by raghunatha yatigalu sheshachandrkaacharyaru
ರಾಗ : ಕೇದಾರಗೌಳ ತಾಳ : ಝ೦ಪೆ
ವೆಂಕಟೇಶನ ಯಾತ್ರಿಗೆ ದಾಸರು ಪೋದಾಗ ।
ವೆಂಕಟೇಶನೆಂಬ ಶಿಷ್ಯನ ಕೂಡಿಕೊಂಡು ।। ಪಲ್ಲವಿ ।।
ಬ್ರಹ್ಮತೀರ್ಥದೊಳಗೆ ಬ್ರಹ್ಮ ರುದ್ರಾದಿಗಳು ।
ತಮ್ಮ ತಮ್ಮ ವಾಹನವ ನೇರಿಕೊಂಡು ।
ತಮ್ಮ ಸತಿಯರ ಕೂಡ ಸೌಮ್ಯದಿಂದದಲಿ ಬಂದು ।
ಸುಮ್ಮನಸರೂ ಶಿರಿರಮಣನ್ನ ತುತಿಸಿದರು ।। ಚರಣ ।।
ತಾಳಪಾಕರೆಲ್ಲ ಕೂಡಿ ಮ್ಯಾಳ ಸಹಿತಾಗಿ ।
ಕೀಲಿಗಳ ಹಾಕಿದರು ದ್ವಾರಗಳಿಗೆ ।
ಭಾಳ ಬಗೆ ಬಗೆ ದ್ವಾರ ದಾಸರು ತೆಗೆಯೆನಲು ।
ಖೂಳತನದಲಿ ದೇವರಾಜ್ಞೆಯಿಲ್ಲೆಂದರು ।। ಚರಣ ।।
ಆಗ ದಾಸರು ವೇಗದಲಿ ನಿಂದು । ದೇವ ।
ರಿಗೆ ಬಗೆ ಬಗೆಯ ಸ್ತುತಿ ಮಾಡಲು ।
ಭೋಗಿಶಯನನು ಬಂದು ಬಾಗಿಲಗಳನು ತೆರೆದ ।
ಹೀಗೇಳು ದ್ವಾರಗಳು ಏಳು ನುಡಿಗೆ ।। ಚರಣ ।।
ಈ ಮಹಿಮೆ ನೋಡೆವರು ಪ್ರೇಮದಿಂ ದಾಸರಿಗೆ ।
ಈ ಮಹಿಮೆ ತಿಳಿಪದೆಂದು ನಮನ ಮಾಡೆ ।
ಅಮ್ಮಮ್ಮ ಇವರಿಗೆ ಸರಿಗಾಣೆ ಜಗದೊಳಗೆ ।
ರಮ್ಮೆಯರಸ ಪ್ರತ್ಯಕ್ಷ ಸುಮ್ಮನೇ ಮುಂದಾಡುವನು ।। ಚರಣ ।।
ಸ್ವಾಮಿ ಪುಷ್ಕರಣಿ ಸ್ನಾನವ ಮಾಡಿ ಸಕಲ । ಸ ।
ತ್ಕರ್ಮಾನುಷ್ಠಾನಂಗಳೆಲ್ಲ ಸಾರಿ ।
ಸ್ವಾಮಿ ಸಂದರುಶನ ಪ್ರೇಮದಿಂದಲಿ ಕೊಂಡು ।
ಆ ಮಹಾ ಪ್ರಸಾದಗಳು ಭುಂಜಿಸಿದರಾಗಾ ।। ಚರಣ ।।
ಆ ಮಹಿಮೆಯನು ಕಂಡು ತಮ್ಮ ಶಿಷ್ಯನ ಕರೆದು ।
ನಮ್ಮ ದೇವರ ಮಹಿಮೆ ನೋಡೆನ್ನಲೂ ।
ವಮ್ಮೆ ಕಂಡು ವಮ್ಮೆ ಕಾಣದಲೆ ಆ ಶಿಷ್ಯ ।
ಸ್ವಾಮಿ ಯೆನುತಲಿ ಆಗ ಮೂರ್ಛಗತನಾದ ।। ಚರಣ ।।
ಈ ಮಹಿಮೆಯನು ನೋಡಿ ಪ್ರೇಮದಿಂ ದಾಸರಿಗೆ ।
ರಾಮ ವೇದವ್ಯಾಸರಾ ನೈವೇದ್ಯಕೆ ।
ಸ್ವಾಮಿ ಬರಬೇಕೆಂದು ಕರೆಯಲಾಕ್ಷಣದಲ್ಲಿ ।
ಸೌಮ್ಯದಲಿ ಬಂದು ಭೋಜನವ ಮಾಡಿದರು ।। ಚರಣ ।।
