Showing posts with label ಪತಿಯೆ ಪರದೇವತೆಯು ಸತಿಯರಿಗೆ ಜಗದಿ gopalakrishna vittala. Show all posts
Showing posts with label ಪತಿಯೆ ಪರದೇವತೆಯು ಸತಿಯರಿಗೆ ಜಗದಿ gopalakrishna vittala. Show all posts

Monday, 2 August 2021

ಪತಿಯೆ ಪರದೇವತೆಯು ಸತಿಯರಿಗೆ ಜಗದಿ ankita gopalakrishna vittala

ಪತಿಯೆ ಪರದೇವತೆಯು ಸತಿಯರಿಗೆ ಜಗದಿ

ಮತಿಯರಿತು ಭಜಿಸಿ ಪರಗತಿಯ ಸಾರುವುದು ಪ.


ಉದಯಕಾಲದೊಳೆದ್ದು ಸದಮಲ ಶುಧ್ಧಿಯಲಿ

ಪದುಮನಾಭನ ಪಾದ ಮನದಿ ಸ್ಮರಿಸುತಲಿ

ಹೃದಯಸ್ಥ ಹರಿಯೆ ಪತಿ ಹೃದಯದಲಿರುವನು ಎಂದು

ಮುದದಿಂದ ನಮಿಸಿ ಪತಿ ಪದಕರ್ಪಿಸುವುದು 1

ಆದರದಲಿ ಪತಿಯ ಪಾದವನೆ ತೊಳೆದು ಆ

ಸ್ವಾದೋದಕವ ಪಾನಗೈದು ಸುಖಿಸುವುದು

ವೇದಗೋಚರ ಹರಿಯೆ ನೀ ದಯವ ಮಾಡೆಂದು

ಆದರದಿ ಪತಿಯ ಮನವರಿತು ನುಡಿಯುವುದು 2

ಸ್ವಚ್ಛದಲ್ಲಿ ಮನದ ತುಚ್ಛ ವಿಷಯವ ತೊರೆದು

ಇಚ್ಛೆಯಿಂದಲಿ ಹರಿಯ ನಾಮಗಳ ಭಜಿಸಿ

ಅಚ್ಯುತಾನಂತ ಗೋವಿಂದನೆನ್ನುತ ಸತತ

ಮಚ್ಚಾದ್ಯನೇಕ ಅವತಾರ ನೆನೆಯುವುದು 3

ಪತಿಯೆ ಹರಿಯೆಂದರಿತು ಪತಿಯೆ ಗುರುವೆಂದರಿತು

ಪತಿಯ ಪೂಜೆಯನು ಅತಿ ಹಿತದಿ ಗೈಯ್ಯುವುದು

ಪತಿಯಂತರ್ಗತನೆ ಎನ್ನತಿಶಯದಿ ಪೊರೆಯೆಂದು

ಪತಿವ್ರತವ ನಡೆಸುತಲಿ ಹಿತದಿ ಬಾಳುವುದು 4

ಪತಿಯ ನಿಂದಕಳಿಗೆ ಗತಿಯಿಲ್ಲ ಪರದಲ್ಲಿ

ಅತಿ ಬಾಧೆಪಡಿಸುವನು ಯಮನು ನಿರ್ದಯದಿ

ಪತಿವ್ರತವ ಸಾಧಿಸುವ ಸತಿಯರಿಗೆ ಅನವರತ

ಚ್ಯುತರಹಿತ ಪದವೀವ ಗೋಪಾಲಕೃಷ್ಣವಿಠಲ5

****