ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೆಂಕಟೇಶ ಪರ್ವತದ ಮಹಾತ್ಮೆ ಸುಳಾದಿ
ರಾಗ ಕಲ್ಯಾಣಿ
ಧ್ರುವತಾಳ
ಕಾಯದಿಂದಲಿ ಭಕ್ತ ಮಾಡೀದಪರಾಧ
ತಾಯಿಯಂದದಿ ತಾನೆ ಕಾರುಣ್ಯದಿಂ
ಘಾಯವಾಗದಂತೆ ದಂಡಿಸಿ ಪಾಲಿಸುವ
ಶ್ರೀಯರಸನ ಗುಣಕೆ ಏನೆಂಬೆನೋ
ಸ್ತ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆ
ಕಾಯಿದು ಕೊಂಬವನಯ್ಯ ವಾಸನಮಯದಿಂ
ಆಯಿತೆಂದೆನಿಸುವ ಸ್ವಲ್ಪಾನುಭವದಿಂದ
ನೋಯಾದಂತೆ ಪಾಪಾ ತೀರಿಸುವನು
ಈಯವನಿಯೊಳಗೆ ಎಣಿಸಿದರು ಇಂಥ ಉ -
ಪಾಯ ಬಲ್ಲಂಥ ದೈವ ಒಂದೂ ಇಲ್ಲಾ
ಬಾಯಲ್ಲಿ ಆಡಿದರು ಕೋಪದಿಂದಲಿ ಅವನ
ಸಾಯಾಬಡುವರಲ್ಲೊ ಮುಂದೋರದೆ
ಕಾಯಾಜ ಪಿತನ ಮಹಿಮೆ ಕೇಳಿರೊ ತನ್ನವರು
ಕಾಯದಲ್ಲಿ ಪಾಪಾಮಾಡೆ ಮನದಲ್ಲಿ ಉಣಿಪಾ
ಛಾಯಾದಂತೆ ಪುಣ್ಯ ಮನದಿಂದ ಮಾಡಿದರೆ
ಕಾಯದಲಿ ಉಣಿಸುವ ಖ್ಯಾತಿ ಇತ್ತು
ಮಾಯಾಕಾರನ ಮಾಯ ತಿಳಿದವನಾರು ದೈ -
ತೇಯ ಜನರಿಗೆ ಇದರ ವಿಪರೀತವೊ
ವಾಯುವಂದಿತ ವಿಜಯವಿಟ್ಠಲ ವೆಂಕಟಗಿರಿ
ರಾಯ ತನ್ನ ಶರಣರಿಗೆ ಭೀತಿ ಬರಗೊಡನು ॥ 1 ॥
ಮಟ್ಟತಾಳ
ಧರಣಿಯೊಳಗೆ ತನ್ನ ಶರಣರ ಸೌಭಾಗ್ಯ
ನಿರುತರ ಶೃತಿತತಿ ಪರಿಪರಿಯಿಂದಲಿ
ವರದೊರದು ಪೇಳಿ ಬೆರಗಾಗುತಲಿವೆ
ಸರಿಗಾಣೇನಯ್ಯಾ ಹರಿ ತನ್ನವರನ
ಚರಣದಲಿ ಇಟ್ಟು ಪರಿಪಾಲಿಸುತಿಪ್ಪ
ದುರಿತದ ಭಯವಿಲ್ಲ ದುರುಳರಟ್ಟುಳಿ ಇಲ್ಲ
ಉರಗಗಿರಿ ವೆಂಕಟ ವಿಜಯವಿಟ್ಠಲರೇಯ
ಸ್ಥಿರವಾಗಿ ನಿಂದು ಕರೆದು ವರವಕೊಡುವ ॥ 2 ॥
ತ್ರಿವಿಡಿತಾಳ
ಆವಾವ ದೈವಗಳ ನಂಬಿದರೇನಯ್ಯಾ
