ರಾಗ ಸಾರಂಗ ಖಂಡಛಾಪುತಾಳ
Audio by Mrs. Nandini Sripad
ಶ್ರೀ ಗೋಪಾಲದಾಸರ ಕೃತಿ
ಭಜಿಸಿ ಬದುಕು ನಿತ್ಯ ವಿಜಯದಾಸರ ಪಾದ ।
ರಜವು ಸೇವಿಸು ಬ್ಯಾಗ ನಿಜವೊ ನಿಜವೊ ॥ ಪ ॥
ಕಾಮಧೇನಿನ ಕಂಡು ಕರದು ಕೊಂಡಂತೆನ್ನ ।
ಗ್ರಾಮಗೋವಿನ ಪಾಲು ಕರೆದು ಕೊಂಬುವಿಯಾ ॥
ತಾಮರಸ ಬಂಧು ಕಂಡರೆ ತಮಸು ಹಾರಿದಂತೆ ।
ಧೂಮ ಪೊರಡುವ ಉರಿಗೆ ತಮವು ಓಡುವುದೇ ॥ 1 ॥
ಕಲ್ಪವೃಕ್ಷವು ಕಂಡು ಬೇಡಿದ್ದು ಕೊಡುವಂತೆ ।
ಮಳ್ಪೇ ಮುತ್ತದ ಗಿಡವು ಕೊಡಬಲ್ಲದೆ ॥
ಕಲ್ಪಾಯು ಕೊಡುವ ಚಿಂತಾಮಣಿಯು ಕೊಡುವಂತೆ ।
ಅಲ್ಪ ಚಿಂತಾಕ ಬೀಜವನು ತಾ ಕೊಡುವದೆ ॥ 2 ॥
ಹಲವು ಸಾಧನ ಮಾಡಿ ಬಳಲಿನ್ಯಾಕೆ ನೀ ।
ನಿಲಿಸು ನಿಗಮಗಳ ಧ್ಯಾನ ನಿಜ ಮನಕೆ ॥
ತಿಳಕೊ ಇವರೆ ನಿನಗೆ ಗತಿ ಪೊಂದಿಪದಕೆ ।
ಒಲಿವ ಗೋಪಾಲವಿಠಲ ಸಂಶಯವಿಲ್ಲದಕೆ ॥ 3 ॥
***********