ಬೇಗ ಪಾಲಿಸೊ ಬ್ರಹ್ಮಣ್ಯತೀರ್ಥ | ಕರುಣಿಸು ಇಷ್ಟಾರ್ಥ ಪ.
ಯೋಗಿವರ ಶ್ರೀ ಅಬ್ಬೂರು ನಿಲಯ | ಸದ್ಭಕ್ತರಿಗತಿ ಪ್ರಿಯ ಅ.ಪ.
ಸತ್ವಗುಣನೆ ಸರ್ವೋತ್ತಮ ಹರಿ ಪ್ರಿಯ | ಪಾವನ ಶುಭಕಾಯ
ಚಿತ್ತದಲಿ ಹರಿ ಚಿಂತನೆ ಮಾಡುತಲಿ | ವರಗಳ ನೀಡುತಲಿ
ಆತ್ಯಧಿಕದ ಕಣ್ವ ನದಿಯ ತೀರ ವಾಸ | ನಿನ್ನಲಿ ಹರಿ ವಾಸ
ಮತ್ತೆ ವ್ಯಾಸರಾಯರಿಗತಿಶಯ ಗುರುವೆ |
ಸುಜನರುಗಳ ಪೊರೆವೆ 1
ಆಗಲೆ ಜನಿಸಿದ ಶಿಶುವ ತಾಯಿ ಕೊಡಲು |
ಪ್ರೇಮದಿ ನೀ ಕೊಳಲು
ಸಾಗಿ ಬಂದು ಗುಹೆಯೊಳಗೆ ಇಟ್ಟು ಪೊರೆದೆ |
ಗೋಕ್ಷೀರವನೆರೆದೆ
ಆಗಮಗಳ ಕಲಿಸಲು ಮೌಂಜಿಯ ಕಟ್ಟಿ | ಶ್ರೀಪಾದರಲಿ ಬಿಟ್ಟೆ
ಯೋಗಿ ವ್ಯಾಸರಾಯರು ಎಂದ್ಹೆಸರಿಟ್ಟು | ಸನ್ಯಾಸವನೆ ಕೊಟ್ಟು 2
ಪಾಪಿ ಜನರ ಪಾವನಗೈಯುತಲಿ | ಶ್ರೀನಿಧಿ ಧ್ಯಾನದಲಿ
ಕಾಪಾಡು ಸಧ್ಭøತ್ಯರ ದಯದಿಂದ | ತಪಸಿನ ಶಕ್ತಿಂದ
ಶ್ರೀಪತಿಯೊಲುಮೆಯ ಶೀಘ್ರದಿ ಪಡೆಯುತಲಿ |
ಶಿಷ್ಟರ ಪೊರೆಯುತಲಿ
ಗೋಪಾಲಕೃಷ್ಣವಿಠ್ಠಲನನು ಹೃದಯದಲಿ | ನಿತ್ಯದಿ ಕಾಣುತಲಿ 3
****