Showing posts with label ಸಾಕಾರ ಹರಿಗೆ gopala vittala ankita suladi ಸಾಧನ ಸುಳಾದಿ SAAKAARA HARIGE SAADHANA SULADI. Show all posts
Showing posts with label ಸಾಕಾರ ಹರಿಗೆ gopala vittala ankita suladi ಸಾಧನ ಸುಳಾದಿ SAAKAARA HARIGE SAADHANA SULADI. Show all posts

Monday 23 November 2020

ಸಾಕಾರ ಹರಿಗೆ gopala vittala ankita suladi ಸಾಧನ ಸುಳಾದಿ SAAKAARA HARIGE SAADHANA SULADI

 

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ ಸಾಧನ ಸುಳಾದಿ 


 ರಾಗ ಪಂತುವರಾಳಿ 

 ಧ್ರುವತಾಳ 


ಸಾಕಾರ ಹರಿಗೆ ನಿರಾಕಾರನೆಂಬಿ ನೀನು

ಯಾಕೊ ಕುವಾದಿ ಗರುವಿಕೆ ತನವು ಏನೊ

ಏಕವಾಗಿ ಸುರಾಸುರರು ಕೂಡಿಕೊಂಡು ಇನ್ನು

ಆ ಕಲಶದಮೃತ ನೀ ಕೂಡಿ ತಾ ಕೂಡೆಂಬೊ

ಆ ಕಾಲದಲಿನ್ನು ಸ್ತ್ರೀಯಾಕಾರವಾಗೆ ಹರಿ

ಆಕಾರಕ್ಕೆ ಸುರರು ಮೋಹಾಕರಾಗಲಿಲ್ಲವೆ

ಸಾಕಲ್ಯ ಗುಣನಿಗೆ ನಾಲ್ಕೆರಡು ಗುಣವೆಂಬ

ಯಾಕೆ ನಿನ್ನದು ಇಂಥ ಪೋಕತನವು ಬಿಡಿ

ಲೋಕದೊಳಿದ್ದಂಥ ನಾನಾಕು ಪದಾರ್ಥದಿ

ಆಕಾರ ಹರಿಗುಣ ನೀ ಕೇಳೋ ಮೂರ್ಖ ಜೀವ

ಸಾಕಲ್ಯ ನಿರ್ದೋಷಗೆ ನೀ ಕಲ್ಪಿಸಿ ವಿದೋಷ

ನೀ ಕಲಿ ರಾವಣನ್ನ ಕೊಂದ ಈ ಕಲ್ಪಣದೋಷ

ತಾ ಕಳೆವನೆಂದು ರಾಮ ಬೇಕಾಗಿ ಲಿಂಗವನ್ನು

ಆಕಾರ ಮಾಡಿದ ನೆಂಬಿ ಈ ಕುಟಿಲತನಗ -

ಳ್ಯಾಕೊ ನಿನಗೆ ಇನ್ನು ಬೇಕಾಗಿಲ್ಲೆ ನಿನಗೆ

ಲೋಕಪಾಲಕನ ಕೂಡ ಈ ಕಠಿಣುತ್ರಗಳು

