ಶೇಷವಾಹನನಾಗಿ ಬಂದ ಶ್ರೀನಿವಾಸ |
ವಾಸುದೇವ ವಾಸವ ಪ್ರೀಯಾ ||ಪ||
ಅಜಭವ ಸುರಮುನಿ ವ್ರಜನಾನಾ ಬಗೆಯಲಿ |
ಭಜನೆ ಮಾಡುತ ಬಲು ನಿಜಮನದಲಿ ನೋಡೇ ||ಅ.ಪ||
ಗಂಧರ್ವಗಾನದೊಳ್ ಗೋವಿಂದ ಪಾಡಲು
ಭೇರಿ ದುಂದುಭಿವಾದ್ಯ ಆನಂದ ನುಡಿಯುತಿರೆ ||೧||
ಛತ್ರಚಾಮರ ಜನರು ಸ್ತೋತ್ರ ಸಂಗೀತನಾದ |
ಧಾತ್ರಿಯೊಳ್ ತುಂಬಿರಲು ಸರ್ವತ್ರವ್ಯಾಪಕ ದೇವ ||೨||
ಇಕ್ಕದ ವರಕಲ್ಪ ದಿಕ್ಕು ಬೆಳಗುತಿರೆ
ಚೊಕ್ಕ ದೈವವೇ ಶುದ್ಧ ಭಕ್ತರ ಒಡಗೂಡಿ ||೩||
ಇಷ್ಟ ಮೂರುತಿ ಮನೋಭೀಷ್ಟ ಪಾಲಿಪ
ವಿಜಯ ವಿಠ್ಠಲ ವೆಂಕಟೇಶ ಬೆಟ್ಟದೊಡೆಯ ಇಂದು ||೪||
****