ನಿಜದಲ್ಲಿ ಭಕ್ತ ರಕ್ಷಕ ಗಜ ವರದ ||ಪ ||
ಅಜಮಿಳನು ಸಾವಿನಂಚಿನಲಿ ಕರೆದರು ಬಂದು|
ಸರಸಿಜ ದಳ ನೇತ್ರ ಸಲಹಿದೆಯೊ ಭಜಕ ಜನ ಪ್ರಿಯ||ಅಪ ||
ಕಾಲ ಕರ್ಮ ಕೂಡಿಬಂದು ತಾಯಿಯ ಗರ್ಭದಿ ಜನಿಸಿ ಬಂದೆ|
ಕಾಲು ಕೈಯ ಚಲಿಸಲಾರದೆ ಯಾತನ ಸಹಿತ ನಾಗಿ||
ಕಾಲ ನವಮಾಸ ಕಳೆದೆನೋ ಹರಿಯೇ|
ಸಕಲಕ್ಕೆ ನೀನೇ ಕಾರಣ ಎಂಬುದ ಅರಿಯದೆ ಮೂರ್ಛೆಯಲಿ ಕಳೆದೆ||1||
ತಾಯಿಯ ಉದರದಿಂದ ಹೊರ ಬಂದೆ ರೋದಿಸುತ|
ಬಾಯಿಯಲ್ಲಿ ಅಕ್ಕರೆಯ ಮೊಲೆ ಹಾಲು ಹೀರುತ ಬೆಳೆದೆ||
ಮಾಯೆ ಆವರಿಸೆ ಬಾಲ್ಯ ಕಳೆಯಿತು ಆಟ ಪಾಠಗಳಲ್ಲಿ|
ಕಾಯ ಬಲಿಯಿತು ಯೌವ್ವನದ ಮದದಲಿ ||2||
ಅಂಗನೆಯ ವಡನಾಟ ಕಾಮ ಕೂಟದಲಿ| ಸಂದಿತು ಪ್ರಾಯ-
ಅನಂಗನ ಅಧಿಪತ್ಯದಲ್ಲಿ ಕಳೆಯಿತು ಅರ್ಧಾಯುಷ್ಯ ಇನ್ನು||
ಹಿಂಗದೆ ಹೋಯಿತು ಜೀವನದ ಆಸೆ|
ಮಂಗನಂತಿದೆ ಮನವಿನ್ನು ಸತ್ಸಂಗಕ್ಕೆ ಎಳಸಲಿಲ್ಲವೋ ||3||
ನವದ್ವಾರ ಪುರವೀ ದೇಹ ಜೀರ್ಣ ಆಗಿಹುದು|
ಜೀವನವನ್ನೆಲ್ಲ ಮೋಜಿನಲ್ಲಿ ಕಳೆಯದೆ||
ಯಾವ ಕ್ಷಣದಲೂ ನಿನ್ನ ಸೇವಿಸಿದ ನೆನಪಿಲ್ಲ|
ಜೀವ ತತ್ತರಿಸಿಹುದು ಯಮನ ಭಯಕೆ ||4||
ಸಂಸಾರ ಚಕ್ರದಲ್ಲಿ ತಿರುಗಣೆಯ ಮಡುವಿನಲ್ಲಿ ಇನ್ನೆಷ್ಟು ಜನ್ಮವೋ ತಿಳಿಯೆ|
ಹಿಂಸೆಯಾಗುತಲಿಹುದು ಹೊರಬರುವ ದಾರಿ ಕಾಣದೆ||
ಹಂಸನಾಮಕ ನೀನು ಸಂಚಿತ ಆಗಾಮಿ ಪ್ರಾರಬ್ಧವ ಕಳೆದು|
ಕಂಸಾರಿ ನಿನ್ನಯ ಪುರದಲ್ಲಿ ರುಕ್ಮಿಣಿ- ಕೃಷ್ಣ ನಂದನನ ಇರಿಸು ನಿರಂತರ||5||
*******
ಪಲ್ಲವಿ: ಅಜ ಭವಾದಿಗಳೊಡೆಯ ಸುಜನರ ಪೊರೆವಾ.
ರಚನೆ: ಗುರುರಾಜ ಚಿಟಗುಪ್ಪಿ - ಧಾರವಾಡ
ರಾಗ: ಕೇದಾರ
ಸ್ವರ ಸಂಯೋಜನೆ: ಗುರುರಾಜ ಚಿಟಗುಪ್ಪಿ.
ಅಂಕಿತ: ರುಕ್ಮಿಣಿ- ಕೃಷ್ಣ ನಂದನ.