Showing posts with label ಅಚ್ಯುತಾನಂತ ಮುಕುಂದ vijaya vittala ankita suladi ತೋತಾದ್ರಿ ಸುಳಾದಿ ACHYUTANANTA MUKUNDA TOTADRI SULADI. Show all posts
Showing posts with label ಅಚ್ಯುತಾನಂತ ಮುಕುಂದ vijaya vittala ankita suladi ತೋತಾದ್ರಿ ಸುಳಾದಿ ACHYUTANANTA MUKUNDA TOTADRI SULADI. Show all posts

Friday, 30 April 2021

ಅಚ್ಯುತಾನಂತ ಮುಕುಂದ vijaya vittala ankita suladi ತೋತಾದ್ರಿ ಸುಳಾದಿ ACHYUTANANTA MUKUNDA TOTADRI SULADI

 

 Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ  ತೋತಾದ್ರಿ ಸುಳಾದಿ 


 ರಾಗ : ನಾಟಕುರಂಜಿ 


 ಧ್ರುವತಾಳ 


ಅಚ್ಯುತಾನಂತ ಮುಕುಂದ ಭಾರ್ಗವಿರಮಣ 

ಎಚ್ಚರಾದೈವ ಜಗದೇಕ ಮೂರ್ತಿಯಾ ಕಂಡೆ 

ಅಚ್ಚಾ ಮುತ್ತಿನ ಮುಕುಟಾ ಅರುಣೋದಯ ಕೆಂಪು 

ಪಚ್ಚಿದ ನೊಸಲ ಕಸ್ತೂರಿ ತಿಲಕನ ಕಂಡೆ 

ಅಚ್ಚಾ ಪೂವಿನ ಸರಾ ಕೊರಳೊಳು ತೂಗುತಿದೆ 

ಪಚ್ಚದ ಪದಕಾ ಉರದಲ್ಲಿ ಪೊಳೆವದು ಕಂಡೆ 

ನಿಚ್ಚಟ ಮದುವಣಿಗ ತೋತಾದ್ರಿಪುರ ವಾಸ 

ಹೆಚ್ಚಿನ ದೈವ ನಮ್ಮ ವಿಜಯವಿಠಲ ನಂಘ್ರಿಗೆ 

ಎಚ್ಚರಿಕೆಯಾ ಪೇಳಿ ಶಿರವಾಗಿ ತುತಿಸಿಕಂಡೆ ॥೧॥


 ಮಟ್ಟತಾಳ 


ಕುಂಡಲದ ಬೆಳಗು ಚಂಪನ ಶುಚಿಯಂತೆ 

ಗಂಡ ಸ್ಥಳದಲ್ಲಿ ಕಂಡೆನೊ ಎಳೆದುಳಿಸಿ 

ದಂಡೆ ಕೌಸ್ತುಭಮಣಿ ದುಂಡು ಮುತ್ತಿನ ಹಾರ

ಕೊಂಡಾಡಲೇನು ಮಂಡಲದೊಳಗುದ್ದಂಡ ತೋತಾದ್ರೀಶಾ 

ಖಂಡಪುರುಷ ಶ್ರೀ ವಿಜಯವಿಠ್ಠಲನಾ 

ತಂಡ ತಂಡದಲಿಂದಾ ಕಂಡೆನು ಮನದೊಳಗೆ ॥೨॥


 ತ್ರಿವಿಡಿತಾಳ 


ಮಂಜು ಭಾಷಣ ತೇಜೋಪುಂಜಾಪುಷ್ಕರಾಜಾಕ್ಷಾ 

ಕಂಜಾರಿಹಸ್ತ ಶೋಭಂಜಯಾ ಕಟಿ ಚತುರ 

ಮುಂಜಾರಾಗೆಳವಾ ನಿರಂಜನವಾಸಾ ಕಾ-

ಳಂಜಾಯಾದೇವಾ ಪ್ರಬಂಜನ್ನನೋಡಿಯಾ 

ಕುಂಜಾರವರದ ತೋತಾದ್ರಿ ನಿಲಿಯಾ ಮೃ -

ತ್ಯುಂಜಯನುತಾ ನಮ್ಮ ವಿಜಯವಿಠಲಾ ವಜ್ರಾ-

ಪಂಜರ ಭಕ್ತರಿಗೆ ಪ್ರಾಂಜಲಿಯಲಿ ಕಂಡೆ ॥೩॥


 ಅಟ್ಟತಾಳ 


ಇಂದ್ರವಂದಿತ ಪಾದ ಚಂದ್ರ ವಂದಿತ ಪಾದ 

ಸ್ಕಂಧವಂದಿತ ಪಾದ ಸುಂದರ ಪಾದದ

