ankita ನರಸಿಂಹ
ರಾಗ: ಬೇಗಡೆ ತಾಳ: ಮಿಶ್ರಛಾಪು
ಮಂತ್ರಾಲಯದ ದೊರೆಯೆ ವಂದಿಪೆನು ಚರಣಕೆ
ಸಂತ ವೈಷ್ಣವ ವಿಭುವೆ ಪ
ಕಂತುಪಿತ ಸರ್ವೇಶ ಲಕ್ಷ್ಮೀ-
ಕಾಂತ ಚರಣಾಂಬೋಜಯುಗಳ
ಅಂತರಂಗದಿ ನೆಲೆಯಗೊಳಿಸುತ
ಸಂತತವು ನೆನೆವಂತೆ ಕರುಣಿಸು ಅ.ಪ
ಬಲ್ಲಿದನಹುದೊ ನೀನು ಬುಧ ಜನರ ಪಾಲಿನ
ಕಲ್ಪ ಭೂರುಹ ಸುರಧೇನು
ಕ್ಷುಲ್ಲಕನು ನಾನಾದೆ ಮನವನು
ಗೆಲ್ಲಲರಿಯೆನು ಕರುಣಿಸೆನ್ನಯ
ಹುಲ್ಲುಗುಣಗಳನೆಣಿಸದೆಲೆ ತವ
ಪಲ್ಲವಾರುಣ ಪಾದ ತೋರಿಸು 1
ಮಾಯವಾದಿಗಳ ಗೆದ್ದು ಸಾರಿದೆಯೊ ಡಂಗೂರ
ತೋಯಜಾಸನ ಪಿತನೆ ಪರನೆಂದು
ಕಾಯಜಾತಾದ್ಯರಿಗಳಾರ್ವರ
ನ್ಯಾಯದಿಂ ಪೀಡಿಸುತಲಿರುವರು-
ಪಾಯಮಂ ಪರಿಹರಿಸಿ ಎನ್ನನು
ಕಾಯೊ ಯತಿವರ ಕರುಣಾ ಸಿಂಧು 2
ಶ್ರೀ ಸುಧೀಂದ್ರ ಸಂಜಾತ ಲಕ್ಷ್ಮೀನೃಸಿಂಹನ
ದಾಸ ಭಕ್ತರಪೋಷ
ದಾಸನೆನ್ನುತ ಬಳಿಗೆ ಕರೆದುಪ-
ದೇಶವನು ಕರುಣಿಸುತ ನಿನ್ನಯ
ದಾಸ ದಾಸರ ಸಂಗಡಿಗರೊಳು
ವಾಸಮಾಡಿಸಿ ಪೊರೆಯೊ ಸತತ 3
***