ನಿಲ್ಲೋ ವಿಟ್ಠಲ ಸರಿ l ಯಲ್ಲಾ ನಿನ್ನವರವ l ರಲ್ಲೀ ಈ ಬಿಗುಮಾನವೇ ll ಪ ll
ವಲ್ಲಭನೆಂದಮಿ l ತೋಲ್ಲಾಸದಲಿ ಬರೆ l ಸೊಲ್ಲು ಲಾಲಿಸದೆ ಮ l ತ್ತೆಲ್ಲಿಗೆ ಸರಿಯುವೆ ll ಅ ಪ ll
ಅಚ್ಯುತಾರ್ಪಿತವೆಂದು l ದಾಸರೆನಲು ಕಲ l ಗಚ್ಚು ಕುಡಿಯಲಿಲ್ಲವೇ ll
ಮುಚ್ಚಟೆ ಇಲ್ಲದೆ l ಮೆಚ್ಚಿ ಶಬರಿಯಳ l ಉಚ್ಚಿಷ್ಟ ಉಣಲಿಲ್ಲವೇ ll
ಮಚ್ಛಾದ್ಯವತಾರದಿ l ಸಚ್ಚೇತನರ ಭವ್ಯ l ಇಚ್ಛೆ ಸಲಿಸಲಿಲ್ಲವೇ ll
ಕಚ್ಚೀ ಬೈದೊದ್ದವರಿ l ಗ್ಹೆಚ್ಚಿನ ಫಲವಿತ್ತ l ಹುಚ್ಚುದೊರೆಯೆ ಎನ್ನ l ತುಚ್ಛೀಕರಿಸೆ ಬಿಡೆ ll 1 ll
ಕುಂಡ ಗೋಳಕರಲ್ಲಿ l ಗಂಡಾಳಾಗಿದ್ದು ನರನ l ಬಂಡೀ ಹೊಡೆಯಲಿಲ್ಲವೇ ll
ಹೊಂಡಾದಾನೆಯ ದುಃಖ l ಖಂಡಿಸಬೇಕೆಂದು l ಕೊಂಡೋಡಿ ಬರಲಿಲ್ಲವೇ ll
ಕಂಡು ಪಾಕದ ಶೇಷ l ಉಂಡಾಪ್ತಮಿತ್ರರ l ಗಂಡ ಹರಿಸಲಿಲ್ಲವೇ ll
ಹಿಂಡುವೈಷ್ಣವಪಾದ l ಪುಂಡರೀಕಾಳಿಯ l ಕಂಡೂ ಕಾಣದ ಹಾಗೆ l ಭಂಡೂ ಮಾಡಲು ಬಿಡೆ ll 2 ll
ಬಲಿಯ ಬಾಗಿಲ ಕಾಯ್ದು l ಶಿಲೆಯ ಸತಿಯಳ ಮಾಡಿ l ಒಲಿದಂಬರೀಷನ ಸಲಹಿಲ್ಲವೇ ll
ಹಲಿ ಛಲಿದೂರ್ವಾಸ l ಕಲಿಭೀಷ್ಮ ದ್ರೋಣರಿ l ಗೊಲಿದು ಪೊರೆದವನಲ್ಲವೇ ll
ಇಳೆಯೊಳು ಭಕ್ತರ l ಕುಲಕೋಟಿಗೊಲವಿನಿಂ l ಫಲವಾ ನೀಡುತಲಿಲ್ಲವೇ ll
ಹಲವಾಡಲೇಕೆ ತಂದೆ l ವೆಂಕಟೇಶವಿಟ್ಠಲ l ಒಲಿದವರಂತೆನ್ನ l ಸಲಹದಿದ್ದರೆ ಬಿಡೆ ll 3 ll
***