ಈ ಕಲಿಯುಗವೆಲ್ಲ ಅಪ್ರಾಕೃತದಲ್ಲಿ

ತಾ ಕಳೆದ್ದೆಲ್ಲರನ್ನಿ ಏಕಮೇವನಾಗಿಪ್ಪ

ಸಾಕಲ್ಯ ಸುಖನಿಗೆ ತಾ ಕಳಕೊಂಡು ಸೀತೆ

ಆಕಾರ ಕಾಣನೆಂದು ಶೋಕಿಸಿದನೆಂತೆಂಬೋ

ಈ ಕಪಟತನವು ಸಾಕು ಮಾಡಲಾರಿಯಾ

ಸೋಕಿದ ಮಾತ್ರ ಶಿಲಿ ಆಕಾರಾದಳು ಅಹಲ್ಯಾ

ಪ್ರಾಕೃತಾ ನೆಂಬಿ ನೀ ಅಪ್ರಾಕೃತ ಹರಿಯನ್ನ

ಜೋಕೇಲಿ ನೀನು ಬದುಕಲಾರಿಯಾ ಹೇಗೆ

ಆ ಖಳನು ಕಂದನ ತಾ ಕೊಲ್ಲುತಿರಲಾಗಿ

ಏ ಕಾಯೊ ಹರಿ ಎನ್ನೆ ತಾ ತಿಳಿದಾಕ್ಷಣದಿ

ಹೂ ಕರಿಸಿ ಕಂಭದಿಂದ ತಾ ಪ್ರಕಟಿತನಾದಾ

ನೀ ಕಾಣಲಿಲ್ಲ ಚಾರ್ವಾಕ ಅಯೋಗ್ಯ ಭ್ರಷ್ಟ

ಸಾಕಲ್ಯ ಬಲಾಢ್ಯನ್ನ ಆ ಕಂಸ ಕುಬಜಿಯನ್ನು

ಗೋಕುಲ ಪೊಕ್ಕನೆಂಬಿ ಈ ಕಪಟತನವೇನೋ

ಆಕಾರವನು ಹರಿಯ ನೀ ಕರಿಸಲಾಗಿನ್ನು

ತಾ ಕರದಿ ಶಸ್ತ್ರಿಲ್ಲದೆ ಆ ಕಿರೀಟಿಗೆವೆ ತಾನೆ

ಸಾಕಾರವಾಗಿ ಹರಿ ಆಕಳುಗಳಿಸಿದಾ

ಪಾಕಶಾಸನನು ಗರುವಿಕೇತನದಲ್ಲಿ

ಆಕಳ ಕಾಯುವನೆಂದಾನೇಕ ವೃಷ್ಟಿಗರಿಯೆ

ತಾ ಕಾಣುತಲೆ ಬೆರಳ ನಖದಿಂದಲಿ ಗಿರಿಯ

ಆಕಾಶಕ್ಕೆ ಮೀಟಿದ್ದು ಸಾಕಿದಾ ಬಾಲಕರಾ

ಸಾಕಲ್ಯ ಜ್ಞಾನಭರಿತ ಗೋಪಾಲವಿಟ್ಠಲ ಅನ -

ನ್ಯಾ ಕಾಲ ದೈವ ಕಾಣೊ ಶೋಕ ರಹಿತ ರಂಗಾ ॥ 1 ॥


 ಮಟ್ಟತಾಳ 


ಹರಿ ಸರ್ವೋತ್ತಮ ಸಿರಿ ಆತನ ರಾಣಿ

ಪರಮೇಷ್ಠಿ ಮಗನು ಹರ ಮೊಮ್ಮಗ ಹರಿಗೆ

ಉರಗ ಮಂಚವು ಇನ್ನು ಗರುಡ ಏರೋರಥವು

ಪುರುಹೂತ ಸುರರೆಲ್ಲ ಪರಿವಾರವು ಹರಿಗೆ

ಮರಳಿ ಮೂರುದಿನ ದೊರಿಯದಿದ್ದರೆ ನೀರು

ನರಕ ನಾರುವ ಮನುಜ ಹರಿ ನೀನಾಗುವ್ಯಾ

ಬರಬಂದರೆ ನೀನು ಬರಿದೆ ಮೂರಾರುದಿನ

