ಒಲ್ಲೆ ಒಲ್ಲೆ ಸ್ವಾಮಿ ಒಲ್ಲೆ ಒಲ್ಲೆ ಪ
ವಲ್ಲಭ ಶ್ರೀ ಕೃಷ್ಣವಿಠಲನಲ್ಲದೆ
ಬೇರೆ ವಲ್ಲಭನನು ನಾ ಅ.ಪ.
ಹರಿ ನಿಮ್ಮ ಗುಣಗಳ ಪಾಡದೆ ಇರಲೊಲ್ಲೆ
ಚರಿತೆ ನಿಮ್ಮದು ನಿತ್ಯ ಕೇಳದೆ ಇರಲೊಲ್ಲೆ
ಚರಣ ಪೂಜೆಯನಿರುತ ಮಾಡದೆ ಇರಲೊಲ್ಲೆ
ದೊರೆಯೆ ನಿಮ್ಮನು ಬಿಟ್ಟು ಬೇಡೆ ಅನ್ಯರ ನಾನು 1
ದುಷ್ಟಜನರ ಸಂಗ ಎಂದೆಂದಿಗುವಲ್ಲೆ
ಶಿಷ್ಟಜನರ ಸಂಗ ಎಂದಿಗು ಬಿಡಲೊಲ್ಲೆ
ಅಷ್ಟಕರ್ತನು ಜಗಕೆ ವಿಷ್ಣು ಒಬ್ಬನೆ ಬಲ್ಲೆ
ಕಷ್ಟ ನೀಡುವ ಭವವ ಎಂದೆಂದಿಗು ಮುಂದೆ 2
ದುರಿತ ರಾಶಿಯ ಮತ್ತೆ ಮಾಡಲು ನಾನೊಲ್ಲೆ
ಅರಿಷಡ್ವರ್ಗಂಗಳ ಜಯಿಸದೆ ಬಿಡಲೊಲ್ಲೆ
ಗುರುಪಾದ ಪದ್ಮಗಳ ಒಲೆಸದೆ ಬಿಡಲೊಲ್ಲೆ
ಪರನಾರಿಯರ ಸಂಗ ಎಂದೆಂದಿಗು ಒಲ್ಲೆ 3
ಉತ್ತಮೋತ್ತುಮ ಕೃಷ್ಣಸಾರದೆ ಇರಲೊಲ್ಲೆ
ಭೃತ್ಯ ನಿನ್ನವನೆಂದು ಸಾರದೆ ಇರಲೊಲ್ಲೆ
ನಿತ್ಯ ಶೃತಿಯ ಆಜ್ಞೆ ನಡಿಸದೆ ಬಿಡಲೊಲ್ಲೆ
ಸುತ್ತಿ ಕಾಯುವೆ ನಮ್ಮ ಬಲ್ಲೆಬಲ್ಲೆನು ಸತ್ಯ 4
“ಶ್ರೀ ಕೃಷ್ಣವಿಠಲ”ನೆ ಪರಮಾಪ್ತ ಸರಿಬಲ್ಲೆ
ಏಕೋವಿಷ್ಣುವು ವಾಕು ಸತ್ಯವೆಂಬುದ ಬಲ್ಲೆ
ಏಕ ಭಕ್ತಿಯ ಬಿಟ್ಟು ಏನೇನು ನಾನೊಲ್ಲೆ
ಶ್ರೀಕಾಂತನನು ಬಿಟ್ಟು ಕ್ಷಣವು ಜೀವಿಸಲೊಲ್ಲೆ5
***