ಪಾತ್ರ ಬ್ರಾಹ್ಮಣ ಎಣಿಸಿಕೊಳ್ಳುವನು. ಇಂಥವರಿಗೇ ಯಜಮಾನನಾದವನು ಊಟಕ್ಕೆ ಹಾಕಿ ತೃಪ್ತಿ ಪಡಿಸಿ ಅವರ ಅನುಮತಿಪಡೆಡು ತಾನು ಮೊದಲು ತೀರ್ಥ ಪಾರಣೆ ಮಾಡಿ ನಂತರದಲ್ಲಿ ದಾನಧರ್ಮ ಮಾಡಿ ಮತ್ತೆ ಅನಯಿ ಪಡೆದು ಊಟ ಮಾಡಿದಾಗ ಫಲ ದೊರೆಯುವದು. 
ಇದನ್ನೆಲ್ಲಾ ಮಾಡಿ ಪುಣ್ಯ ಗಳಿಸಿದರೆ ಅದು ಮೃತ್ಯು ವನ್ನು ಜಯಿಸುವ ಪುಣ್ಯ ದೊರೆಯುವದು. ಮುಕ್ತಿಗೆ ಸಾಧನೆ ಆಗುವದೆಂದು ದಾಸರು ಮೃತ್ಯು ಜಯಿಸಿ ಸದ್ಗತಿಗೆ ಸದ್ಯನಾಗು ಎಂದೂ ಸಾರಿ ಹೇಳಿದ್ದಾರೆ. 
ಈ ರೀತಿಯಲ್ಲಿ ಸದಾಚಾರ ಸ್ಮೃತಿಯನ್ನು ಓದಿ ತಿಳಿದೂ ಸಂತೋಷಗೊಂಡು ಸತ್ಪಾತ್ರರಿಗೆ ದ್ವಾದಶಿದಿನ ಮೃಷ್ಟಾನ್ನ ಭೋಜನ ಉಣಿಸಿದ ಫಲದಿಂದ ಸತ್ಯ ಮೂರ್ತಿ ವಿಜಯ ವಿಠಲ ರಾಯನು  ನಮ್ಮನ್ನು ದಿನನಿತ್ಯ ಬಿಡದೇ ರಕ್ಷಿಸುವನು.
 ಶ್ರೀಹರಿವಾಯು

ನಿತ್ಯನೈಮಿತ್ತಿಕವ ಮಾಡು ಮಾಡದಲಿರು
ತತ್ತ್ವವ ವಿಚಾರಿಸಿ ಸುಖಿಸಿ ದ್ವಾದಶಿ ದಿನ
ಹೊತ್ಹೋಗಗೊಡದಲೆ ಸದಾಚಾರಸ್ಮೃತಿಯಂತೆ ಪಂಕ್ತಿಪಾವನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ
ಮೃತ್ಯು ಜಯಿಸಿ ಸದ್ಗತಿಗೆ ಸಾಧ್ಯನಾಗು
ಸತ್ಯಮೂರುತಿ ವಿಜಯವಿಠಲರೇಯ ನಿತ್ಯ ಬಿಡದೆ ಕಾಯ್ವನು ||

-ಶ್ರೀ ವಿಜಯದಾಸರು