Audio by Mrs. Nandini Sripad
ಶ್ರೀವ್ಯಾಸತತ್ವಜ್ಞತೀರ್ಥಾರ್ಯ ವಿರಚಿತ
ಶ್ರೀಕೃಷ್ಣ ಪ್ರಾರ್ಥನಾ ಸುಳಾದಿ
ರಾಗ ಪಂತುವರಾಳಿ
ಧ್ರುವತಾಳ
ಆರಿಗೆ ಉಸರಲಿ ಆರಿಗೆ ಮೊರೆ ಇಡಲಿ
ಆರೆನ್ನ ಮನದಳಲು ನಿವಾರಿಸುವರ ಕಾಣೆ
ಮೇರೆ ಇಲ್ಲದೆ ಪೋದ ವಿಷಯ ಶಳವುತಿದೆ
ಭಾರೊಮ್ಮೆ ಮುಂದಣಾಶಾ ತೋರಿ ಎಳವುತಿದೆ
ತೋರಿ ನೀ ತೋರಿಸು ತೋರದೆ ಪೋದರೆ ಎನ್ನ ಎದೆ ಮನ
ಹಾರಿ ಬೀಳುತಲಿದೆ ಗತಿ ಏನೊ ಎಲೊ ಕೃಷ್ಣ
ಸಾರಿ ಸಾರಿಗೆ ಇದನೆ ಬೇಡುವೆನೇ ಅನ್ಯನ್ನ
ದಾರಿ ತಪ್ಪಿಸಿ ನಿನ್ನ ದಾರಿಯ ಪಿಡಿಸೆನ್ನ
ಕಾರುಣಿಕ ರಂಗ ಮೊರೆಯೊಕ್ಕ ಭಕತನ್ನ
ಮಾರಿಗೆ ಒಪ್ಪಿಸದೆ ಸಾರೆ ಗರಿಯೊ ದೇವ
ವಾರಿಜಾಕ್ಷ ವಾಸುದೇವವಿಟ್ಠಲರೇಯ
ದೂರ ನೋಡದೆ ದಯವಾರಿಧೆ ಪೊರೆಯೆನ್ನ ಪೊರೆಯೊ ॥ 1 ॥
ಮಟ್ಟತಾಳ
ಧನದಲ್ಲಿ ಬಡತನ ಸಹಿಸಲಿ ಬಹುದೈಯ್ಯಾ
ಜನಪತಿ ಕೋಪವ ತಡೆಯಲಿ ಬಹುದೈಯ್ಯಾ
ವನಿತೆಯರ ಕಟಾಕ್ಷವ ಕ್ಷಮಿಸಲಿ ಬಹುದಯ್ಯಾ
ಮನೆಯೊಳು ಕಲಹವ ತಾವರಿಸ ಬಹುದೈಯ್ಯಾ
ಜನಗಳ ದೂರನ್ನ ಸೈರಿಸ ಬಹುದೈಯ್ಯಾ
ವನಜನಯನ ವಾಸುದೇವವಿಟ್ಠಲ ನಿನ್ನ
ಮನದಲಿ ಯೋಚಿಸಿನ್ನು ಸಹಿಸಲಿ ವಶವಲ್ಲ ॥ 2 ॥
ತ್ರಿವಿಡಿತಾಳ
ಏನು ಬಿಟ್ಟರೆ ಬಿಡೊ ಏನು ಕೊಟ್ಟರೆ ಕೊಡೊ
ಆನೇ ನಂಬುವುದಿಲ್ಲ ಮನದೊಳು ಇನಿತನ್ನ
ನೀನೇವೆ ಕೇಳ್ ಕಾಂತಾ ಮನಸಿನ ಬಯಕಿದೆ
ಮಾನದೊಡೆಯ ವಾಸುದೇವವಿಟ್ಠಲರೇಯಾ
ದೀನ ವತ್ಸಲದೇವ ಮುನಿಸಿನ್ನು ಬಿಡೊ ಕೃಷ್ಣ ॥ 3 ॥
ಅಟ್ಟತಾಳ
ಒಲಿಸಿ ವನಿತೆ ಎನ್ನ ತಿಳಿಸಿ ಸೌಖ್ಯಗಳೆಲ್ಲ
ಛಲಿಸಿ ಅವಳ ಕೂಡ ವೊಳಿತಲ್ಲ ಮುನಿಸೀಗ
ಬಲುದೋಷ ಇದರಿಂದ ತಿಳಿದಾತ ನೀನಲ್ಲೆ
ಸುಳಿಯೊ ವಾಸುದೇವವಿಟ್ಠಲ ದಯಾನಿಧೆ ॥ 4 ॥
ಆದಿತಾಳ
ಮುನಿಗಳು ಬಹು ವ್ಯಾಪ್ತಿ ನಿನಗೆ ಪೇಳುವದೆಲ್ಲ
ಎನಗೊಂದಾದರು ಅದು ಮನಕೆ ಬಾಹುದಲ್ಲೊ
ಘನ್ನ ವ್ಯಾಪ್ತಿಯು ನಿನಗಿದೆ ಅಣುವಾದ ಎನ್ನ
ಮನವನು ಪೋಗದೆಲಿಹ್ಯದಿನೆ ಲೇಶ ನಿನಗಿದೆ
ಬಿನಗು ವಿಷಯಗಳು ದಣಿಸೊವೆ ಅದರನ್ನ
ಘನಮಹಿಮನೆ ವಾಸುದೇವವಿಟ್ಠಲರೇಯಾ
ಅನುಭವ ಕೊಡು ಕಂಡ್ಯಾ ದನುಜಮರ್ದನ ಕೃಷ್ಣ ॥ 5 ॥
ಜತೆ
ಭಕತರ ದೂರಿಗಂಜ್ವ ವಾಸುದೇವವಿಟ್ಠಲ
ಶಕತಾಳೆ ಮಿಗಿಲಾಗಿ ಬಿನ್ನೈಸುವದಕೆ ॥
***