ಶ್ರೀ ವಿಜಯದಾಸಾರ್ಯ ವಿರಚಿತ ಭಾರ್ಗವ ಕ್ಷೇತ್ರ ಸುಳಾದಿ
ರಾಗ : ಬಿಲಹರಿ
ಧ್ರುವತಾಳ
ಆದಿಮೂರುತಿ ಪರಶುರಾಮನು ಸರ್ವ
ಮೇದಿಸುರರಿಗೆ ಧಾರಿ ಎರೆದೂ
ಮುದದಿಂದಲಿ ಸಿಂಹಾಚಲದಲ್ಲಿ ವಾಸವಾಗಿ
ಕೈದು ಶಳದು ವಾರಿನಿಧಿಯಿಂದಲೀ
ಮೇದಿನಿ ಬಿಡಿಸಿದ ಪ್ರತಾಪವನ್ನೆ ತೋರಿ
ವೇದಪಾಲಕ ಮೆರದ ಸ್ತುತಿಗಳಿಂದ
ಈ ಧರಿಗೆ ರಾಮಾ ಭೋಜನೆಂಬೊ ಭೂಪನಾ
ಆದರದಿಂದಲಿ ಇರಪೇಳಲೂ
ಮೇಧಾವ ರಚಿಸಿ ಭಾರ್ಗವನ ಸತ್ಕರುಣ ಸಂ
ಪಾದಿಸುವೆನೆಂದು ಧಾರುಣಿಯಾ
ಶೋಧಿಸೆ ಅದರೊಳು ಒಂದಹಿ ನೇಗಲಿಗೆ
ಭೇದಾವಾಗಿ ಬರಲು ನಡುಗಿ ನೃಪತೀ
ಹೇ ದಯಾಂಬುಧಿ ಎನ್ನಾಪರಾಧ ಕ್ಷಮಿಸೆಂದು
ಪಾದಕೆ ನಮಿಸಿ ಬಿನ್ನೈಸಿ
ಸಾಧು ಜೀವನು ರಾಮಗೆ ಮೊರೆಯಿಡಲೂ ವಿ-
ನೋದದಿಂದಲಿ ಬಂದು ತಿಳುಪಿದನು
ಸಾಧನಾ ನಿನಗಿದೆ ಪಾಪಾ ಮತ್ತಿಲ್ಲವೆಂದು
ಮೈದಡವಿ ಉಪದೇಶಿದಾ
ಕ್ರೋಧದನುಜ ಭಂಗ ವಿಜಯವಿಠಲ ಪ್ರಾ-
ಬೋಧಶರೀರ ಕ್ಷಾತ್ರವರ್ಗಸಂಹಾರ ॥೧॥
ಮಟ್ಟತಾಳ
ಅರಸು ರಾಮಭೋಜಾ ದ್ವಾರದ ಸಭೆಯಲ್ಲಿ
ಪರಶುಧರಗೆ ಒಂದು ಹರಿಮಣಿತೆತ್ತಿಸಿದ
ಪರಮ ರಜತವಿಷ್ಟರವನ್ನು ನೇಮಿಸಿ
ಹರುಷದಿಂದಲಿ ಸ್ತೋತರ ಮಾಡುತ್ತಲಿಯಾಗ
ವಿರಚಿಸಿ ನಿತ್ಯ ಭೂಸುರರು ಸುಖಬಡಿಸಿ
ಮರಳೆ ಸಿಂಹನಾಮಗಿರಿಯಲ್ಲಿ ಜನಿಸಿ
ಮೆರೆವ ಸೂ-ವರ್ನಾ ಸರಿತೆಯಲ್ಲಿ ಮಿಂದು
ಪರಿಪರಿ ಬಗೆಯಿಂದ ಇರುತಿರೆ ಇತ್ತಲು
ಧರೆಯೊಳಗಿದು ಪೆಸರು ರಜತ ಪೀಠಪುರವೆಂದೆನಿಸಿತು
ಸರಿಯಿಲ್ಲ ಇದಕೆ ಕರಿಸಿತು ಭಾರ್ಗವನ
ಕರುಣದಿಂದಲಿ ಇಲ್ಲಿ ಸರಸಿಜ ಸಂಭವ
ಪುರಹರ ಸುರನಿತರಾ ನೆರೆದು ಪೂಜಿಸುವರೂ
ನಿರುತದಲಿ ಬಿಡದೆ ಕರುಣಾಕರ ಸಿರಿ ವಿಜಯವಿಠಲನ್ನ
ಚರಣವ ನೆನದಾ ದಾಸರಿಗೆ ಬಲು ಸುಲುಭ ॥೨॥
ತ್ರಿವಿಡಿತಾಳ
ಒಂದು ಕ್ರೋಶ ಉದ್ದ ಅದರಷ್ಟು ಅಗಲಾ ಆ-
ನಂದವಾಗಿಪ್ಪ ಒಪ್ಪುವ ಗದ್ದುಗೇ
ಕುಂದಾದೆ ತನ್ನಿಂದಾ ತಾನೆ ಇಳಿದು ವ -
ಸುಂಧರದೊಳಗಡಿಗಿತು ಸೋಜಿಗ
ಪೊಂದಿತು ಲೋಕವು ಇತ್ತರಾಮ ಭೋಜಾ
ಒಂದು ಕನಕ ಶೇಷಾಸನ ಮಾಡಿಸೀ
ತಂದು ಇಡಿಸಿ ಧ್ಯಾನಮಾಡಿದ ಭಾರ್ಗವ