ದೊರಿಯದಿದ್ದರೆ ಅನ್ನ ವರಲಿ ಸಾಯುವಂಥ

ಮರಳು ಮಾನವ ನೀನು ಹರಿಗೆ ನೀ ಸರಿಯಂತೊ

ಅರಿತು ನೀನು ಬದುಕೊ ನರಕವ ಬೀಳಬೇಡ

ಹರಿ ದ್ರೋಹಿಗಳ ಕಂಡು ಧರಿಸನು ಯಮ ತಾನು

ದುರಿತ ಸಂಹಾರಕ ಗೋಪಾಲವಿಟ್ಠಲನ್ನ 

ಧೊರೆ ಎಂದು ತಿಳಿದು ಧರಿಯ ಮೇಲಿರು ಇನ್ನು ॥ 2 ॥


 ತ್ರಿವಿಡಿತಾಳ 


ಮರುಳು ಮಾನವ ಕೇಳೂ ಸರಿಯಾದರೆ ನೀ ಇನ್ನು

ಹರಿ ಚರಿತೆ ನಿನ್ನಲ್ಲಿ ಇರ ತೋರಿಯಾ ನೀನೊಂದು

ಕರಿಯು ನಕ್ರಗೆ ಸಿಲುಕಿ ಮೊರೆ ಇಡಲಾಗಿನ್ನು

ಹರಿ ವೇಗನೆ ಪೋಗಿನ್ನು ಸೆರೆಯ ಬಿಡಿಸಿದನು

ಸರ್ರನೆ ನೀನು ಒಂದು ನೆರಮನೆ ಝಗಡವ

ಹರಿದು ಬರಲಾಭಯಾ ಮರುಳು ಮನುಜನೆ ನೀ

ಹರಿ ಕಾಳಿಂಗನ ಏರಿ ಭರದಿಂದ ಕುಣಿದನು

ತಿರುಗಿ ನೀನು ಒಂದು ಉರಗನ್ನು ಪಿಡಿವಿಯಾ

ಹರಿ ಪೊಕ್ಕಳಿಂದಲಿ ಹಿರಣ್ಯ ಗರ್ಭನ ಪೆತ್ತಾ

ನರನೆ ನೀನು ಒಂದು ಇರಿವಿಯ ಪೆತ್ತಿಯಾ

ಹರಿಯ ರಾಣಿಯು ಸಿರಿ ಧರಿಯಲ್ಲ ಪೊರೆವಳು

ತಿರುಗಿ ತಿರುಗಿ ನೀನು ಕುರುಡನಾಗಿ ಕುಳ್ಳಿರೆ

ಮರಳಿ ನಿನ್ನರಸಿನ್ನು ತಿರುಕೆ ಬೇಡುವಳಲ್ಲೊ

ಶರಧಿ ಮಥನದಲ್ಲಿ ಗರಳ ಹೊರಡಲಾಗಿ

ಹರಿಯ ಮಗನು ವಾಯು ಭರದಿಂದ ಮೆದ್ದನು ಕಾಣೊ

ಮರಳೆ ನಿನ್ನ ಮಗನು ಸರ್ರನೆ ವೃಶ್ಚಿಕಕ್ಕೆ

ಹೊರಳಿ ಹೊರಳಿ ದಿಂಡುರುಳಿ ಅಳುವನಲ್ಲೊ

ಹರಿಯ ಮಂಚವು ಇನ್ನು ಧರಿಯೆಲ್ಲ ಹೊತ್ತಿತು

ಮರಳೆ ನೀನೊಂದು ಸತ್ತ ಕರುವಿನ ಹೊತ್ತೀಯಾ

ಉರಿಗೆ ಅಂಜುವ ಮನುಜ ಹರಿ ನೀನಾಗಲಿ ಬಲ್ಲ್ಯಾ

ಮರಳೆ ಕಣ್ಣಿಗೆ ನಿದ್ರೆ ಬರುವದು ಅರಿ ನೀನು

ಹರಿ ನಾನೆಂಬೊಂಥ ಪರಿ ಆವದು ತೋರೋ