ಮಠದೊಳಗೆ ದಾಸರು ಭೋಜನವ ಮಾಡಿ । ವೆಂ ।
ಕಟರಮಣನ ಯಜ್ಞ ಮಂಟಪದೊಳು ।
ವಿಠಲನ್ನ ಸ್ಮರಣೆ ಮಾಡುತ ರಾತ್ರಿ ಮಲಗಿರಲು ।
ಕಠಿಣ ತೃಷೆಯಾಗೆದ್ದು ಹುಡುಕೆ ಜಲಪಾತ್ರಿಲ್ಲ ।। ಚರಣ ।।
ಹಾಗೆ ಕೂಗಲು ತಮ್ಮ ವರದನೆ ಬಾಯಂದು ।
ವೇಗದಿಂ ಬಾಗಿಲವ ತೆರದು ಬಂದು ।
ಆಗ ಚಿನ್ನದ ಚಂಬು ಥಾಲಿ ನೀರನೆ ತುಂಬಿ ।
ಬ್ಯಾಗ ಸುತನ ರೂಪದಿಂದಂದು ಕೊಡಲಾಗ ।। ಚರಣ ।।
ಜಲವ ಕೊಂಡಾವಾಗ ಬಲು ಪಾನವನು ಮಾಡಿ ।
ಕಳದು ಆ ತೃಷಿಯ ಬಾಧಿಯನು ಎಲ್ಲ ।
ಜಲಪಾತ್ರಿ ಕೊಂಡು ಶಿಟ್ಟಲೆ ಹೊಡೆಯೆ ತಲೆ ಮ್ಯಾಲೆ ।
ವಲ್ಲೆ ವಲ್ಲೆ ಅಪರಾಧ ಸ್ವಾಮಿ ದಯಮಾಡೆಂದ ।। ಚರಣ ।।
ಶಿರದಲ್ಲಿ ರಕ್ತವಾ ಹೊರಡೆ ಗುಡಿಯನು ಹೊಕ್ಕು ।
ಪರಮ ಆನಂದದಿಂ ನಿಂದ ಮೇಲೆ ।
ಮರದಿನೋದಯದಲ್ಲಿ ಅರ್ಚನೆಯ ಕಾಲದಲಿ ।
ಶಿರವ ನೋಡಲು ರಕ್ತ ಕಂಡರಾಗವರು ।। ಚರಣ ।।
ಆಶ್ಚರಿಯ ನೋಡಿ ಪ್ರಾಣಾಚಾರ ಬೀಳಲು ।
ಅಚ್ಯುತನ ಸ್ವಪ್ನದಲಿ ಬಂದು ತಾನು ।
ಹೆಚ್ಚಿನವನೊಬ್ಬ ದಾಸ ನಿಶ್ಚಯದಿ ನಿನ್ನೆ ರಾತ್ರಿ ।
ಅಚ್ಚ ಚಂಬು ಕೊಂಡು ಬಡೆದನಾಗ ।। ಚರಣ ।।
ಆವಾಗ ಸಕಲ ಜನರೆಲ್ಲ ಆ ದಾಸರಿಗೆ ।
ಭಾವದಲಿ ನಮಿಸಿ ಸ್ತೋತ್ರ ಮಾಡಿ ।
ದೇವಮುನಿ ವಂದ್ಯನ ಮಹಿಮೆಗಳನು ತಿಳಿದು ।
ಕಾವಕೊಲ್ಲುವ ಸ್ವಾಮಿ ಹರಿ ಬಲ್ಲವರ ಮಹಿಮೆ ।। ಚರಣ ।\
ನಾರದನೆ ತಾ ಬಂದು ಧಾರುಣಿಯ ಮ್ಯಾಲೆ । ಅವ ।
ತಾರವನು ಮಾಡಡೆ ಯಿತರರಿಗೆ ಎಲ್ಲ ।
ಪಾರಮಾರ್ಥಿಯಲಿ ಉದ್ಧಾರ ಮಾಡುವನೆಂದು ।
ನಾರದರೆ ಪುರಂದರದಾಸರೆನಿಸಿದರು ।। ಚರಣ ।\
ಈ ಪರಿಯ ಮಹಿಮೆಯನು ಕಂಡು ಆ ಗಿರಿ ಮ್ಯಾಲೆ ।
ತಾಪತ್ರಯವ ಕಳೆದು ಈ ಪದವನು ।
ಪಾಪನಾಶನ ಮೂಲರಾಮ ಕೃಷ್ಣ ವೇದವ್ಯಾಸರಾ ।
ವಪ್ಪುವ ಭೃತ್ಯನಾದ ರಘುನಾಥಯತಿ ಹೇಳಿದನೂ ।। ಚರಣ ।।
***