ಮುಂದೆ ಭಲಾ ಎಂದು ಹಿಂದಾಡಿಕೊಂಬರ ಸಂಗ ಬೇಡ l
ಕುಂದು ನಿಂದೆಗಳ ಪವಾಡ ನೀಡುವರ ಪ್ರಸಂಗ ಬೇಡ ll ಪ ll
ತುದಿನಾಲಿಗೆ ಬೆಲ್ಲ ಎದೆ ಕತ್ತರಿಯವರ ಸಂಗ ಬೇಡ
ಹದವು ಮೀರಿದ ಮೇಲೆ ಹಲವನಾಡುವರ ಸಂಗ ಬೇಡ ll 1 ll
ಸ್ವೀಯಾವಗುಣ ಬಿಟ್ಟು ಪರರವಗುಣ ತೋರ್ಪ ಸಂಗ ಬೇಡ
ದಯೆ ಧರ್ಮ ದಾಕ್ಷಿಣ್ಯ ಅರಿಯದ ಮನುಜರ ಸಂಗ ಬೇಡ ll 2 ll
ವಿನಯ ವಿವೇಕವಿಲ್ಲದ ವಿದ್ವಾಂಸರ ಸಂಗ ಬೇಡ
ತನಗಿಲ್ಲದಂಥ ಬಂಟರ ಮಿತ್ರ ಜನರ ಸಂಗ ಬೇಡ ll 3 ll
ಅಡಿ ಅಳಕುವ ಅಜ್ಞಾನಿ ಮನುಜನ ಸಂಗ ಬೇಡ
ಕೂಡೆ ಕುಮತಿಗಳ ಕುಪಿತ ಮನುಜರ ಸಂಗ ಬೇಡ ll 4 ll
ತನ್ನ ಕಾರ್ಯಕ್ಕಾಗಿ ಪರರ ಕೆಡಿಸುವರ ಸಂಗ ಬೇಡ
ಚೆನ್ನ ಪುರಂದರವಿಟ್ಠಲನ್ನ ಹೊರತು ಪ್ರಸಂಗ ಬೇಡ ll 5 ll
***