ನ್ಯಾಯ ವೇನೋ ಕೃಷ್ಣಯ್ಯ ನ್ಯಾಯವೇನೋ ಪ
ಜೀಯ ನಿನ್ನ ಸ್ಮರಣೆ ಕೊಡದೆ ಎರಡು ಭ್ರಷ್ಟ ಮಾಡಿಸೊದು ಅ.ಪ.
ಇತ್ತಲಿಲ್ಲ ಅತ್ತಲಿಲ್ಲ ಅರ್ಥಮಾನ ಹೋಯಿತಲ್ಲಾ
ಕತ್ತೆಯಂತೆ ಕಾಲ ಕಳೆಸಿ ಸುತ್ತಿ ಸುತ್ತಿ ಚರಿಸೋದು 1
ಹೊಟ್ಟೆಬಟ್ಟೆಗಾಗಿ ಹೊಗಿ ಕೆಟ್ಟ ಜನರ ಸೇವೆ ಮಾಡಿ
ಸುಟ್ಟು ಸುಟ್ಟು ಹೋಯ್ತು ಕಾಯ ಭ್ರಷ್ಟನಾಗಿ ಮಾಡೋದೆನ್ನ 2
ಮಾಯಪಾಶದಲ್ಲಿ ಹಾಕಿ ಹೇಯ ವಿಷಯ ಆಶೆಕೊಟ್ಟು
ನ್ಯಾಯ ಮಾರ್ಗ ತೋರದೇನೆ ನೋಯಿಸೋದು ಎನ್ನನೀನು 3
ಮೋಸಮಾಡಿ ಪರರಗಂಟು ಆಶೆಯಿಂದ ಕೂಡಿಹಾಕಿ
ಘಾಸಿಭವದಲಿ ನೂಕಿ ಕ್ಲೇಶಪಡಿಸುವುದು ಎನ್ನ 4
ಅಂದು ಇಂದು ಎಂದು ಹೇಳಿ ಮಂದನಾಗಿ ಕಾಲಕಳೆಸಿ
ಇಂದಿರೇಶ ನಿನ್ನ ಪಾದ ದ್ವಂದ್ವ ಧ್ಯಾನ ಮರೆಸೋದು 5
ಮಧ್ವಮತದಲ್ಲಿ ಪುಟ್ಟಿ ಮಧ್ವಗ್ರಂಥ ಓದದೇನೆ
ಶುದ್ಧಮೂಢನಾಗಿ ತಿರುಗಿ ಗದ್ದನೆನಿಸುವುದು ಎನ್ನ6
ಇನ್ನು ಮುನ್ನು ನೀನೆ ಗತಿ ಎನ್ನ ಕೈ ಪಿಡಿಯೊ ಬೇಗ
ಘನ್ನ ನವನೀತಧರ ಚೆನ್ನ ಶ್ರೀ ತಾಂಡವ ಕೃಷ್ಣವಿಠಲ 7
****