ಭಾವದಲಿ ನೋಡಿದರು ಸುಖವೇ ಇಲ್ಲ
ನೋವಾಗುವದು ಕೇಳಿ ಬಾಯಿಲಾಡಿದದಕ್ಕೆ
ಕೇವಲ ಬಾಧಿಯ ಬಿಡಿಸುವರು
ದೇವದೇವೇಶನ ಕರುಣತ್ವ ಇಂತಲ್ಲ
ನೋವಾಗೊಡದಂತೆ ಉಣಿಪ ಪಾಪಾ
ಆವಾವಗಾದರು ಇಂಥಾ ಶಕುತಿ ಉಂಟೆ
ತ್ರಿವಿಧ ಗುಣದಿಂದ ಪ್ರತಿಬದ್ಧರೂ
ಭೂವಲ್ಲಭ ಚೋರರ ದಂಡಿಸಿದಂತೆ ದೈ -
ತ್ಯಾವಳಿಯ ಶಿಕ್ಷಿಸುವ ನಿರ್ದೋಷನೊ
ದೇವ ನಾರಾಯಣಗಿರಿ ವಿಜಯವಿಟ್ಠಲ
ಶ್ರೀ ವೆಂಕಟನಾಥ ನಮ್ಮನು ಕಾವಾ ॥ 3 ॥
ಅಟ್ಟತಾಳ
ಭಾರವೊಹಿಸುವ ದೀನ ವತ್ಸಲ ಅಚ್ಯುತ
ಸಾರಿಸಾರಿಗೆ ತನ್ನ ಸಾರಿದವರು ಸಂ -
ಸಾರದೊಳಗೆ ಇರೆ ಕರುಣದಿಂದಲಿ ಸಂ -
ಸಾರಿಗ ತಾನಾಗಿ ಇವರನ್ನ ತಗದು ಉ -
ದ್ಧಾರ ಮಾಡವನಯ್ಯಾ ಸುಲಭ ಮೂರುತಿ ಇದು
ವಾರಿಯೊಳಗೆ ಬಿದ್ದ ಮನುಜಗಾಗಿ ತಾನು
ವಾರಿಯಾ ತುಡಿಕಿ ಪಿಡಿದೆತ್ತಿ ತಂದವನ
ತೀರದಲ್ಲಿಟ್ಟು ಪಾಲಿಸಿದಂತೆ ಕಾಣಿರೊ
ಮಾರಜನಕ ನಮ್ಮನು ಭವದಿಂದಲಿ
ಪಾರುಗಾಣಿಸುವನು ಪಾವನ್ನ ಶರೀರ
ನಾರದವಂದ್ಯ ವಿಜಯವಿಟ್ಠಲ ಸರ್ವಾ -
ಧಾರ ವೆಂಕಟ ಉರಗಾದ್ರಿವಾಸ ॥ 4 ॥
ಆದಿತಾಳ
ವಾರಿಜ ಪಾದ ವಾರಿಜನಾಭ
ವಾರಿಜ ಹೃದಯ ವಾರಿಜ ಕಂಧರ
ವಾರಿಜ ಪಾಣಿಕರ ವಾರಿಜ ನಿಜ
ವಾರಿಜ ಲೋಚನ ವಾರಿಜ ಪತಿ ವಾರಿಜ
ವಾರಿಜ ಹಾರಾ ವಾರಿಜ ಮಿತಾ
ಪಾರ ಕೋಟಿ ತೇಜಾ ವಿಬುಧ
ವಾರಿಜ ನಮಗೆ ವಾರಿಜ ಸುರ ವಾರಿಜ
ವಾರಿಜ ಸಂಭವ ನೆನೆವರ ಹೃ -
ದ್ವಾರಿಜ ಪೀಠವಾಸ ವಾರಿಜನಿಲಯ ವಿಜಯವಿಟ್ಠಲ ದಯಾ
ವಾರಿಧಿ ವೆಂಕಟಗಿರಿ ಶ್ರೀನಿವಾಸ ॥ 5 ॥
ಜತೆ
ಶರಣರಿಗಾಗಿ ನಿರ್ಜರರ ವಾಲಗಬಿಟ್ಟು
ಉರಗಾದ್ರಿಯಲಿ ನಿಂದಾ ವಿಜಯವಿಟ್ಠಲ ವೆಂಕಟ ॥
*******