ತುಪಾಕಿ ವೆಂಕಟರಮಣಾಚಾರ್ಯರ ಕೃತಿ
ರಾಗ – : ತಾಳ –
ಭಯಹರ ನರಸಿಂಹ ಪಾಲಿಸು ಮಾತ ಲಾಲಿಸು ಶತ್ರುಗಳ ಬೇಗ ಜಯಿಸು ll ಪ ll
ಶಿಶುವಾದ ಪ್ರಹ್ಲಾದ ಪೇಳಿದ ಕ್ಷಮೆ ತಾಳಿದ ನಯನುಡಿಗಳ ಕೇಳ್ದ
ಬಿಸಜ ಸಂಭವ ವರ ಬಲದಿಂದ ಕಲಕಲದಿಂದ ನಿನ್ನ ತೋರೆಂದು ಹಾಟಕ
ಕಶಿಪನುಡಿಯಲತಿ ಭರದಿಂದ ಕರೆದಾಗಲೆ ಬಂದ ದೈತ್ಯನ ದೇಹದಿಂದ
ಬಿಸಿ ಬಿಸಿ ರಕುತವ ನಖದಿಂದ ಚಲ್ಲುತ ನಿಂದ ದೀನ ಬಂಧು ಗೋವಿಂದ ll 1 ll
ಭವಭಯಬಂಧವಿಮೋಚನ ರಕ್ತಲೋಚನ ಶತೃಸಂಚಯ ಪಚನ
ದ್ವಯ ಚಿತ್ರಕರ್ಮ ವಿಭಾವನ ದಾಸಜೀವನ ದಾನವಕೂಟ ಮಥನ
ಲಯ ದೂರ ಷಡ್ವೈರಿಧಾವನ ಲೋಕಪಾವನ ದಯಕರ ಪಕ್ಷಿಗಮನ
ಮಯ ಶಂಬರಾರಿ ದೈತ್ಯರ ಪೋಲ್ವ ವೈರಿಗಳ
ಗೆಲ್ವ ಶಕ್ತಿಕೊಡುವರೆ ಬಲ್ಲನ ll 2 ll
ಈ ಭೂಮಿಗತವೈರಿ ಜನರೆಲ್ಲಾ ಕೂಡಿಹರಲ್ಲ ಇನ್ನೂ ಹತರಾಗಲಿಲ್ಲ
ನಾ ಬಲಹೀನನೆಂಬುದ ಬಲ್ಲ ಶ್ರೀಭೂನಲ್ಲ ನೀನರಿಯದುದಿಲ್ಲ
ಹೋ ಬಲವಾಸಿ ಎನ್ನಯ ಸೊಲ್ಲ ಲಾಲಿಪರಿಲ್ಲ ಆದರು ಭಯವಿಲ್ಲ
ಭೂಭರ ಹರನ ವೆಂಕಟನಾಥ ಪಾರ್ಥನ ಸೂತ ರಕ್ಷಿಸು ಜಗನ್ನಾಥ ll 3 ll
***