ಬಂದಿದರ ಮಧ್ಯ ನಿಲಬೇಕೆಂದೂ
ಅಂದಾಮಾತಿಗೆ ಮೆಚ್ಚಿ ಪರಶುರಾಮನು ಲಿಂಗಾ
ದುದಾದಿ ನೆಲಸಿದ ಅಹಿ ನಡುವೆ
ಅಂದಾರಭ್ಯವಾಗಿ ಇದೇ ಅನಂತಸನಾ
ಎಂದೆನಿಸಿತು ಈತ ಹರಿ ಕಾಣಿರೊ
ನಂದಿವಾಹನನಂತೆ ತೋರಿದ ಬಲುಹೀನ
ಮಂದಾಜನಕೆ ತಮವಾಗಲೆಂದೂ
ಸಂದೇಹಬಡಸಲ್ಲಾ ಸುಜನರು ಈತನೆ
ಇಂದಿರಾಪತಿಯೆಂದು ವಂದಿಸಿರೋ
ಮಂದಹಾಸವದನ ವಿಜಯವಿಠಲನಿಪ್ಪ
ಇಂದು ಕ್ಷೇತ್ರವಿದು ವಿವರಿಸಿ ತಿಳಿವದೂ ॥೩॥
ಅಟ್ಟತಾಳ
ಜಲಜ ಸಂಭವನ ಪುತ್ರ ದಕ್ಷನು ಶಪಿಸಲು
ಕಳೆಗುಂದಿ ಚಂದ್ರಮತಿ ತಿಳಿದು ಭಾರ್ಗವ ಕ್ಷೇತ್ರ
ದೊಳಗೆ ಇದೇ ವೆಗ್ಗಳಿಯಾ ಸ್ಥಳವೆಂದೂ
ಕುಳಿತಾ ಜಾರಣ್ಯ ಮಧ್ಯದಲಿ ತಪಮಾಡಿ
ಒಲಿಸಿ ತನ್ನನು ಧರಿಸಿದ ದೇವನ ಪಾದ
ಜಲಜಾವ ಕಂಡು ಶಾಪವನ್ನು ಪೋಗಾಡಿ
ಕಳೆವೇರಿದನು ದಿನಪ್ರತಿಯಲ್ಲಿ ಪೊಳವುತ್ತ
ಪುಲಿದೊಗಲಾಂಬರನು ಅನಂತಾಸನ್ನ
ಬಳಿಯಲ್ಲಿ ನಿಂದನು ಸಮುಖವಾಗಿ ನಿ-
ಶ್ಚಲ ವರವೀವುತ ಬಂದ ಭಕ್ತರನ್ನ
ಸಲಹುತ್ತ ಚಂದ್ರಮೌಳೇಶ್ವರನೆಂದೆಂಬಾ
ಸತಲೆ ಪೆಸರಿನಲ್ಲಿ ಮೆರೆವುತಲಿಪ್ಪದು
ಕಲಿಯುಗದಲಿ ಬಂದಾ ಕೃಷ್ಣ ವಿಜಯವಿ
ಠಲ ನಾನಾ ಮಂಗಳಾ ನೆನೆಯುತ್ತ ನಲಿವುತ್ತ ॥೪॥
ಆದಿತಾಳ
ಪರಶುರಾಮನು ತನ್ನ ಸಿರಿಯಕೂಡಾ ವಿಮಾನ
ಗಿರಿಯಲ್ಲಿನಿಂದಾನು ಸುರರಿಂದರ್ಚನೆಕೊಳ್ಳುತ್ತ
ಅರಸು ತಾನಾಗಿ ನಿರಂತರದಲ್ಲಿ ಒಪ್ಪುತಿಪ್ಪ
ಪರಮಪುರಷನೀತ ನರನೆಂದು ಪೇಳಸಲ್ಲ
ಪರಮಶುದ್ಧನಾಗಿ ನರನು ಬಂದು ಈ ಕ್ಷೇ-
ತುರದಲ್ಲಿ ಇದ್ದ ಮಹಿಮೆ ಅರಿದು ಆತುರದಿಂದ
ಪುರುಷಗದಚಾಪ ಶರಬೊಮ್ಮ ಚಂದ್ರ ಶಂ-
ಕರ ವಶಿಷ್ಠ ಸೂದರುಶನ ಪದುಮಾ
ಪರಿ ಪರಿ ತೀರ್ಥಂಗಳು ಚರಿಸಿ ಜ್ಞಾನದಲಿ ಮಿಂದರೆ ಬಹುಜನ್ಮದ
ಹರಿದು ಪಾಪಗಳು ಪರಿಹರಿಪೋಗುವವು
ಭರತ ಖಂಡದೊಳು ಸರಿಯಿಲ್ಲಾ ಇದಕೆಲ್ಲಿ
ಸ್ಮರಣೆ ಮಾತ್ರದಲಿ ಸಂಚರಿಸುವ ಮುಕ್ತಿಯಲ್ಲಿ
ಪರಶುಧರ ಕೃಷ್ಣ ವಿಜಯವಿಠಲರೇಯಾ
ಪರಿಣಾಮ ಕೊಡುವನು ಪರತತ್ವ ತಿಳಿವುದೂ ॥೫॥
ಜತೆ
ಭಾರ್ಗವ ಕ್ಷೇತ್ರದೊಳಿದೆ ಕೇವಲಧಿಕ
ದುರ್ಗರಮಣ ವಿಜಯವಿಠಲ ನಮ್ಮನ್ನು ಪೊರೆವ ॥೬॥
*******