ಥರವಲ್ಲ ನಿನಗಿದು ಕುರಿ ಹಿಂಗಾದೆ

ಪರಮ ದಯಾಳು ಗೋಪಾಲವಿಟ್ಠಲರೇಯಾ 

ಸ್ವರಮಣ ಶ್ರುತಿಪಾದ್ಯ ಜರಾಮರಣ ರಹಿತ ॥ 3 ॥


 ಅಟ್ಟತಾಳ 


ಹರಿ ದ್ರೋಹಿಗಳು ಜರಾಸಂಧ ಹಿರಣ್ಯಾಕ್ಷ

ದುರ್ಯೋಧನರೆಲ್ಲ ತೆರರೇನಾದರು ನೋಡು

ಹರಿಯ ಕೂಡ ಕರಿಯು ಮರಳಿ ವಕ್ಕರಿಸಲು

ಇರುವುದೊಂದು ಇನ್ನು ಧರಿಯ ಮೇಲೆ ತಾನೀಗ

ಬರಿದೆ ನೀನು ವ್ಯರ್ಥ ನಿರಯವ ಹೊಗ ಬೇಡಾ

ಹರಿಯನ್ನೆ ಭಜಿಸಿದವರ ಭಾಗ್ಯವ ನೋಡು

ಹರಿಸರ್ವೋತ್ತಮನೆಂದ ತರಳ ಪ್ರಲ್ಹಾದಂಗೆ

ಸರ್ರನೆ ಹಿಗ್ಗುತ ತವುರ ಮನೆಯಾಗಿ ಪೊರೆದಾ

ಹರಿಭಕ್ತರಾದಂಥ ಕರಿರಾಜ ಧ್ರುವರಾಯ

ವರ ವಿಭೀಷಣ ಭೃಗು ಸುರಮುನಿ ನಾರದ

ಪರಿ ಪರಿಯಲ್ಲಿ ಇನ್ನು ಹರಿಯನ್ನೆ ಕೊಂಡಾಡಿ

ಸಿರಿ ಸಂಪತ್ತುಗಳುಳ್ಳ ಧೊರೆ ಆದರು ನೋಡೊ

ಹರಿಗೆ ಭೃತ್ಯನೆಂದು ಸ್ಮರಿಸಿದ ಮನುಜಂಗೆ

ಪರಗತಿ ಸಾಧನ ದೊರಕೊಂಬುವದು ಕಾಣೊ

ಹರಿಯು ನಾನು ಎಲ್ಲ ಸರಿಯೆಂದವರಿಗಿನ್ನು

ನರಕ ತಪ್ಪದು ಎಂದು ಶ್ರುತಿ ಸಾರುತಲಿದೆ

ಕರುಣಾಕರ ರಂಗ ಗೋಪಾಲವಿಟ್ಠಲನ್ನ 

ಸ್ಮರಣೆ ಮಾತ್ರಲಿಂದ ದುರಿತ ದೂರಾಹದೊ ॥ 4 ॥


 ಆದಿತಾಳ 


ಭಾಳ ಪರಿ ತಿಳಿ ಹೇಳಿದರನ್ನ ನಿನ್ನ

ಖೂಳ ಮತವ ಬಿಡಿ ಬಾಳಲಾರಿಯೊ ನೀನು

ತಾಳರು ನಿನ್ನ ಯಮನಾಳು ಕಂಡರೆ ಇನ್ನು

ಸೀಳೋರು ಜಿಹ್ವೆಯ ಕೀಳೋರು ಕಣ್ಣನು

ಹೋಳು ಮಾಡೋರು ತಲೆ ಆಳಾಗದಂತೆ ನಿನ್ನ

ಹೂಳೋರು ಕ್ರಿಮಿ ಕೊಂಡದೋಳು ನಿನ್ನೊಯಿದು

ಕೇಳದೆ ಎನ್ನ ಮಾತು ಏಳಲ ಮಾಡಿದರೆ

ಹಾಳಾಗಿ ಹೋಗು ನಿನ್ನ ಕಾಲ ಮುಂದಾಗಿ ಬೇಗ

