ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಹಿತ ಸುಪಥ ಸಾಧನ ಪಡೆದು ಸ್ವಸುಖಗೂಡಿರೊ ವಿಹಿತ ಮರೆದು ವಿಭ್ರಮಾಚರಿಸಬ್ಯಾಡಿರೋ ಪ
ದಾರು ತಿಳಿದು ನೋಡಿರೊ ಜ್ಞಾನ ಹೀನರಾಗಿ ಗರ್ವ ಹಿಡಿಯಬ್ಯಾಡಿರೊ ಸ್ವಾನುಭವಾಮೃತವನ್ನುಂಡು ಸವಿ ಸೂರ್ಯಾಡಿರೊ ನಾನು ನೀನು ಎಂಬ ಬಿನಗುಭ್ರಮ ಈಡ್ಯಾಡಿರೊ 1
ಮನದ ಕೊನಿಯಲಿದ್ದ ಘನದಾಶ್ರಯವು ಮಾಡಿರೊ ತನುವು ಲಂಪಟ್ಹಿಡಿದು ತನ್ನ ಮರಿಯಬ್ಯಾಡಿರೊ ಜನುಮ ಸಫಲವಾಗುವ ಸುಜಾಗ್ರತಿಯ ಪಡೆಯಿರೊ ನೆನವು ನೆಲೆಯಗೊಂಡು ನಿಜದಾಶ್ರಯದಲಿ ನಡೆಯಿರೊ2
ಮರ್ತು ಮೈಯ ವ್ಯರ್ಥ ದಿನವಗಳಿಯಬ್ಯಾಡಿರೊ ನಿರ್ತದಿಂದ ಅರ್ತ ಭಾವದರ್ಥಿ ನೋಡಿರೊ ಕರ್ತು ಭಾನುಕೋಟಿತೇಜನ ಗುರ್ತು ಮಾಡಿರೊ ಅರ್ತು ಮಹಿಪತಿ ಸ್ವಾಮಿಪಾದ ಬೆರ್ತುಕೂಡಿರೊ 3
***