ಶ್ರೀ ಗುರುಗೋಪಾಲದಾಸಾರ್ಯ ವಿರಚಿತ
ಶ್ರೀ ವೇಂಕಟೇಶದೇವರ ನಿಂದಾಪರ ಸ್ತೋತ್ರ
ರಾಗ : ಸೌರಾಷ್ಟ್ರ ತಿಶ್ರನಡೆ
ವೆಂಕಟಗಿರಿರಾಜ ಪಂಕಜಾಲಯನಾಥ
ಪಂಕಜಭವ ಭವ ವಂದ್ಯ
ಲೆಂಕವತ್ಸಲ ಅಕಳಂಕ ಸ್ವಭಾವ ಈ
ಡೊಂಕು ಲೀಲೆಗಳ್ಯಾಕೆ ನಿನಗೆ॥ಪ॥
ಎದೆಯಲಿ ಭೃಗು ಮುನಿವದಿಯಲು
ಮನೆಯೊಳ್ಪ್ರೇಮ ಕಲಹವಾ
ಒದಗಾಲು ವರದ ಪ್ರಕಾಶಿತನಾಗದೆ
ಹುದುಗಿಯಿಪ್ಪಿರೆ ಹುತ್ತಿನಲ್ಲಿ॥೧॥
ಧಾಮತ್ರಯ ನಿವಾಸ ಬ್ರಹ್ಮಾಂಡ ಅವ್ಯಾಕೃತ
ಯೋಮಧಿ ಬಹಿರಂತರ ವ್ಯಾಪ್ತಾ
ಭೂಮಿಯೊಳು ನಿನಗೆ ಕುಟಿಲವು ಕಿಟಿಯಿಂದಾ
ಸ್ವಾಮಿ ನೀ ಬೇಡಿಕೊಂಬುವರೆ॥೨॥
ಮುನಿಯು ದೂರ್ವಾಸ ಬೇಡಿದ ಇಷ್ಟನ್ನ ಆ
ಕ್ಷಣದಿ ನೀಡಿದ ಮಹಾಮಹಿಮ
ವನಿತೆ ಬಕುಳೆ ಮಾಲೆ ಶ್ಯಾಮಕದನ್ನಾವ
ನಿನಗೆ ಕೊಡಲು ಉಂಡದೇನೋ॥೩॥
ಶ್ರೀಶ ರತ್ನಾಕರನ ವನಧಿಗಳಿಗೆ ಅ
ಧೀಶ ಧನವನಾಳಿದ ಧೊರೀಯೆ
ಕಾಸುಕಾಸಿಗೆ ಬಡ್ಡಿ ಜನರಿಂದ ಯಾಚಿಸಿ
ದೇಶದಿ ತರಿಸುವದೇನೋ॥೪॥
ಅನ್ನಮಯನೆ ಅಖಿಳ ಜನರಿಗೆ ಚತುರ್ವಿಧಾ
ಅನ್ನ ನೀಡುವ ಅನ್ನನಾಮಾ
ಘನ್ನ ಮಹಿಮಾ ಈಗ ಉಂಡು ಮಿಕ್ಕಿದಾ
ಅನ್ನ ಮಾರಿ ಕೊಂಬುವರೇನೋ॥೫॥
ತಪ್ಪದೆ ಅಜಭಾವದಿಗಳು ತಮ್ಮ ವಿಭವ
ಅರ್ಪಿಸುವರು ತಲೆವಾಗಿ
ಅಪ್ರತಿಮ ಮಹಿಮಾ ಅವಿಂಧರಿಗೆ ನೀ ಈಗ
ಕಪ್ಪಕೊಡುವದ್ಯಾಕೆ ಪೇಳೋ॥೬॥
ತೊಡೆಯಲ್ಲಿ ಉರದಲ್ಲಿ ಎಡಬಲದಲ್ಲಿ ನಿನ್ನ
ಮಡದಿಯರು ನಿತ್ಯ ಸೇವೆಸಲು
ಬಿಡದೆ ಆ ಪ್ರತಿವರುಷ ಮದಿವೆ ಮದಿವೆಯೆಂಬೊ
ಸಡಗರವೆನೋ ಸರ್ವೇಶಾ॥೭॥
ಈಷಣ ಗೆಲಿದಾ ಯೋಗೀಶ್ವರಿಗೊಡೆಯಾ ನಿ-
ರ್ದೋಷ ಸ್ವರಮಣ ಲಕ್ಷ್ಮೀಶಾ
ಯೋಷಿತ್ಕಾಮುಕನಾಗಿ ಪದ್ಮಾವತಿಯಿಂದ
ಪಾಷಾಣ ಪ್ರಹಾರವೆ ನಿನಗೆ॥೮॥
ಸ್ವರಮಣ ಸ್ವಾತಂತ್ರ ಪೂರ್ಣಸತ್ಯ ಸಂಕಲ್ಪ
ಕರುಣಿ ಕಾಮಿತ ಫಲದಾತಾ
ಗುರುಗೋಪಾಲವಿಠಲ ಶ್ರೀನಿವಾಸ ನಿನ್ನ
ಚರಿಯಕ್ಕೆ ನಮೋ ಮಹರಾಯಾ॥೯॥
****