Rachane: Haridasini Smt.Kolara Padmabai
Ankitha:NageshaShayana
ಚೈತ್ರಗೌರೀ ಹಾಡು || ಅಂಕಿತ ಶ್ರೀ ನಾಗೇಶ ಶಯನ ||
( ಭಾಗ್ಯಾದ ಲಕ್ಷ್ಮೀ ಬಾರಮ್ಮ ಹಾಡಿನ ಥರ ಧಾಟಿ )
ಬಾರಮ್ಮ ಬಾರೆ ಹರನರ್ಧಾಂಗೀ | ಕಾರುಣ್ಯ ಪಾಂಗೀ |
ಬಾರಮ್ಮ ಬಾರೆ ಹರನರ್ಧಾಂಗೀ ॥ ಪ ॥
॥1॥ ಚೈತ್ರ ಶುದ್ಧದ ತದಿಗೆಯ ದಿನದಲಿ |
ಮಿತ್ರೆ ನಿನ್ನನು ಆಹ್ವಾನಿಸುತಲಿ ||
ಅರ್ಥಿಯಿಂದ ಸ್ಥಾಪಿಸುತಲಿ ತಿಂಗಳ |
ಹೊತ್ತಿಲಿ ನಿನ್ನನು ಪೂಜಿಪೆ ಷರುಷದಿ ॥1॥
॥2॥ ಮರಳಿನೈದು ಕೊಂತಿಗಳನು ಮಾಡಿ |
ಹರಿದ್ರಾ ಕುಂಕುಮ ಗಂಧವ ತೀಡಿ ||
ಕರಿಮಣಿಗಳ ಮಾಂಗಲ್ಯವ ನೀಡಿ |
ಅರಳು ಮಲ್ಲಿಗೆಯ ಮಾಲೆಯ ಮುಡಿಸುವೆ ॥2॥
॥3॥ ಓಕುಳಿ ಕಲಶವ ತುಂಬುತಲಿಡುವೆ |
ಜೋಕೆಯಿಂದ ದೀವಿಗೆ ಹಚ್ಚಿಡುವೆ ||
ಪಾಕ ಭಕ್ಷ್ಯ ನೈವೇದ್ಯವ ಮಾಡುವೆ |
ಸ್ವೀಕರಿಸಮ್ಮ ಆರುತಿ ಬೆಳಗುವೆ ॥3॥
॥4॥ ಪಾನಕ ಕೋಸಂಬರಿಯು ಮಜ್ಜಿಗೆ |
ಜಾಣೆ ತ್ರಿಪುರ ಸುಂದರಿಗೆಲೆ ಅಡಿಕೆ ||
ಜೇನುತುಪ್ಪ ಮಾವಿನ ಫಲವಿಡುವೆ |
ಜಾನಕಿಕಾಂತನ ಮನದಲಿ ನೆನೆವೆ॥4॥
॥5॥ ಸ್ವಚ್ಚವಾದ ಧಾನ್ಯಗಳನ್ನು ತುಂಬಿ |
ಬಿಚ್ಚೋಲಿಯು ಕರಿಮಣಿಗಳ ಹಾಕಿ ||
ಹಚ್ಚ ಹಸುರಿನ ವಸ್ತ್ರಗಳಿರಿಸಿ |
ಮುಚ್ಚು ಮರದಬಾಗಿನಗಳ ಕೊಡುವೆನು ॥5॥
॥6॥ ಶುಕ್ರ ಮಂಗಳಾವಾರಗಳಲ್ಲಿ |
ಅಕ್ಕರೆಯಿಂದ ಸುವಾಸಿನಿಯರಿಗೆ ||
ಸಕ್ಕರೆ ಕ್ಷೀರ ಪಕ್ವಾನ್ನವ ನುಣಿಸಿ |
ಅಕ್ಕ ಪಾರ್ವತೀ ನಿನಗರ್ಪಿಸುವೆನು ॥6॥
॥7॥ ತಿಂಗಳು ಮೀರಲು ಅಂಗನೆ ನಿನ್ನಯ |
ಹೊಂಗಳಶವ ಕೊಂತಿಗಳ ಸಮೇತ ||
ಮಂಗಳ ಜಲದಿ ವಿಸರ್ಜಿಸಿ ಶ್ರೀಹರಿ |
ರಂಗ ನಾಗೇಶ ಶಯನ ಗರ್ಪಿಸುವೆ ॥7॥
***