ರಾಮನಾಮ ಸುಧಾರಸ ದೊರಕಿತು l
ಪ್ರೇಮದಿ ರುಚಿ ನೋಡಿರಿ ಜನರೆಲ್ಲ ll ಪ ll
ಕ್ಷೇಮದಿಂದ ಈ ಮಾನವ ಜನ್ಮವು l
ಕಾಮಿಸಿ ದುಸ್ತರ ತಿಳಿರೆಲ್ಲಾ ll ಅ ಪ ll
ಅಡವಿಯೊಳಗೆ ಸನ್ಮುನಿಗಳು ವುಕ್ಕಿನ l
ಪುಡಿಯ ಬುಕ್ಕಿ ತಪ ಮಾಡಿದರೂ l
ಕಡಲಶಯನ ನಮಗೊಲಿಯಲೆಂದು ನಿ l
ರ್ಭಿಡಿಯದಿಂದ ಕೊಂಡಾಡಿದರೂ l
ಬಡಬಾರದ ಬಹುಭಂಗವ ಬಟ್ಟರು l
ಕಡಿಗೆ ಸಿಗದೆ ಹುಡಿಕ್ಯಾಡಿದರೂ ll 1 ll
ಗೊಡ್ಡು ಶಾಣೆತನ ಗೋಡಿಯಂತೆ ನಿಮ l
ಗಡ್ಡವಾಯಿತೊಬ್ಬುದೆಲ್ಲಾ l
ಜಡ್ಡು ಭವದ ಸಂಸಾರದೊಳಗೆ l
ಯಡ್ಡನಾದರೆ ಸುಖವಿಲ್ಲಾ l
ಧಡ್ಡ ಜನರೇ ನಿಮಗೇನು ಧಾಡಿರ್ಯೋ l
ದುಡ್ಡು ಖರ್ಚು ಆಗುವುದಿಲ್ಲಾ ll 2 ll
ಮಾಮನೋಹರನ ಸುನಾಮ ನೆನದು ಸು l
ಧಾಮ ಧನ್ಯನಾದನು ಹಿಂದೆ l
ಭೂಮಿಯೊಳಗೆ ಬಹುಸುಲಭದಿಂದ l
ನಮಗಾ ಮಹಾತ್ಮ ದೊರಿವನು ಇಂದೇ l
ಪ್ರೇಮದಿ ಶ್ರೀಶಗೋಪಾಲವಿಟ್ಠಲನ l
ನಾಮ ಭಜಿಸಲತಿ ಜವದಿಂದ ll 3 ll
***