ಇಂದು ರವಿ ಖಗೇಂದ್ರ ವಂದಿತ ಪಾದ 

ವೃಂದಾರಕ ವೃಂದವಂದಿತ ಸಿರಿ ಪಾದ 

ಅಂದಿಗೆ ಗೆಜ್ಜೆಲಿ ಅಂದವಾದ ಪಾದ 

ಇಂದು ತೋತಾದ್ರಿಲಿನಿಂದ ದೇವನ ಪಾದ 

ಮಂದರಧರ ಸಿರಿ ವಿಜಯವಿಠಲ ರೇಯಾ 

ಪೊಂದಿದವರ ಭವ ಬಂಧ ನಾಶನ ಪಾದ ॥೪॥


 ಆದಿತಾಳ 


ನಖಶಿಖ ಪರಿಯಂತ ಸಕಲಾಭರಣವಿಟ್ಟಾ 

ಸುಖ ಸಾಂದ್ರ ಲಕುಮಿನಾಯಕ ನಾಟಕಧಾರಾ 

ಅಕುಟಿಲರಾಪ್ತ ಕುಹಕರ ಸಂಹಾರಕನೆ 

ಮಕುತಾಧಾರ ನಮ್ಮ ತೋತಾದ್ರಿ ಪುರವಾಸ

ಅಧಿಕಾದೈವ ವಿಜಯವಿಠಲರೇಯನ ಮ-

ನಕೆ ತಂದು ಇಂದು ನಾನು ಧನ್ಯನಾದೆ ಧರೆಯೊಳಗೆ ॥೫॥


 ಜತೆ 


ಭೂಮಿಯೊಳಾವಾವಾನಾದರು ಮನ್ನಿಸೆ 

ಸ್ವಾಮಿ ತೋತಾದ್ರೀಶಾ ವಿಜಯವಿಠಲ ಕಾಯ್ವಾ ॥೬॥

******

ತೋತಾದ್ರಿಯ ಪುರಾಣ ಕಥೆ 


 ತೋತ ಎಂಬ ಬೇಟೆಗಾರನಿದ್ದ ಸ್ಥಳಕ್ಕೆ ರೋಮಹರ್ಷರೆಂಬ ಮುನಿಗಳು ಬಂದು ತಪಸ್ಸನ್ನಾಚರಿಸಲು ಅವಕಾಶವನ್ನು ಕೋರಿದರು. ತೋತನು ಅವರಿಗೆ ತಪಸ್ಸು ಮಾಡಲು ಸ್ಥಳವನ್ನು ಕೊಟ್ಟನು. ರೋಮಹರ್ಷರು ಶ್ರೀಹರಿಯನ್ನು ಕುರಿತು ತಪಸ್ಸು ಮಾಡಿ ಪ್ರತ್ಯಕ್ಷೀಕರಿಸಿಕೊಂಡರು. ಅನಂತರ ಭಗವನ್ಮೂರ್ತಿಯನ್ನು ಅಲ್ಲಿ ಪ್ರತಿಷ್ಠಾಪಿಸಿ ತೋತನ ಉಪಕಾರನ್ನು ನೆನೆದು ಭಗವನ್ಮೂರ್ತಿಗೆ `ತೋತಾದ್ರೀಶ` ಎಂದು ಹೆಸರಿಟ್ಟರು. ದಾಸರು ಈ ಸುಳಾದಿಯಲ್ಲಿ ತೋತಾದ್ರೀಶನ ಅಲಂಕಾರವನ್ನು ಬಣ್ಣಿಸಿದ್ದಾರೆ. ವಿಜಯದಾಸರು ತೋತಾದ್ರಿಯನ್ನು ಕುರಿತು `ನೋಡಿ ಧನ್ಯನಾದೆನೊ ತೋತಾದ್ರೀಶನ; ದೀನ ಬಂಧು ನಿನ್ನನ್ನೇ ನೆರೆ ನಂಬಿದೆ; ಅಚ್ಯುತಾನಂತ ಭಾರ್ಗವಿರಮಣ` ಎಂದು ಮೂರು ಕೃತಿಗಳನ್ನು ರಚಿಸಿರುವರು. ತೋತಾದ್ರಿಯಲ್ಲಿರುವ ನದಿಗೆ ರೋಮಹರ್ಷತೀರ್ಥ ಎನ್ನುತ್ತಾರೆ. ತೋತಾದ್ರಿಗೆ ಮಹೇಂದ್ರಾಚಲ ಎಂದು ಮತ್ತೊಂದು ಹೆಸರುಂಟು. ತೋತಾದ್ರಿಯಲ್ಲಿ ಭಗವಂತನಿಗೆ ಮಜ್ಜನ ಮಾಡಿದ ಎಣ್ಣೆಯನ್ನು ಒಂದು ಬಾವಿಯಲ್ಲಿ ಸಂಗ್ರಹಿಸಿಡುತ್ತಿದ್ದು ಇದರ ಲೇಪನದಿಂದ ಸಕಲ ವ್ಯಾಧಿಗಳೂ ನಿವಾರಣೆಯಾಗುವುದೆಂದು ಭಕ್ತರು ಭಾವಿಸುತ್ತಾರೆ. ತೋತಾದ್ರಿಯು ತಿರುನೆಲ್ವೆಲಿ ಮತ್ತು ನಾಗರಕೊಯಿಲ್ ಮಾರ್ಗದಲ್ಲಿರುವ ಒಂದು ಸ್ಥಳ.

🙏ಶ್ರೀ ಕೃಷ್ಣಾರ್ಪಣಮಸ್ತು🙏

*****