..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀಕರ ಅಷ್ಟಾಕ್ಷರ ಮಂತ್ರ
ಗುಣವಾರಿನಿಧಿ ಅನಘ ಉತ್ತಮಮಹಾ ಪ್ರಭುವೆ
ನಿನಗೆ ನಮೋ ಶ್ರೀಕರ ನಾರಾಯಣನೆ ಶರಣು ಪ
ಉತ್ತಮೋತ್ತಮಗುತ್ತ ಮೋತ್ತ ಮೋದೀತ
ಚೇತನಾಚೇತನರಿಗುತ್ತಮಾಶ್ರಯನು
ಉತ್ತಮ ಉಮೇಶಾದಿ ಭಾರತಿಗುತ್ತಮ ವಾಯು
ಆತಗುತ್ತಮೆ ಸಿರಿಗೆ ಉತ್ತಮೋತ್ತಿಷ್ಠ 1
ಶ್ರೀ ಎಂದರೆ ಜ್ಞಾನಸುಖಪೂರ್ಣೆ ಲಕ್ಷ್ಮಿಸ್ಥ
ಕ ಎಂದರಾನಂದಶತ ಸುಖಾಂತಸ್ಥ
ರ ಎಂದರೆ ಸ್ವರತ ಸುಖಪ್ರದ ಸುಖಾಶ್ರಯನು
ಇಂದಿರೇಶನೆ ಎನಗೆ ಸೌಭಾಗ್ಯವೀಯೊ 2
ಸ್ವಾಹಾ ಆತ್ಮನು ಸ್ವವಶ ಸರ್ವವಶಿ ಶ್ರೀಪನು
ಹರಿ ಹಂಸ ನಿರ್ದೋಷ ಬ್ರಹ್ಮ ನಾರಾಯಣ
ಅಹರ್ನಿಶಿ ಈ ರೀತಿ ನಿನ್ನ ಸ್ಮರಿಸುವ ಜನಕೆ
ಇಹಪರದಿ ನಿಖಿಳ ಐಶ್ವರ್ಯವೀವೆ 3
ರವಿ ಸೋಮ ಕಂಬು ಅರಿ ಶಂಖನಿಧಿ ಪದ್ಮನಿಧಿ
ದಿವ್ಯ ಹಸ್ತಗಳಲಿ ಶೋಭಿತವಾಗುಂಟು
ದ್ರವ್ಯ ಹಾಟಕ ರತ್ನ ಧನ ಕೊಡುವ ಕರಗಳು
ದೇವಿ ಶ್ರೀ ಹ್ರೀ ಸಹ ಗರುಡಾಂಶಸಂಸ್ಥ 4
ಮೀನಾದಿರೂಪ ತ್ವದ್ ಮಸ್ತಕಾದ್ಯಂಗದಿ
ಇನಗಮಿತದೀಪ್ತ ಆಭರಣ ಜ್ವಲಿಸುತಿವೆ
ವನರುಹಾಸನ ತಾತ ಶ್ರೀಕರ ಪ್ರಸನ್ನ
ಶ್ರೀನಿವಾಸನೆ ಸ್ವರ್ಣವರ್ಣ ನಮೋ ಶರಣು 5
***