ಸೂಳೆ ಶೃಂಗಾರ ದೇಹ ವೇಳೆ ಮೀರಿದ ಮೇಲೆ

ಕಾಲ ಅರಘಳಿಗೆ ಇಳಿಯೊಳಿರದಿನ್ನು

ಘಾಳಿಯಂತಲಿ ತಿಂದು ಆಳೊ ಧೊರಿಗೆ ಸಮ -

ನಾಳು ಎಂಬೊದು ಹೀಯಾಳುತನವು ಏನೋ

ಗೋಳು ತಪ್ಪದು ನರಕ ಬೀಳೋದು ನೀ ಸತ್ಯ

ಘಾಳಿ ದೇಹವ ನೆಚ್ಚಿ ಖೂಳ ಕೆಡಲಿ ಬೇಡ

ಕಾಳಿಮರ್ದನ ರಂಗ ಗೋಪಾಲವಿಟ್ಠಂಗೆ 

ಊಳಿಗನಾಗಿನ್ನು ಬಾಳೆಲೊ ಮನುಜ ॥ 5 ॥


 ಜತೆ 


ಹರಿ ಸರ್ವೋತ್ತಮ ಮರುತರೆ ಗುರುವೆನ್ನು

ಸ್ವರೂಪ ಸುಖವ ಕೊಡುವ ಗೋಪಾಲವಿಟ್ಠಲ ॥ 


 ಈ ಸುಳಾದಿಯನ್ನು ರಚಿಸಿದ ಸಂದರ್ಭ : 


ಸಂಚಾರಕ್ರಮದಿಂದ ಶ್ರೀಭಾಗಣ್ಣದಾಸರು ಮಧ್ಯೆ , ಮಾಯಿಗಳು ಹೆಚ್ಚಾಗಿ ವಾಸವಾಗಿದ್ದ ಒಂದೂರಿಗೆ ಬಂದರು. ಅಲ್ಲಿ ಕೆಲವು ವೈಷ್ಣವರು ಶ್ರೀದಾಸರಾಯರನ್ನು ನಮ್ಮೂರಿನಲ್ಲಿ ಕೆಲದಿನ ಇರಬೇಕೆಂದೂ , ನಮಗೆ ಶ್ರೀಮದಾಚಾರ್ಯರ ತತ್ವದಲ್ಲಿ ನಿಶ್ಚಯಜ್ಞಾನವನ್ನು ದೃಢಪಡಿಸಬೇಕೆಂದು ಪ್ರಾರ್ಥಿಸಿದರು. ಆ ಜೀವರುಗಳ ಶ್ರೇಯೋಭಿವೃದ್ಧಿಗೋಸ್ಕರ , ಇತರ ಮತಗಳಲ್ಲಿನ ದೋಷಗಳನ್ನು , ಅವುಗಳ ಉಪಾಸನೆಯ ಅನರ್ಥವನ್ನೂ ಒಳಗೊಂಡ ಉಪದೇಶವಾಕ್ಯಗಳನೇಕವನ್ನು ಸಾಯಂಕಾಲದ ಶ್ರೀಹರಿಭಜನೆಯ ಕೊನೆಯಲ್ಲಿ ದಿನವೂ ಅನುವಾದ ಮಾಡಿ , ಅವರಿಗೂ ಮಧ್ವಮತದ ಹಿರಿಮೆ ತಿಳಿಸಿ , ಆ ಸೇವೆಯನ್ನು ಶ್ರೀಹರಿಗೆ ಅರ್ಪಿಸುತ್ತಿದ್ದರು. ಅಲ್ಲಿ ವಾಸಿಸಿದ ದಿನಗಳಲ್ಲಿನ ಸ್ವಮತಸ್ಥಾಪನೆ , ಪರಮತ ನಿರಾಕರಣೆಗಳನ್ನು ಸಂಗ್ರಹಿಸಿ ಅನುವಾದಿಸಿದ ಸುಳಾದಿ ಇದು.


 ವಿವರಣೆ : 

 ಹರಿದಾಸರತ್ನಂ ಶ್ರೀಗೋಪಾಲದಾಸರು

********